ವೀರಪ್ಪನ್ ಕಪಿಮುಷ್ಠಿಯಿಂದ ಅಣ್ಣಾವ್ರನ್ನು ಬಿಡಿಸಿ ‘ ಶಕ್ತಿ ದೇವತೆ’ ಎಂದು ಕರೆಸಿಕೊಂಡಿದ್ದ ಡಾ.ಭಾನು ವಿರುದ್ಧ ದಾಖಲಾಗಿತ್ತು ವಂಚನೆ ದೂರು : ನಿವೃತ್ತ ಪೊಲೀಸ್ ಮಹಾನಿರ್ದೇಶಕ

 

ಮೈಸೂರು, ಮೇ 14, 2019 : (www.justkannada.in news) : ವರನಟ ಡಾ. ರಾಜ್ ಕುಮಾರ್ ಅವರಿಂದ ‘ ಶಕ್ತಿ ದೇವತೆ ‘ ಎಂದು ಕರೆಸಿಕೊಂಡಿದ್ದ ಡಾ. ಭಾನು ವಿರುದ್ಧ ಬೆಂಗಳೂರಿನ ಪೊಲೀಸ್ ಠಾಣೆಗಳಲ್ಲಿ ವಂಚನೆ ದೂರುಗಳು ದಾಖಲಾಗಿದ್ದದ್ದು ನಿಜ ಎಂದು ಕರ್ನಾಟಕದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಡಿ.ವಿ.ಗುರು ಪ್ರಸಾದ್ ಸ್ಪಷ್ಟಪಡಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಮಂಗಳವಾರ ಅಯೋಜಿಸಿದ್ದ ಡಾ. ಡಿ.ವಿ.ಗುರು ಪ್ರಸಾದ್ ಅವರ ‘ ಗೂಢಚರ್ಯೆಯ ಆ ದಿನಗಳು…’ ಕೃತಿ ಕುರಿತ ಸಂವಾದ ಹಾಗೂ ‘ ಅಪರಾಧ ವರದಿಗಾರಿಕೆ ‘ ಬಗೆಗಿನ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ವೇಳೆ ವರನಟ ಡಾ. ರಾಜ್ ಅಪಹರಣ ಹಾಗೂ ಆನಂತರದ ಬೆಳವಣಿಗೆಗಳು. ಬಿಡುಗಡೆ ಬಳಿಕ ಡಾ.ಭಾನು ಅವರನ್ನು ರಾಜ್ ಕುಮಾರ್ ಶಕ್ತಿ ದೇವತೆ ಎಂದು ಹೊಗಳಿದ್ದು..ಈ ಬಗ್ಗೆ ಪತ್ರಕರ್ತರು ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ.ಡಿ.ವಿ.ಗುರುಪ್ರಸಾದ್, ನರಹಂತಕ ವೀರಪ್ಪನ್ ನ ಬಂಧನದಲ್ಲಿ 108 ದಿನಗಳನ್ನು ಕಳೆದು ಆನಂತರ ಡಾ. ರಾಜ್ ಕುಮಾರ್ ಬಿಡುಗಡೆಗೊಂಡಿದ್ದರು. ಬಹುಶಃ ` ಸ್ಟಾಕ್ ಹೋಂ ಸಿಂಡ್ರೋಮ್ ‘ ನ ಕಾರಣದಿಂದ ರಾಜ್ ಕುಮಾರ್ ಆ ಮಹಿಳೆಯನ್ನು ಹೊಗಳಿರಬೇಕು. ಏಕೆಂದರೆ ರಾಜ್ ಬಿಡುಗಡೆ ಬಳಿಕ ವಿಧಾನಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಡಾ. ರಾಜ್ ಕುಮಾರ್ ಪಕ್ಕದಲ್ಲೇ ಕುಳಿತಿದ್ದ ಈ ಮಹಿಳೆ (ಡಾ.ಭಾನು) ಕಂಡು ನನಗೆ ಆಶ್ಚರ್ಯವಾಯ್ತು. ಅರೇ ಈಕೆ ಏನು ಇಲ್ಲಿ ಎಂದು. ಆದರೆ ರಾಜ್ ಕುಮಾರ್ ಬಿಡುಗಡೆ ಸಂಭ್ರಮದಲ್ಲಿ ಆ ಬಗ್ಗೆ ಹೆಚ್ಚು ಗಮನ ಹರಿಸಲು ಆಗಲಿಲ್ಲ. ಜತೆಗೆ ನಾನಾಗ ವಾರ್ತ ಮತ್ತು ಪ್ರಚಾರ ಇಲಾಖೆಯ ನಿರ್ದೇಶಕನಾಗಿದ್ದೆ. ಹಾಗಾಗಿ ಡಾ.ಭಾನು ವಿರುದ್ಧದ ವಂಚನೆ ದೂರುಗಳು ಹಾಗೂ ಅವುಗಳ ಪ್ರಗತಿಯ ಬಗ್ಗೆ ಹೆಚ್ಚೇನು ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ನೆನಪಿನ ಮೆರವಣಿಗೆ :

ನಿವೃತ್ತ ಪೊಲೀಸ್ ಅಧಿಕಾರಿ ಡಾ.ಡಿ.ವಿ.ಗುರುಪ್ರಸಾದ್ ಅಧಿಕಾರವಧಿಯಲ್ಲಿ ನಿರ್ವಹಿಸಿದ ಪಾತ್ರಗಳ ಬಗ್ಗೆ ಹಾಗೂ ಅನುಭವಗಳನ್ನು ಪತ್ರಕರ್ತರ ಜತೆ ಹಂಚಿಕೊಂಡರು. ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ಅವಧಿಯ ಮೊದಲ ಸಮ್ಮಿಶ್ರ ಸರಕಾರದ ಕಾರ್ಯ ವೈಖರಿ ಹಾಗೂ ಪ್ರಸ್ತುತ ರಾಜ್ಯದಲ್ಲಿನ ಸಮ್ಮಿಶ್ರ ಸರಕಾರದ ಬಗೆಗೂ ಅಭಿಪ್ರಾಯ ವ್ಯಕ್ತಪಡಿಸಿದರು.

ಗುಪ್ತಚರ ಇಲಾಖೆ ಮುಖ್ಯಸ್ಥರಾಗಿದ್ದ ವೇಳೆ ನಿರ್ವಹಿಸಿದ ಕಾರ್ಯಗಳು, ವೈಫಲ್ಯಗಳು ಎಲ್ಲವನ್ನು ಮುಕ್ತವಾಗಿ ಹಂಚಿಕೊಂಡ ಡಾ.ಡಿ.ವಿ.ಗುರುಪ್ರಸಾದ್, ಗುಪ್ತಚರ ಇಲಾಖೆ ಆಡಳಿತ ಪಕ್ಷದ ಅಥವಾ ಸರಕಾರದ ಏಜೆನ್ಸಿಯಂತೆ ಕಾರ್ಯ ನಿರ್ವಹಿಸುತ್ತದೆ ಎಂಬ ಅರೋಪವನ್ನು ನಿರಾಕರಿಸಿದರು. ಜತೆಗೆ ಕೇವಲ ರಾಜಕೀಯ ನಾಯಕರ ನಡೆಗಳ ಬಗೆಗೆ ಮಾತ್ರ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತದೆ ಎಂಬ ಅಭಿಪ್ರಾಯಕ್ಕೂ ಸಹಮತ ವ್ಯಕ್ತಪಡಿಸಲಿಲ್ಲ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ,ರಂಗಸ್ವಾಮಿ ಮಾತನಾಡಿ, ಅಪರಾಧ ವರದಿಗಾರಿಕೆ ಬಗೆಗೆ ಬೆಳಕು ಚೆಲ್ಲಿದರು. ಕೆಲವೊಮ್ಮೆ ತನಿಖಾಧಿಕಾರಿಗೆ ಗೋಚರಿಸದ ಅನೇಕ ಮಾಹಿತಿಗಳು ಪತ್ರಿಕೆಗಳ ವರದಿ ಮೂಲಕ ಅರಿವಿಗೆ ಬರುತ್ತದೆ. ಇದು ಆ ಪತ್ರಿಕೆಯ ಕ್ರೈಂ ವರದಿಗಾರನ ತಾಖತ್ತು. ಇಂಥ ವರದಿಗಾರಿಕೆಯನ್ನು ಆಂದೋಲನ ಪತ್ರಿಕೆಯಲ್ಲಿ ಈ ಹಿಂದೆ ಕ್ರೈಮ್ ವರದಿಗಾರರಾಗಿದ್ದ ಅಂಶಿ ಪ್ರಸನ್ನ ಹಾಗೂ ಹಿರಿಯ ಪತ್ರಕರ್ತರಾದ ಕೃಷ್ಣವಟ್ಟಂ ಅವರ ವರದಿಗಳಲ್ಲಿ ಕಾಣುತ್ತಿದ್ದೆ ಎಂಬುದನ್ನು ಸ್ಮರಿಸಿಕೊಂಡರು.

ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತರ ಸಂಘಧ ಅಧ್ಯಕ್ಷ ಸಿ.ಕೆ.ಮಹೇಂದ್ರ ವಹಿಸಿದ್ದರು. ವಿಜಯಕರ್ನಾಟಕ ಪತ್ರಿಕೆ ಮುಖ್ಯ ವರದಿಗಾರ ಕೂಡ್ಲಿ ಗುರುರಾಜ್ ಪ್ರಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಸುಬ್ರಮಣ್ಯ ಕಾರ್ಯಕ್ರಮ ನಿರೂಪಿಸಿದರು.

key words : mysore-press-meet-d.v.guruprasad-police-rajkumar-bhanu

Bhanu: the missing link in Rajakumar’s kidnap saga