ಕಾಲು ಜಾರಿ ಬಿದ್ದು ಮೃತಪಟ್ಟ ವ್ಯಕ್ತಿಯ ಅಂಗಾಗ ದಾನ: ಆಸ್ಪತ್ರೆಗಳಿಗೆ ರವಾನೆ

ಬೆಂಗಳೂರು,ಅಕ್ಟೋಬರ್,16,2024 (www.justkannada.in):  ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ವ್ಯಕ್ತಿಯೊಬ್ಬರ ಕಣ್ಣು, ಹೃದಯ, ಕಿಡ್ನಿ, ಲಿವರ್ ಗಳನ್ನು ನಗರದ 8 ನೇ ಮೈಲಿ ಬಳಿಯ ಪ್ರಕ್ರಿಯ ಆಸ್ಪತ್ರೆಯಿಂದ ನಾರಾಯಣ ಹೃದಯಾಲಯ ಹಾಗೂ ಅಪೊಲೋ ಆಸ್ಪತ್ರೆಗಳಿಗೆ ನೂತನ ತಂತ್ರಜ್ಞಾನದ ಮೂಲಕ ರವಾನಿಸಲಾಯಿತು.

ಮಾಗಡಿ ರಸ್ತೆಯ ಕೆ. ಪಿ ಅಗ್ರಹಾರದ ನಿವಾಸಿ ಕುಮರೇಶ್(57) ಎಂಬುವರೇ ಮೃತಪಟ್ಟ ವ್ಯಕ್ತಿ. ಮನೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತಲೆಗೆ ಪೆಟ್ಟಾಗಿದ್ದ ಕುಮರೇಶ್ ಅವರನ್ನು ಪ್ರಕ್ರಿಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ವೈದ್ಯರು ಮೆದುಳು ನಿಷ್ಕ್ರಿಯವಾಗಿರುವುದನ್ನು ಕುಟುಂಬದವರಿಗೆ ತಿಳಿಸಿದರು. ಹಾಗೆಯೇ ಉಳಿದ ಅಂಗಾಂಗಗಳನ್ನು ದಾನ ಮಾಡಿದರೆ ಇನ್ನು ಹತ್ತಾರು ಜನರಿಗೆ ಜೀವ ಉಳಿಸಬಹುದು ಎಂದು ಕುಟುಂಬದವರಿಗೆ ಮನವರಿಕೆ ಮಾಡಿಕೊಟ್ಟರು.

ಈ ವೇಳೆ ಕುಟುಂಬಸ್ಥರು ಮೃತ ಕುಮರೇಶ್ ಕಣ್ಣು, ಹೃದಯ, ಕಿಡ್ನಿ, ಲಿವರ್ ಸೇರಿದಂತೆ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿದ್ದು, ಕುಟುಂಬದ ಒಪ್ಪಿಗೆ ಮೇರೆಗೆ ತಕ್ಷಣ ಪ್ರಕ್ರಿಯ ಆಸ್ಪತ್ರೆ ವೈದ್ಯರು ಅಂಗಾಂಗಗಳನ್ನು ಬೇರ್ಪಡಿಸಿದರು. ನಾರಾಯಣ ಹೃದಯಾಲಯಕ್ಕೆ ಹೃದಯ ಹಾಗೂ ಇತರೆ ಅಂಗಾಂಗಗಳನ್ನು ಮಲ್ಲೇಶ್ವರಂನ ಅಪೊಲೊ ಆಸ್ಪತ್ರೆಗೆ ನೂತನ ತಂತ್ರಜ್ಞಾನದೊಂದಿಗೆ ಆಂಬ್ಯುಲೆನ್ಸ್ ಮೂಲಕ ರವಾನಿಸಲಾಯಿತು.

ಅಂಗಾಂಗ ದಾನದ ಬಗ್ಗೆ ಮಾತನಾಡಿದ ಮೃತ ಕುಮರೇಶ್ ಪತ್ನಿ ಸೆಲ್ವಿ ಅವರು, ನಮ್ಮ ಪತಿ ಅವರಂತೂ ಉಳಿಯಲಿಲ್ಲ, ಅಂಗಾಂಗಗಳ ದಾನದಿಂದ ಬೇರೆ ಜೀವಗಳು ಉಳಿಯುತ್ತವೆ ಅಂದರೆ ಈ ಕಾರ್ಯ ಪುಣ್ಯ ಎಂದರು.

ಪ್ರಕ್ರಿಯ ಆಸ್ಪತ್ರೆ ಸಿಇಒ ಶ್ರೀನಿವಾಸ್ ಸಿ ಹೆಚ್ ಮಾತನಾಡಿ, ಮೆದುಳು ನಿಷ್ಕ್ರಿಯವಾಗಿ ಮೃತಪಟ್ಟವರ ಎಲ್ಲಾ ಕುಟುಂಬದವರು ಅಂಗಾಂಗಗಳ ದಾನಕ್ಕೆ ಒಪ್ಪುವುದಿಲ್ಲ, ಮೃತ ವ್ಯಕ್ತಿಯ ಅಂಗಾಂಗಳಿಂದ ಬೇರೆಯವರ ಜೀವ ಉಳಿಸಬಹುದು ಎಂಬ ಜಾಗೃತಿಯನ್ನು ಎಲ್ಲರೂ ಅರಿಯಬೇಕು ಎಂದು ಮನವಿ ಮಾಡಿದರು.

ನಾರಾಯಣ ಹೃದಯಾಲಯ ಹಾಗೂ ಅಪೊಲೋ ಆಸ್ಪತ್ರೆಗಳಿಗೆ ಪ್ರತ್ಯೇಕ ಆಂಬುಲೆನ್ಸ್ ಗಳಲ್ಲಿ ಅಂಗಾಂಗಗಳನ್ನು ರವಾನಿಸಲಾಯಿತು.

Key words: Deceased, Organ, Donation, Hospitals