ಜಾತಿಗಣತಿ ಜಾರಿ ವಿಚಾರ: ಆರ್.ಅಶೋಕ್ ಪ್ರಶ್ನೆಗೆ ಖಡಕ್ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಅಕ್ಟೋಬರ್,8,2024 (www.justkannada.in):  ಜಾತಿ ಜನಗಣತಿ ಕುರಿತು ಅಕ್ಟೋಬರ್ 18 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ನಡುವೆ  ಜಾತಿ ಗಣತಿ ವರದಿ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಕೇಳಿರುವ ಹಲವು ಪ್ರಶ್ನೆಗಳಿಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಖಡಕ್ ಉತ್ತರ ಕೊಟ್ಟಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ,  ಸಿಎಂರ ಜಾತಿ ಜನಗಣತಿ ಬಗ್ಗೆ ಬಿಜೆಪಿಗೆ ಯಾವ ತಕರಾರು-ವಿರೋಧ ಇಲ್ಲ, ಅದರ ಅನುಷ್ಠಾನಕ್ಕೆ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ” ಎಂಬ ವಿರೋಧಪಕ್ಷದ ನಾಯಕರಾದ ಅಶೋಕ್ ಅವರ ಹೇಳಿಕೆಯನ್ನು ಓದಿ ಮನಸ್ಸು ನಿರಾಳವಾಯಿತು.

ಅಶೋಕ್ ಅವರೇ, ನಮ್ಮ ಪಕ್ಷದೊಳಗಿನ ತಕರಾರುಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಬೇಡಿ, ಅವುಗಳನ್ನು ನಾವು ಬಗೆಹರಿಸಿಕೊಳ್ಳುತ್ತೇವೆ. ನೀವು ನುಡಿದಂತೆ ನಡೆದರೆ ಜಾತಿ ಜನಗಣತಿ ಜಾರಿಯಾಗಿ ನೀವೇ ಹೇಳಿಕೊಂಡಿರುವ ನಿಮ್ಮ ಪಕ್ಷದ  ಕನಸಿನ “ಅಂತ್ಯೋದಯ’’ ಸಾಕಾರಗೊಳ್ಳುತ್ತದೆ ಎಂಬ ವಿಶ್ವಾಸ ನನಗಿದೆ. ನೀವು ಮಾತ್ರ, ಕೊಟ್ಟ ಮಾತಿಗೆ ತಪ್ಪಿ ನಡೆಯಬಾರದು ಅಷ್ಟೆ ಎಂದು ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.

2018ರಲ್ಲಿ ಸಮೀಕ್ಷೆ ಪೂರ್ಣಗೊಂಡಿದ್ದರೂ ಅಂಕಿಅಂಶಗಳ ಪರಿಶೀಲನಾ ಕಾರ್ಯ ಪೂರ್ಣಗೊಳ‍್ಳದೆ ಇದ್ದ ಕಾರಣ ಆ ಅವಧಿಯಲ್ಲಿ ಕಾಂತರಾಜ್ ಆಯೋಗದ ವರದಿಯನ್ನು ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಇದಕ್ಕೆ ಬೇರೆ ಯಾವ ಕಾರಣಗಳು ಇರಲಿಲ್ಲ. ಈಗ ವರದಿ ಬಿಡುಗಡೆಗೆ ಸಿದ್ಧವಾಗಿದೆ. ಅದನ್ನು ಅಂಗೀಕರಿಸಲು ನಮ್ಮ ಪಕ್ಷ ಮತ್ತು ಸರ್ಕಾರ ಕೂಡಾ ಬದ್ಧವಾಗಿದೆ.

ಅಶೋಕ್ ಅವರೇ, ನಮ್ಮ ಪಕ್ಷದ ಎಲ್ಲ ನಾಯಕರು ತಾತ್ವಿಕವಾಗಿ ಜಾತಿಗಣತಿಯನ್ನು ಒಪ್ಪಿಕೊಂಡಿದ್ದಾರೆ. ಯಾರ ವಿರೋಧವೂ ಇಲ್ಲ. ವಿರೋಧ ಪಕ್ಷಗಳ ಸುಳ್ಳು ಪ್ರಚಾರದಿಂದಾಗಿ ಕೆಲವರಲ್ಲಿ ನಿರಾಧಾರವಾದ ಸಂಶಯಗಳು ಹುಟ್ಟಿಕೊಂಡಿವೆ, ಇನ್ನು ಕೆಲವರಲ್ಲಿ ತಪ್ಪು ಅಭಿಪ್ರಾಯಗಳಿಂದಾಗಿ ಗೊಂದಲಗಳಿವೆ. ಮಠಾಧೀಶರು ಸೇರಿದಂತೆ ಎಲ್ಲರ ಅನುಮಾನ-ಸಂಶಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಂಡು ಜಾತಿ ಗಣತಿ ವರದಿಯನ್ನು ಜಾರಿಗೆ ತರುವ ನಿರ್ಧಾರವನ್ನು ಶೀಘ್ರವಾಗಿ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಕಾಂತರಾಜ್ ಆಯೋಗ ನಡೆಸಿದ್ದ ಜಾತಿಗಣತಿಯ ವರದಿ ಇಲ್ಲಿಯವರೆಗೆ ಬಿಡುಗಡೆಯಾಗಿಲ್ಲ. ನಾನು ಕೂಡಾ ಅದನ್ನು ಓದಿಲ್ಲ. ಹೀಗಿರುವಾಗ ಅಶೋಕ್ ಅವರು ವರದಿ ಬಿಡುಗಡೆಯಾಗುವ ಮೊದಲೇ ಅದು ವೈಜ್ಞಾನಿಕವಾಗಿ ನಡೆದಿಲ್ಲ, ಅದರಲ್ಲಿ ತಪ್ಪುಗಳಿವೆ ಎಂದು ಆರೋಪಿಸುತ್ತಿದ್ದಾರೆ. ವರದಿ ಅವರಲ್ಲಿದೆಯೇ? ಯಾವ ಆಧಾರದಲ್ಲಿ ಅವರು ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎನ್ನುವುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ.

ಈಗ ಏಕಾಏಕಿಯಾಗಿ ವರದಿಯನ್ನು ಬಿಡುಗಡೆಗೊಳಿಸುವ ನಿರ್ಧಾರ ಯಾಕೆ ಎಂದು ಆರ್.ಅಶೋಕ್ ಕೇಳುತ್ತಿದ್ದಾರೆ. ಇದೇನು ದಿಡೀರ್ ನಿರ್ಧಾರ ಅಲ್ಲ, ನಮ್ಮ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದ ಇದರ ಬಗ್ಗೆ ಸಮಾಲೋಚನೆ ನಡೆಸುತ್ತಾ ಬಂದಿದ್ದೇವೆ. ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಉಳ್ಳವರು, ಯಾವುದೇ ಚರ್ಚೆ-ಸಂವಾದ ಇಲ್ಲದೆ ದಿಡೀರ್ ನಿರ್ಧಾರ ಕೈಗೊಳ್ಳುವ ಸರ್ವಾಧಿಕಾರಿ ಧೋರಣೆ ನಮ್ಮದ್ದಲ್ಲ. ಸಾರ್ವಜನಿಕ ತೀರ್ಮಾನಗಳನ್ನು ಸಹಮತ ಮೂಡಿಸುವ ಮೂಲಕ ಕೈಗೊಳ್ಳಬೇಕೆಂಬ ಅಭಿಪ್ರಾಯ ನಮ್ಮದಾಗಿದೆ. ಇದರಿಂದಾಗಿ ಸ್ವಲ್ಪ ವಿಳಂಬವಾಗಿದೆ ಅಷ್ಟೆ.

ಜಾತಿಗಣತಿಯನ್ನು ರಾಜಕೀಯ ದಾಳವಾಗಿ ಬಳಸುವುದು ದಲಿತರು ಮತ್ತು ಹಿಂದುಳಿದವರಿಗೆ ಮಾಡುವ ಅವಮಾನವಲ್ಲವೇ ಎಂದು ಅಶೋಕ್ ಅವರು ಅಮಾಯಕರಂತೆ ಪ್ರಶ್ನಿಸಿದ್ದಾರೆ.

ಸನ್ಮಾನ್ಯ ಅಶೋಕ್ ಅವರೇ, ನಾನು ಮತ್ತೆ ಮತ್ತೆ ಹೇಳುತ್ತಿದ್ದೇನೆ, ಇದು ಕೇವಲ ಜಾತಿ ಜನಗಣತಿ ಅಲ್ಲ, ಇದು ಸರ್ವರ ಒಳಿತಿಗಾಗಿ ನಡೆಸಲಾದ ರಾಜ್ಯದ ಏಳು ಕೋಟಿ ಜನತೆಯ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ. ಇದನ್ನು ಇಲ್ಲಿಯ ವರೆಗೆ ದಲಿತರಾಗಲಿ, ಹಿಂದುಳಿದ ಜಾತಿಯವರಾಗಲಿ ವಿರೋಧಿಸಿಲ್ಲ. ಹೀಗಿರುವಾಗ ಅವರಿಗೆ ಅವಮಾನವಾಗಿದೆ ಎಂದು ಹೇಗೆ ಹೇಳುತ್ತೀರಿ? ಜಾತಿ ಜನಗಣತಿ ವಿರುದ್ಧ ತಳ ಸಮುದಾಯಗಳನ್ನು ಎತ್ತಿಕಟ್ಟುವ ಉದ್ದೇಶ ನಿಮ್ಮದಾಗಿದ್ದರೆ ನಿಮಗೆ ನಿರಾಶೆ ಖಚಿತ ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ ನೀಡಿದ್ದಾರೆ.

ಜಾತಿ ಗಣತಿ ನನ್ನ ಕನಸಿನ ಕೂಸು ಎಂದು ಹೇಳಲು ಯಾವ ಹಿಂಜರಿಕೆಯೂ ಇಲ್ಲ. 1992ರಲ್ಲಿ ಸುಪ್ರೀಂ ಕೋರ್ಟ್ ಮಂಡಲ ವರದಿಗೆ ಸಂಬಂಧಿಸಿದಂತೆ ನೀಡಿದ್ದ ಆದೇಶದಲ್ಲಿ ರಾಜ್ಯದಲ್ಲಿ ಶಾಶ್ವತ ಹಿಂದುಳಿದ ಆಯೋಗವನ್ನು ರಚಿಸಿ ಕಾಲಕಾಲಕ್ಕೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಬೇಕು ಎಂದು ಸೂಚಿಸಿತ್ತು. ಇದರಂತೆ 1995ರಲ್ಲಿ ನಾನು ಹಣಕಾಸು ಸಚಿವನಾಗಿದ್ದಾಗ ರಾಜ್ಯದಲ್ಲಿ ಶಾಶ್ವತ ಹಿಂದುಳಿದ ಜಾತಿಗಳ ಆಯೋಗವನ್ನು ರಚಿಸಿದ್ದೆ. 2014ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಸಮಸ್ತ ಜನತೆಯ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಲು ಆದೇಶ ನೀಡಿದ್ದೆ. ಇದು ದೇಶದಲ್ಲಿಯೇ ಪ್ರಥಮ ಪ್ರಯತ್ನ ಎಂದು ಹೇಳಲು ನನಗೆ ಹೆಮ್ಮೆಯಿದೆ.

ಜಾತಿ ಗಣತಿ ಬಗ್ಗೆ ನನ್ನ ಬದ್ಧತೆಯನ್ನು ಪ್ರಶ್ನಿಸುತ್ತಿರುವ  ಅಶೋಕ್ ಅವರು, ತಮ್ಮ ಪಕ್ಷ ಅಧಿಕಾರದಲ್ಲಿರುವ ಯಾವ ರಾಜ್ಯದಲ್ಲಿಯೂ ಜಾತಿಗಣತಿ ನಡೆಸುವ ಧೈರ್ಯವನ್ನು ಯಾಕೆ ಮಾಡಿಲ್ಲ? ಎನ್ನುವ ಪ್ರಶ್ನೆಗೆ ಉತ್ತರಿಸಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಜಾತಿಗಣತಿ ನಡೆಸುವುದನ್ನು ನಮ್ಮ ಪಕ್ಷ ಪ್ರಣಾಳಿಕೆಯಲ್ಲಿ ಸೇರಿಸಿದೆ. ನಮ್ಮ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಮತ್ತೆ ಮತ್ತೆ ಅದನ್ನು ಒತ್ತಿ ಒತ್ತಿ ಹೇಳುತ್ತಿದ್ದಾರೆ.

ಬಿಜೆಪಿ ಪಕ್ಷಕ್ಕೆ ಜಾತಿಗಣತಿ ಬಗ್ಗೆ ತಕರಾರು ಇಲ್ಲದೆ ಇದ್ದರೆ ಪಕ್ಷದ ನಾಯಕರು ಯಾಕೆ ಇದಕ್ಕೆ ಸಹಮತ ವ್ಯಕ್ತಪಡಿಸದೆ ಅವರನ್ನು ಟೀಕಿಸುತ್ತಿದ್ದಾರೆ.

ಮೀಸಲಾತಿ ಬಗ್ಗೆಯಾಗಲಿ, ಒಟ್ಟು ಸಾಮಾಜಿಕ ನ್ಯಾಯದ ಬಗ್ಗೆಯಾಗಲಿ ಭಾರತೀಯ ಜನತಾ ಪಕ್ಷ ಮತ್ತು ಆರ್ ಎಸ್ ಎಸ್ ನಿಲುವು ಏನು ಎನ್ನುವುದನ್ನು ದೇಶದ ಜನತೆ ಅರ್ಥಮಾಡಿಕೊಂಡಿದ್ದಾರೆ. ನೀವು ಯಾವ ವೇಷ ಧರಿಸಿ, ಬಣ್ಣ ಬಳಿದುಕೊಂಡು ಮಾತನಾಡಿದರೂ ನಿಮ್ಮ ಆಂತರ್ಯದ ಅಭಿಪ್ರಾಯ ಏನೆಂಬುದು ಜನರಿಗೆ ತಿಳಿದಿದೆ.

ಜಾತಿ ಗಣತಿ ಬಗ್ಗೆ ತಕರಾರು ಇಲ್ಲ ಎಂದು ಹೇಳುತ್ತಿರುವ   ಅಶೋಕ್ ಅವರೇ, ನೀವು ಇದೇ ಮಾತನ್ನು ಪ್ರಧಾನಿ  ಪ್ರಧಾನಿ ಮೋದಿ ಅವರಿಗೆ ಹೇಳಿ ರಾಷ್ಟ್ರಮಟ್ಟದಲ್ಲಿ ಜನಗಣತಿಯ ಜೊತೆಯಲ್ಲಿ ಜಾತಿ ಗಣತಿಯನ್ನೂ ನಡೆಸುವಂತೆ ಒತ್ತಡ ಹೇರಿ, ನಿಮ್ಮ ಬದ್ದತೆ ಮತ್ತು ಸತ್ಯಸಂಧತೆಯನ್ನು ಸಾಬೀತುಪಡಿಸಿ. ಇಲ್ಲದೆ ಇದ್ದರೆ ನೀವು ಕೂಡಾ ಇತ್ತೀಚೆಗೆ ನಿಮ್ಮ ಮೇಲೆ ಬಂದಿರುವ ಆರೋಪಗಳಿಂದ ತಪ್ಪಿಸಿಕೊಳ್ಳಲು ವಿನಾಕಾರಣ ಜಾತಿ ಜನಗಣತಿಯ ವಿವಾದವನ್ನು ಪ್ರಸ್ತಾಪಿಸುತ್ತಿದ್ದೀರಿ ಎಂದು ಆರೋಪಿಸಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.

Key words:  CM Siddaramaiah, Caste Census,  implementation, R. Ashok