ಕೋರ್ಟ್ ಆದೇಶ ಉಲ್ಲಂಘನೆ; ಮೂಡಾ ಆಯುಕ್ತರ ಬಂಧನಕ್ಕೆ ಕೇಂದ್ರ ಸಚಿವ ಹೆಚ್.ಡಿಕೆ ಆಗ್ರಹ

ಬೆಂಗಳೂರು,ಅಕ್ಟೋಬರ್,2,2024 (www.justkannada.in): ಸಾಕ್ಷ್ಯ ನಾಶ ಮಾಡಿ ಮುಡಾ ಹಗರಣವನ್ನು ಮುಚ್ಚಿ ಹಾಕಲು ಮಾಡಲು ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ ಎಂದು ನೇರ ಆರೋಪ ಮಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು,  ನ್ಯಾಯಾಲಯಗಳ ಆದೇಶ ಉಲ್ಲಘಿಸಿ ಸಿಎಂ ಪತ್ನಿ ಅವರಿಂದ ನಿವೇಶನಗಳನ್ನು ವಾಪಸ್ ಪಡೆದಿರುವ ಮೂಡಾ ಆಯುಕ್ತರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಜೆಡಿಎಸ್ ಪಕ್ಷದ ಕಚೇರಿ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಮೂಡಾ ಹಗರಣವನ್ನು ಮುಚ್ಚಿ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಲೋಕಾಯುಕ್ತ ಅಧಿಕಾರಿಗಳು ಹಾಗೂ ಮೂಡಾ ಅಧಿಕಾರಿಗಳು ವ್ಯವಸ್ಥಿತವಾಗಿ ಶಾಮೀಲಾಗಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.

ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಅವರ ಪತ್ನಿ 14 ನಿವೇಶನಗಳನ್ನು ವಾಪಸ್ ನೀಡಿರುವ ಕ್ರಮದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅವರು, ನಿವೇಶನಗಳನ್ನು ಹಿಂದಕ್ಕೆ ಪಡೆದಿರುವುದು ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆ ಮತ್ತು ನ್ಯಾಯಾಂಗ ನಿಂದನೆ. ಹೀಗಾಗಿ ಮುಡಾ ಆಯುಕ್ತರನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.

ನಿವೇಶನಗಳನ್ನು ಹಿಂದಕ್ಕೆ ಕೊಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಸಾಕ್ಷ್ಯನಾಶಕ್ಕೆ ಪ್ರಯತ್ನಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿರುವ ಅವರು ತಮ್ಮ ಅಧಿಕಾರದ ಪ್ರಭಾವದಿಂದ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಇದೆಲ್ಲವನ್ನೂ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಮೂಡಾ ತನಿಖೆಯನ್ನು ಜಾರಿ ನಿರ್ದೇಶನಾಲಯ (ED) ಕೈಗೆತ್ತಿಕೊಂಡು ಈಸಿಆರ್ ದಾಖಲು ಮಾಡಿದ ಕೂಡಲೇ ಬಿರುಸಿನ ಬೆಳವಣಿಗೆಗಳು ನಡೆದಿವೆ. ಮಂಗಳವಾರದ ದಿನ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರೇ ಖುದ್ದು ಮುಡಾ ಕಚೇರಿಗೆ ಬಂದು ನಿವೇಶನ ವಾಪಸ್ ನೀಡುವುದಾಗಿ ಹೇಳಿದ್ದರು. ಈ ಹೇಳಿಕೆ ಹೊರಬಿದ್ದ ನಂತರ ಎಲ್ಲಾ ನಿವೇಶನಗಳು ಮೂಡಾ ವಶಕ್ಕೆ ಹೋಗಿವೆ. ಹದಿನಾಲ್ಕು ನಿವೇಶನಗಳ ಕ್ರಯಪತ್ರಗಳು ರದ್ದಾಗಿವೆ ಎಂದು ಮುಡಾ ಆಯುಕ್ತರೇ ಹೇಳಿಕೆ ಕೊಟ್ಟಿದ್ದಾರೆ. ಇದೆಲ್ಲಾ ರಾಕೆಟ್ ವೇಗದಲ್ಲಿ ಆಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಇದೆಲ್ಲವೂ ಸಂಶಯಾಸ್ಪದವಾಗಿ ನಡೆದಿದೆ. ಹೈಕೋರ್ಟ್ ಮತ್ತು ಜನಪ್ರತಿನಿಧಿಗಳ ನ್ಯಾಯಾಯಾಲಗಳ ಆದೇಶಗಳಿವೆ. ಹೀಗಿದ್ದೂ ಮೂಡಾ ಆಯುಕ್ತರು ನಿವೇಶನಗಳನ್ನು ವಾಪಸ್ ಪಡೆಯುವ ನಿರ್ಧಾರ ಮಾಡುತ್ತಾರೆ. ಅವರಿಗೆ ಈ ಅಧಿಕಾರ ಇಲ್ಲ. ಇಲ್ಲಿ ಸಿಎಂ ಅಧಿಕಾರದ ದುರುಪಯೋಗ ಮಾಡಿದ್ದಾರೆ. ಯಾವ ಆಧಾರದ ಮೇಲೆ ವಾಪಸ್ ಪಡೆಯಲಾಗಿದೆ? ಮೂಡಾ ಆಯುಕ್ತರು ತಮ್ಮ ಅಧಿಕಾರ ಮೀರಿ ವರ್ತಿಸಿದಾರೆ. ಹೀಗಾಗಿ ಕೂಡಲೇ ಅವರನ್ನು ಬಂಧಿಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿಕೆ ಆಗ್ರಹಿಸಿದರು.

ಮುಖ್ಯಮಂತ್ರಿಗಳು ಲೋಕಾಯುಕ್ತ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ತನಿಖೆಯಲ್ಲಿ ಸಿಎಂ ಹಸ್ತಕ್ಷೇಪ ಎದ್ದು ಕಾಣುತ್ತಿದೆ. ಯಾರ ಆಸ್ತಿ ಇದು.  ಎಲ್ಲವನ್ನೂ ನಕಲಿ ದಾಖಲೆ ಸೃಷ್ಟಿ ಮಾಡಿ ಜನರನ್ನು ಯಾಮಾರಿಸಿದರು. ಕೋರ್ಟ್ ನಲ್ಲಿ  ನಮ್ಮದೇ ಆಸ್ತಿ ಎಂದಿದ್ದಾರೆ. ಇನ್ನೊಮ್ಮೆ ಜುಜುಬಿ ನಿವೇಶನಗಳು ಎಂದರು. ಅವುಗಳ ಮೌಲ್ಯ ₹62 ಕೋಟಿ ಎಂದರು. ಇಷ್ಟಕ್ಕೂ ಮೂಡಾ ಆಯುಕ್ತ ಎಲ್ಲಿಗೆ, ಯಾರ ಬಳಿಗೆ ಯಾವಾಗ ಬಂದು ನಿವೇಶನಗಳನ್ನು ವಾಪಸ್ ಪಡೆಯುವ ಮನವಿ ಸ್ವೀಕಾರ ಮಾಡಿದರು? ಸಿಎಂ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು  ಹೆಚ್.ಡಿಕೆ ದೂರಿದರು.

Key words: Union Minister, HDK,  demand, arrest, Muda Commissioner