ಮೈಸೂರು ದಸರಾ: ಈ ಬಾರಿ ಜಂಬೂ ಸವಾರಿ ಮೆರವಣಿಗೆಯಲ್ಲಿ ಕಣ್ಮನ ಸೆಳೆಯಲು ಸ್ತಬ್ಧಚಿತ್ರಗಳು ಸಜ್ಜು

ಮೈಸೂರು,ಅಕ್ಟೋಬರ್,8,2024 (www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆ ಅಕ್ಟೋಬರ್ 12 ರಂದು ನಡೆಯಲಿದ್ದು ಹೀಗಾಗಿ,ಬಂಡೀಪಾಳ್ಯದ ಎಪಿಎಂಸಿ ಯಾರ್ಡ್‌ನ ಆವರಣದಲ್ಲಿ ಸ್ತಬ್ಧಚಿತ್ರಗಳ ತಯಾರಿ ಶುರುವಾಗಿದೆ.

ಈ ಬಾರಿ ಮೊದಲ ಬಾರಿಗೆ ಭಾರತೀಯ ರೈಲ್ವೆ, ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದ ಸಾಧನೆಗಳ ಜತೆಗೆ ಸ್ವಾತಂತ್ರ್ಯಪೂರ್ವ-ನಂತರದಲ್ಲಿ ಸಾಧಿಸಿರುವ ಪ್ರಗತಿಯ ಕುರಿತ ಸ್ತಬ್ಧಚಿತ್ರಗಳು ಗಮನ ಸೆಳೆಯಲಿವೆ.  ಹೊಸ ಹೊಸ ಸಂಶೋಧನೆಗಳ ಮೂಲಕ ಆಹಾರ,ಪೌಷ್ಠಿಕಾಂಶದ ಆಹಾರ, ತಂತ್ರಜ್ಞಾನಗಳನ್ನು ಪರಿಚಯಿಸುತ್ತಿರುವ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯವು ಈ ಬಾರಿ ತನ್ನ ಸಾಧನೆಗಳ ಅನಾವರಣ ಮಾಡಲಿದೆ. ಎಂಎಸ್‌ ಎಂಇಗಾಗಿ 450ಕ್ಕೂ ಹೆಚ್ಚು ಸಂಶೋಧನೆಗಳನ್ನು ಅಭಿವೃದ್ಧಿಪಡಿಸಿರುವುದು,ಸುರಕ್ಷಿತ,ಸ್ವಾದಿಷ್ಟಕರ ಮತ್ತು ಆರೋಗ್ಯಕರ ಆಹಾರ ಒದಗಿಸುವುದು ಮೂಲಮಂತ್ರದ ಬಗ್ಗೆ ಸಾರ್ವಜನಿಕರ ಮುಂದೆ ತೆರೆದಿಡುವಂತೆ ಮಾಡಲಿದೆ.

ಮೈಸೂರು ರೇಷ್ಮೆಗಳನ್ನು ಉತ್ಪಾದನೆ ಮಾಡುವಂತಹ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದಿಂದ ಹೊರ ತರುತ್ತಿರುವ ಅಪ್ಪಟ ಜರಿ ಸೀರೆಗಳ ನೋಟವನ್ನು ಸೆರೆದಿಡುವಂತಹ ಸ್ತಬ್ಧಚಿತ್ರ, ಮೈಸೂರು ಸ್ಯಾಂಡಲ್ ಸೋಪ್, ಗಂಧದಕಡ್ಡಿ, ಕಲಾಕೃತಿಗಳನ್ನು ಬಿಂಬಿಸುವಂತಹ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಸ್ತಬ್ಧಚಿತ್ರ ಪ್ರದರ್ಶನವಾಗಲಿದೆ.

ಇನ್ನು ದಶಕದ ಹಿಂದೆ ಮಾನ್ಯತೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಈಗ ಪುಟಿದೆದ್ದು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದಿಂದ ಎ ಗ್ರೇಡ್ ಮಾನ್ಯತೆ ಪಡೆದುಕೊಂಡಿರುವ ಸಾಧನೆಯನ್ನು ದೇಶ-ವಿದೇಶದ ವಿದ್ಯಾರ್ಥಿಗಳಿಗೆ ಮುಟ್ಟಿಸುವ ಕುರಿತು ಸ್ತಬ್ದಚಿತ್ರದಲ್ಲಿ ಬಿಂಬಿಸಲಾಗುತ್ತಿದೆ

ರಾಜ್ಯದ 31 ಜಿಲ್ಲೆಗಳಿಂದಲೂ ಸ್ತಬ್ಧಚಿತ್ರಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಲಿದ್ದು, ಕೋಲಾರದ ಕೋಟೆಲಿಂಗೇಶ್ವರ ದೇವಸ್ಥಾನ, ದಕ್ಷಿಣಕನ್ನಡದ ಕರಾವಳಿಯ ವಾಣಿಜ್ಯ ಮತ್ತು ಪ್ರವಾಸೋದ್ಯಮ ಬಿಂಬಿಸುವ, ಹಾಸನ ಜಿಲ್ಲೆಯ ವಿಶ್ವಪರಂಪರೆಯ ಬೇಲೂರು ಚೆನ್ನಕೇಶವ ದೇವಾಲಯ, ಹಳೇಬೀಡು ಹೊಯ್ಸಳೇಶ್ವರದೇವಾಲಯ, ದಾವಣಗೆರೆ ಜಿಲ್ಲೆಯ ನಾವು ಮನುಜರು, ಗದಗ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯ, ಕೊಪ್ಪಳದ ಹುಲಿಗೆಮ್ಮ ದೇವಿ ದೇವಸ್ಥಾನ,ಕಿನ್ನಾಳೆ ಕಲೆ, ಇಟಗಿ ದೇವಸ್ಥಾನ, ಬೀದರ್ ಜಿಲ್ಲೆಯಚೆನ್ನಬಸವಪಟ್ಟದೇವರು, ಚಾಮರಾಜನಗರ ಜಿಲ್ಲೆಯ ಸೋಲಿಗರ ಸೊಗಡು ಮ್ಮೆ ಬಂದು ನೋಡು, ಕೊಡಗು ಜಿಲ್ಲೆಯ ಭೂಸಂರಕ್ಷಣೆ,ಹಾರಂಗಿ ಜಲಾಶಯ, ಕಾಫಿ,ಕಾಳುಮೆಣಸು,ಆನೆ ಕ್ಯಾಂಪ್‌ ಅನ್ನು ಜಗತ್ತಿನ ಎದುರು ತೆರೆದಿಡುವಂತೆ ಮಾಡಲಿದೆ. ಮುಖ್ಯಮಂತ್ರಿ ತವರು ಜಿಲ್ಲೆಯಿಂದ ಮನುಷ್ಯ  ಜಾತಿ ತಾನೊಂದೆ ವಲಂ ಸಂಸತ್ ಭವನ, ಅನುಭವ ಮಂಟಪ, ಬುದ್ಧ,ಬಸವ,ಅಂಬೇಡ್ಕರ್ ಅವರ ಮಾದರಿಗಳು, ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರ ದೇವಸ್ಥಾನ ಹಾಗೂ ಶಿವನ ಸ್ತಬ್ಧಚಿತ್ರವು ಮೆರವಣಿಗೆಯಲ್ಲಿ ಸಾಗಲಿದೆ.

Key words: Mysore Dasara, Jamboo Savari, tablo