ತುಮಕೂರಿನಲ್ಲಿ ವಿಮಾನ ನಿಲ್ದಾಣ ಮಾಡಿದ್ರೆ ಅನುಕೂಲ-ಗೃಹ ಸಚಿವ ಜಿ.ಪರಮೇಶ್ವರ್

ಬೆಂಗಳೂರು, ಅಕ್ಟೋಬರ್,18,2024 (www.justkannada.in): ಬೆಂಗಳೂರಿನ ಭಾಗವಾಗಿ ತುಮಕೂರು ಬೆಳೆಯುತ್ತಿದ್ದು, ವಿಮಾನ ನಿಲ್ದಾಣ‌ ಮಾಡಿದರೆ ಅನುಕೂಲವಾಗಲಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಹೇಳಿದರು.

ಸದಾಶಿವನಗರದ‌ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ  ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, 20 ಸಾವಿರ ಎಕರೆ ಜಾಗದಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ತುಮಕೂರಿನಲ್ಲಿ ನಿರ್ಮಾಣವಾಗುತ್ತಿದೆ. ಮೊದಲ ಮತ್ತು ಎರಡನೇ ಹಂತದ ಕಾಮಗಾರಿ ಮುಗಿದಿದೆ. 150 ಕೈಗಾರಿಕೆಗಳು ಹಾಗೂ ಜಪಾನ್ ಟೌನ್‌ ಶಿಪ್ ಬರುತ್ತಿದೆ. ಎಚ್‌ ಎಎಲ್ ಹೆಲಿಕ್ಯಾಪ್ಟರ್ ಫ್ಯಾಕ್ಟರಿ ಕೆಲಸ ಆರಂಭಿಸಿದೆ. ಇನ್ನೂ ಹಲವು ದೊಡ್ಡ ಕೈಗಾರಿಕೆಗಳು ಬರಲಿವೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ವಿಮಾನ ನಿಲ್ದಾಣ ಮಾಡಿದರೆ ಉತ್ತಮ ಎಂಬುದನ್ನು ತಿಳಿಸಲಾಗಿದೆ‌ ಎಂದರು.

ಮುಂದಿನ ದಿನಗಳಲ್ಲಿ ತುಮಕೂರು ಅಭಿವೃದ್ಧಿಗೆ ಬೇರೆಬೇರೆ ಹೊಸ ಯೋಜನೆಗಳನ್ನು ಇಟ್ಟುಕೊಳ್ಳಲಾಗಿದೆ. ತುಮಕೂರು ಬೆಂಗಳೂರಿನ ಒಂದು ಭಾಗವಾಗಿ ಬೆಳೆಯುತ್ತಿದ್ದು ಗ್ರೇಟರ್ ಬೆಂಗಳೂರು ಎಂದು ಪರಿಗಣಿಸುವಂತೆ ಕೇಳಿಕೊಳ್ಳಲಾಗಿದೆ.‌ ನೆಲಮಂಗಲ, ದಾಬಸ್‌ ಪೇಟೆವರೆಗೆ ಬೆಂಗಳೂರು ಬೆಳೆದಿದೆ. ತುಮಕೂರುವರೆಗೆ ಮೆಟ್ರೋ ರೈಲು ವಿಸ್ತರಣೆಗೂ ಪ್ರಸ್ತಾವನೆ ಸಲ್ಲಿಸಲಾಗಿದೆ.‌ ತುಮಕೂರನ್ನು ಗ್ರೇಟರ್ ಬೆಂಗಳೂರು ಎಂದು ಕರೆಯಬಹುದು. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು‌ ಎಂದು ತಿಳಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರನ ವಿರುದ್ಧದ‌ ಪ್ರಕರಣದ‌ ಕುರಿತು ಪ್ರತಿಕ್ರಿಯಿಸಿ, ದೂರು ಬಂದಾಗ ಗಂಭೀರವಾಗಿ ತೆಗೆದುಕೊಳ್ಳಬೇಕಲ್ಲವೇ? ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಗೋಪಾಲ್ ಜೋಷಿ ಎಂಬುವರು ತಲೆಮರೆಸಿಕೊಂಡಿದ್ದು ತನಿಖೆ ಮುಂದುವರಿದಿದೆ. ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಈ ಪ್ರಕರಣದಲ್ಲಿ ಪ್ರಹ್ಲಾದ್ ಜೋಷಿ ಅವರ ಪಾತ್ರ ಇರುವುದು ನನಗೆ ಗೊತ್ತಿಲ್ಲ. ಬಂಧಿತರನ್ನು ವಿಚಾರಣೆ ನಡೆಸಿ, ಹೇಳಿಕೆ ಪಡೆದಾಗ ಯಾರಿದ್ದಾರೆ ಎಂಬುದು ಗೊತ್ತಾಗುತ್ತದೆ. ತನಿಖೆಗೆ ಮೊದಲು ಹೇಳುವುದು ಸರಿಯಲ್ಲ. ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಗೊತ್ತಾಗಲಿದೆ. ವರದಿ ಬಾರದೆ ಏನು ಹೇಳಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಡಿಜಿ ಮಾಲಿನಿ ಕೃಷ್ಣಮೂರ್ತಿ ಅವರು ಭೇಟಿ ನೀಡಿದ್ದಾರೆ. ಇವತ್ತು ವರದಿ ನೀಡಲಿದ್ದಾರೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಆಂತರಿಕವಾಗಿ ಗಂಭೀರ ವಿಚಾರ ಆಗಿರುವುದರಿಂದ ಭೇಟಿ ನೀಡಿ ವರದಿ ನೀಡುವಂತೆ‌ ರಾಜ್ಯ ಬಂಧಿಖಾನೆ ಮತ್ತು ಸುಧಾರಣಾ ಸೇವೆಗಳ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದೇನೆ ಎಂದರು.

ಜಾತಿಗಣತಿ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ್ ಅವರು, ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಅವರನ್ನ ಯಾವ ವಿಚಾರಕ್ಕೆ ಭೇಟಿ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಸರ್ಕಾರವು 160 ಕೋಟಿ ರೂ. ಖರ್ಚು ಮಾಡಿ ಜಾತಿಗಣತಿ ಸಮೀಕ್ಷೆ ನಡೆಸಿದೆ. ಅಷ್ಟೊಂದು ಹಣ ಖರ್ಚು ಮಾಡಿದ ಮೇಲೆ ಜನಗಳಿಗೆ ಗೊತ್ತಾಗಬೇಕಲ್ಲವೇ? ಮುಂದೆ ಏನು ಮಾಡುತ್ತೇವೆ ಎಂಬುದು ಎರಡನೇ ಪ್ರಶ್ನೆ. ಯಾವ ಸಮುದಾಯಗಳು ಎಷ್ಟೆಷ್ಟು ಸಂಖ್ಯೆಯಲ್ಲಿದ್ದಾರೆ ಎಂದು ಜನಸಮುದಾಯಕ್ಕೆ ತಿಳಿಸುವ ವರದಿಯನ್ನು ಸಚಿವ ಸಂಪುಟದ ಮುಂದೆ ತರುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ‌. ಯಾವುದೇ ವಿಚಾರವನ್ನು ನೂರಕ್ಕೆ ನೂರರಷ್ಟು ಜನ ಒಪ್ಪಿಕೊಳ್ಳುವುದಿಲ್ಲ. ಪರ-ವಿರೋಧ ಇದ್ದೇ ಇರುತ್ತಾರೆ ಎಂದು ಹೇಳಿದರು.

ಪೊಲೀಸ್ ದಂಪತಿ ವರ್ಗಾವಣೆ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಈಗಾಗಲೇ ನೂರಕ್ಕೂ ಹೆಚ್ಚು ಪೊಲೀಸ್ ದಂಪತಿ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ. ಕೆಲವರಿಗೆ ತೊಂದರೆಯಾದಾಗ ಬಂದು ನನಗೆ ಮನವಿ ಸಲ್ಲಿಸುತ್ತಾರೆ. ಅದನ್ನು ಪರಿಶೀಲಿಸಿ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

Key words: airport, Tumkur, beneficial – Home Minister, G. Parameshwar