ಮೈಸೂರು: ಹುಣ್ಣಿಮೆ ವಾಮಾಚಾರಕ್ಕೆ ಯುವಕ ಬಲಿ

ಮೈಸೂರು, ಅಕ್ಟೋಬರ್,18,2024 (www.justkannada.in): ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ  ಮೂಢನಂಬಿಕೆ ,ಕಂದಾಚಾರ ,ವಾಮಾಚಾರ ಹೆಚ್ಚಾಗಿದ್ದು ಈ ಮಧ್ಯೆ ಹುಣ್ಣಿಮೆ ವಾಮಾಚಾರಕ್ಕೆ 43 ವರ್ಷದ ವ್ಯಕ್ತಿ ಬಲಿಯಾಗಿದ್ದಾರೆ.

ನಂಜನಗೂಡು ತಾಲೂಕಿನ  ಮಡುವಿನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಮೀಪದಲ್ಲಿ ಈ ಘಟನೆ ನಡೆದಿದೆ. ಮಲ್ಕುಂಡಿ ಗ್ರಾಮದ ಸದಾಶಿವ (43 ) ಮೃತ ವ್ಯಕ್ತಿ. ಸದಾಶಿವ ಗಾರೆ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳನ್ನು ಸಾಕುತ್ತಿದ್ದರು. ಈ ನಡುವೆ  ಕೊಲೆಗಡುಕರು ಸದಾಶಿವ ಅವರ ಕತ್ತು ಕೊಯ್ದು ಹತ್ಯೆ ಮಾಡಿದ್ದಾರೆ. ಮಡುವಿನಹಳ್ಳಿ ಗ್ರಾಮದ ಪ್ರೌಢಶಾಲೆಯ ಸಮೀಪದಲ್ಲಿರುವ  ತಮ್ಮ ಜಮೀನಿಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಕಣ್ಣಿಗೆ ಬಿದ್ದು ಪ್ರಕರಣ ಬೆಳಕಿಗೆ ಬಂದಿದೆ.

ಪ್ರೌಢಶಾಲೆಯ ಸಮೀಪದ ನೀರು ಹರಿಯುವ ಹಳ್ಳದ ಪೊದೆಯಲ್ಲಿ ರಕ್ತಸ್ರಾವದಿಂದ  ನರಳುತ್ತಿದ್ದ ಯುವಕನನ್ನು ನೋಡಿದ ವ್ಯಕ್ತಿ ಒಬ್ಬರು ಗ್ರಾಮಸ್ಥರಿಗೆ ವಿಚಾರ ಮುಟ್ಟಿಸಿದ್ದಾರೆ. ಘಟನಾ ಸ್ಥಳದಲ್ಲಿ ಬಾರಿ ಪ್ರಮಾಣದಲ್ಲಿ ರಕ್ತ ಚೆಲ್ಲಿದ್ದು ಎಲೆ ಮತ್ತು ಅಡಿಕೆಯ ಜೊತೆ 101ರೂ ಹಣವನ್ನು ಇಡಲಾಗಿದೆ ಹಾಗೂ ನಿಂಬೆಹಣ್ಣುಗಳು ಸ್ಥಳದಲ್ಲಿ ಪ್ರತ್ಯಕ್ಷವಾಗಿವೆ.

ಕೂಡಲೇ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ಸದಾಶಿವ ಅವರ  ಜೀವ ಉಳಿಸಲು ಆಂಬುಲೆನ್ಸ್ ಮೂಲಕ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲು ಸಾರ್ವಜನಿಕರು ಮುಂದಾಗಿದ್ದು, ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸದಾಶಿವ ಮೃತಪಟ್ಟಿದ್ದಾರೆ.

ವಿಚಾರ ತಿಳಿದ ಬಳಿಕ ಘಟನೆ ಸ್ಥಳಕ್ಕೆ ಧಾವಿಸಿದ ಹುಲ್ಲಹಳ್ಳಿ ಪಿಎಸ್ಐ  ಚೇತನ್ ಕುಮಾರ್, ದಫೆದರ್ ದೊಡ್ಡಯ್ಯ ಸೇರಿದಂತೆ ಇತರೆ ಸಿಬ್ಬಂದಿಗಳು ಪರಿಶೀಲನೆ ನಡೆಸಿದರು. ಬಳಿಕ ಆಂಬುಲೆನ್ಸ್ ಮೂಲಕ ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಮೃತದೇಹ  ರವಾನೆ ಮಾಡಲಾಗಿದ್ದು, ನಂಜನಗೂಡಿನ ಡಿವೈಎಸ್ಪಿ ರಘು ನೇತೃತ್ವದಲ್ಲಿ ಶ್ವಾನದಳ ಪರಿಶೀಲನೆ ನಡೆಸಿದರು.

Key words: mysore, victim,  full moon witchcraft, murder