ಮೈಸೂರು,ಅಕ್ಟೋಬರ್,5,2024 (www.justkannada.in): ಹಬ್ಬ, ಉತ್ಸವಗಳು ಸಂಸ್ಕೃತಿ ಬಿಂಬಿಸುವುದಲ್ಲದೇ ಜನರಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದವನ್ನು ತರುತ್ತವೆ ಎಂದು ಶಾಸಕ ಟಿ. ಎಸ್ ಶ್ರೀವತ್ಸ ನುಡಿದರು.
ಜನಮನ ವೇದಿಕೆ ಹಾಗೂ ಮಾಜಿ ನಗರ ಪಾಲಿಕಾ ಸದಸ್ಯ ಮಾ.ವಿ ರಾಮ್ ಪ್ರಸಾದ್ ನೇತೃತ್ವದಲ್ಲಿ ವಾರ್ಡ್ ನಂಬರ್ 55ರ ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಇಂದು ಮತ್ತು ನಾಳೆ ‘ಮನೆ ಮನೆ ದಸರಾ’ ಆಯೋಜನೆ ಮಾಡಲಾಗಿದ್ದು ಶಾಸಕ ಟಿ. ಎಸ್ ಶ್ರೀವತ್ಸ ಉದ್ಘಾಟಿಸಿದರು.
ನಾಡಹಬ್ಬ ದಸರಾ ವೈಭವವನ್ನು ಮನೆಮನೆಯಲ್ಲೂ ಆಚರಿಸುವಂತೆ, ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ದೃಷ್ಟಿಯಿಂದ ಈ ಹಬ್ಬ ಆಚರಿಸಲಾಗುತ್ತಿದೆ. ಚಿತ್ರ ಬಿಡಿಸುವ ಸ್ಪರ್ಧೆ, ಪೌರಕಾರ್ಮಿಕರಿಗೆ ಆಟೋಟ ಸ್ಪರ್ಧೆ, ವಿಶೇಷ ಮಕ್ಕಳಿಗೆ ಆಟೋಟ ಸ್ಪರ್ಧೆ, ಹಾಗೂ ಮಹಿಳೆಯರು ಹಾಗೂ ಮಕ್ಕಳಿಗೆ ಮತ್ತು ಪುರುಷರಿಗೂ ಆಟೋಟ ಸ್ಪರ್ಧೆ ಹಾಗೂ ಮನೆಮನೆ ಗೊಂಬೆ ಕೂರಿಸುವ ಸ್ಪರ್ಧೆ ಮೂಲಕ ಮನೆ ಮನೆ ದಸರಾ ನಡೆಸಲಾಗುತ್ತಿದೆ.
ಇನ್ನು ಮನೆ ಮನೆ ದಸರಾ ಉದ್ಘಾಟನೆ ಬಳಿಕ ಮಾತನಾಡಿದ ಶಾಸಕ ಟಿ. ಎಸ್ ಶ್ರೀವತ್ಸ, ರಾಜ್ಯದ ಅತಿದೊಡ್ಡ ಹಬ್ಬ ನವರಾತ್ರಿ. ಇದು ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ನಮ್ಮದು ಸಾಂಸ್ಕೃತಿಕ ಶ್ರೀಮಂತ ದೇಶವಾಗಿರುವುದರಿಂದ ಇಡೀ ವಿಶ್ವವೇ ಭಾರತವನ್ನು ಅನುಕರಿಸುತ್ತಿದೆ. ದುಷ್ಟ ಶಕ್ತಿಗಳ ಸಂಹಾರದ ಪ್ರತೀಕವಾಗಿ ಪ್ರತಿ ವರ್ಷ ದಸರಾ ಉತ್ಸವ ಆಚರಿಸಿಕೊಂಡು ಬರಲಾಗಿದೆ. ಹಬ್ಬ, ಉತ್ಸವಗಳು ಜನರಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದವನ್ನು ತರುತ್ತವೆ’ ಎಂದರು.
ಮನೆಮನೆ ದಸರಾದಲ್ಲಿ ನೂರಕ್ಕೂ ಹೆಚ್ಚು ಪುರುಷರು, ಮಹಿಳೆಯರು ,ಮಕ್ಕಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ, ನಗರ ಪಾಲಿಕಾ ಮಾಜಿ ಸದಸ್ಯ ಮಾ ವಿ ರಾಮ್ ಪ್ರಸಾದ್, ಬಿಜೆಪಿ ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷ ಗೋಪಾಲರಾಜ್ ಅರಸ್, ಬಿಜೆಪಿ ನಗರ ಉಪಾಧ್ಯಕ್ಷ ಜೋಗಿ ಮಂಜು, ಸೋಮೇಶ್, ಹರೀಶ್ , ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Key words: Inauguration, ‘Mane Mane dasara, MLA, T. S Srivatsa