ತಮ್ಮ ಹಳೆ ನೆನಪು ಸ್ಮರಿಸುತ್ತಾ ಸಿಎಂ ಮತ್ತು ಡಿಸಿಎಂರನ್ನು ಕುಸ್ತಿಪಟುಗಳೆಂದ ಸಾಹಿತಿ ಹಂಪಾ ನಾಗರಾಜಯ್ಯ

ಮೈಸೂರು,ಅಕ್ಟೋಬರ್,3,2024 (www.justkannada.in):  ಇಂದು ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ  ಹಂಪಾ ನಾಗರಾಜಯ್ಯ ತಮ್ಮ ಹಳೇ ನೆನಪುಗಳನ್ನು ಸ್ಮರಿಸುತ್ತಾ  ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನ ಕುಸ್ತಿ ಪಟುಗಳಿಗೆ ಹೋಲಿಸಿದ್ದಾರೆ.

ದಸರಾ ಉದ್ಘಾಟಿಸಿ ಮಾತನಾಡಿದ ಸಾಹಿತಿ ಹಂಪಾ ನಾಗರಾಜಯ್ಯ, ಆರನೇ ತರಗತಿ ಓದುವಾಗ ಮೈಸೂರು ಪೈಲ್ವಾನ್ ಟೈಗರ್ ರಾಮು ನೋಡಿದ್ದೆ. ನಾನು ಅವರಂತೆ ಪೈಲ್ವಾನ್ ಆಗಬೇಕೆಂದು ಕೊಂಡಿದ್ದೆ. ಅದಕ್ಕಾಗಿ ಗರಡಿ ಮನೆಗೂ ಹೋಗಿದ್ದೆ. ತಲೆ ತುಂಬ ಗುಂಗುರು‌ ಕೂದಲು ಇತ್ತು. ಉಸ್ತಾದ ಕಾಳಪ್ಪನವರು ಗರಡಿಯಲ್ಲಿ ಕ್ರಾಪು ಸರಿಯಿಲ್ಲ ಎಂದರು. ಸರಿ, ನಾನು ತಲೆ‌ಬೋಳಿಸಿ ಹೋದೆ. ಆಗ ನಮ್ಮ ಚಿಕ್ಕಪ್ಪ, ಎಂತಹ ತಪ್ಪು ಮಾಡಿದೆಯೋ ಬೇಕೂಫ ಎಂದರು. ತಂದೆ ಬದುಕಿರುವಾಗಲೇ ತಲೆ ಬೋಳಿಸಿ ಅಪಶಕುನವಾಯ್ತು. ಗರಡಿ ಮನೆಗೆ ಕಾಲಿಡಬೇಡ ಎಂದು ಬೈದರು. ಅದರಿಂದ ನಾಡಿಗೆ ಒಬ್ಬ ಶ್ರೇಷ್ಠ ಪೈಲ್ವಾನ್‌ ಸಿಗದೆ ಹೋದ. ಆ ಬೇಸರ ನನಗೆ ಈಗಲೂ ಇದೆ ಎಂದು ತಮ್ಮ ಹಳೆಯ ನೆನಪು ಸ್ಮರಿಸಿದರು.

ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ‌ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಷ್ಟೇ ಅಡ್ಡಿ ಆತಂಕಗಳು ಎದುರಾಗುತ್ತಿದ್ದರೂ ಎದೆಗುಂದದೆ ಸೆಡ್ಡು ಹೊಡೆದು ಗಟ್ಟಿಯಾಗಿ ನಿಂತಿದ್ದಾರೆ. ಅವರನ್ನ ನೋಡಿದರೆ ಅವರು ಕೂಡ ಗರಡಿ ಮನೆಯಲ್ಲಿ ಸಾಮು‌ ಮಾಡಿರಬೇಕೆಂದು‌ ಗುಮಾನಿ ಎನ್ನುವ ಮೂಲಕ ಸಿಎಂ – ಡಿಸಿಎಂ ಬಲಷ್ಠರು ಎಂಬ ಸಂದೇಶ ರವಾನಿಸಿದರು.

ಜೀವನವೇ ಒಂದು ದೊಡ್ಡ ಅಖಾಡ. ಅದರಲ್ಲಿ ದೃತಿಗೆಡದೆ ಗಟ್ಟಿಯಾಗಿ ನಿಲ್ಲಬೇಕು. ಸಜ್ಜನಿಕೆ ಸೌಮ್ಯತೆ ದೌರ್ಬಲ್ಯಬಲ್ಲ. ಆದರೆ ಪ್ರತಿಕೂಲ ಪ್ರವಾಹವನ್ನ ಎದುರಿಸುವ ಧೀಶಕ್ತಿ ಪ್ರತಿಯೊಬ್ಬರಲ್ಲೂ ಇರಬೇಕು ಎಂದು ಸಿಎಂ, ಡಿಸಿಎಂಗೆ ಧೈರ್ಯ ತುಂಬಿದರು.

Key words: Hampa Nagarajaya, CM and DCM, wrestlers, mysore dasara