ಬೆಳ್ಳಂಬೆಳಿಗ್ಗೆ ಬೆಂಗಳೂರಿನಲ್ಲಿ ವರುಣನ ಆರ್ಭಟ: ಹಲವೆಡೆ ಟ್ರಾಫಿಕ್ ಜಾಮ್, ಜನರ ಪರದಾಟ

ಬೆಂಗಳೂರು,ಅಕ್ಟೋಬರ್,15,2024 (www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯಿಂದಲೇ ವರುಣ ಆರ್ಭಟ ಜೋರಾಗಿದ್ದು, ಮುಂಜಾನೆಯಿಂದ ಸುರಿದ ಮಳೆಗೆ ಬೆಂಗಳೂರಿನ ಜನತೆ ತತ್ತರಿಸಿದ್ದಾರೆ.

ಹಲವೆಡೆ ಮರಗಳು ಧರೆಗುಳಿದಿದ್ದು, ಮತ್ತೆ ಹಲವೆಡೆ ರಸ್ತೆಗಳಲ್ಲಿ ನೀರು ನಿಂತಿವೆ. ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲಸ- ಕಾಲೇಜಿಗೆ  ತೆರಳುವವರು ಪರದಾಟ ನಡೆಸುತ್ತಿದ್ದು, ನಿರಂತರ ಮಳೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಟ್ರಾಫಿಕ್ ಜಾಮ್ ನಲ್ಲಿ ಶಾಲಾ ಕಾಲೇಜುಗಳಿಗೆ ತೆರಳಲು ಜನರು ರೈನ್ ಕೋರ್ಟ್, ಛತ್ರಿ ಮೊರೆ ಹೋಗಿದ್ದಾರೆ.

ಮೆಜೆಸ್ಟಿಕ್ ಬಳಿಯ ಓಕಳಿಪುರ ಅಂಡರ್ ಪಾಸ್ ನಲ್ಲಿ ನೀರು ನಿಂತುಕೊಂಡಿದ್ದು ಎರಡು ವಾಹನಗಳು ಕೆಟ್ಟು ನಿಂತಿದೆ. ಇನ್ನು ಮಳೆಯಿಂದಾಗಿ ಹೆಚ್ ಎಂಟಿ  ಲೇಔಟ್​​ನಲ್ಲಿ ಬೃಹದಾಕಾರದ ಮರ ಧರೆಗುರುಳಿದೆ. ಬೆಳಿಗ್ಗೆ 5 ಗಂಟೆ ಸುಮಾರಿಗೆ ಮರ ನೆಲಕ್ಕುರುಳಿದ್ದು, ಮರ ಬಿದ್ದ ಪರಿಣಾಮ ಮನೆ ಮುಂದೆ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ.  ರಾಜ್ಯದಲ್ಲಿ ಇನ್ನೂ ಮುಂದಿನ 5 ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಆಗಲಿದೆ ಎನ್ನಲಾಗಿದೆ.

Key words: Rain, morning, Bengaluru, traffic jams