ನವರಾತ್ರಿ ಸಂದರ್ಭದಲ್ಲೇ ಎರಡನೇ ಮಗು ಹುಟ್ಟಿದ್ದು ಅತಿ ಹೆಚ್ಚು ಸಂತಸ ತಂದಿದೆ- ಸಂಸದ ಯದುವೀರ್

ಮೈಸೂರು,ಅಕ್ಟೋಬರ್,16,2024 (www.justkannada.in):  ಎರಡನೇ ಮಗು ಹುಟ್ಟಿದ್ದು ಅತಿ ಹೆಚ್ಚು ಸಂತಸ ತಂದಿದೆ. ನವರಾತ್ರಿ ಸಂದರ್ಭದಲ್ಲೇ ಮಗು ಜನನ ಖುಷಿ ದುಪ್ಪಟ್ಟು ಮಾಡಿದೆ ಎಂದು ಮೈಸೂರು-ಕೊಡಗು ಸಂಸದ ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಸಂತಸ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಯದುವೀರ್, ಮಗು ಮುಖ ನೋಡಿದಾಗ ಹೆಚ್ಚು ಸಂತಸವಾಯ್ತು. ಮಗು ಹುಟ್ಟಿದರೆ ಯಾರಿಗೆ ತಾನೇ ಖುಷಿ ಆಗೋದಿಲ್ಲ ಹೇಳಿ? ಸೂತಕ ಇದ್ದ ಕಾರಣಕ್ಕೆ ಪುಷ್ಪಾರ್ಚನೆ ಹಾಗೂ ರಥೋತ್ಸವದಲ್ಲಿ ಭಾಗಿಯಾಗಿಲ್ಲ. ಕಂಕಣಧಾರಣೆ ಮಾಡಿಕೊಂಡಿದ್ದ ಕಾರಣ ಪೂಜಾ ವಿಧಿ ವಿಧಾನ ಮುಗಿಸಿದೆ. ಅಲಮೇಲಮ್ಮ ಶಾಪ ವಿಮೋಚನೆ ಕುರಿತು ಹೆಚ್ಚು ಚರ್ಚಿಸಲ್ಲ. ಇಬ್ಬರು ಮಕ್ಕಳ ಪೈಕಿ ಉತ್ತರಾಧಿಕಾರಿ ಬಗ್ಗೆ ಈಗಲೇ ಚಿಂತಿಸಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಹೇಗಿದೆ ಹಾಗೆ ನಡೆದುಕೊಂಡು ಹೋಗಲಿದೆ ಎಂದರು.

ಈಬಾರಿ ಪುಷ್ಪಾರ್ಚನೆ ತಡವಾಗಿ ಆದ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್, ಅಂಬಾರಿಯನ್ನ ನಾವು ತಡವಾಗಿ ನೀಡಲಿಲ್ಲ. ಪುಷ್ಪಾರ್ಚನೆ ತಡವಾಗಲು ನಾವು ಕಾರಣರಲ್ಲ. ಎಲ್ಲವೂ ಕೂಡ ದಾಖಲೆಗಳಲ್ಲಿಯೇ ಇದೆ. ತಪ್ಪು ಯಾರದು ಅಂತ ನಾನು ಚರ್ಚಿಸುವುದಿಲ್ಲ. ಸರಿಯಾದ ಸಂದರ್ಭಕ್ಕೆ ಪುಷ್ಪಾರ್ಚನೆ ಆಗಬೇಕಿತ್ತು ಎಂದರು.

ಮುಡಾ 50:50 ಹಗರಣ  ಸಂಬಂಧ ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರೀಗೌಡ ರಾಜೀನಾಮೆ ನೀಡಿದ್ದಾರೆ. ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ನೇರ ಪಾತ್ರವಿದೆ. ಈ ಕಾರಣಕ್ಕೆ ಅವರು ಸ್ಥಾನದಲ್ಲಿ‌ ಮುಂದುವರಿಯಬಾರದು. ಪಾರದರ್ಶಕ ತನಿಖೆ ಅತ್ಯವಿರುವ ಕಾರಣ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಲಿ. ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಎಂಬುದು ನಮ್ಮ ಆಗ್ರಹ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದರು.

Key words: MP Yaduveer, second, child , born, Happy