ಮೈಸೂರು,ನವೆಂಬರ್,7,2024 (www.justkannada.in): 2020 ರಿಂದ 20224 ರವರೆಗೂ ಕೊಟ್ಟಿರುವ 50:50 ಅನುಪಾತದ ಎಲ್ಲಾ ಸೈಟ್ ಗಳನ್ನ ಸರ್ಕಾರ ತಕ್ಷಣವೇ ಜಪ್ತಿ ಮಾಡಬೇಕು ಎಂದು ಕಾಂಗ್ರೆಸ್ ಶಾಸಕ ಕೆ.ಹರೀಶ್ ಗೌಡ ಆಗ್ರಹಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಕಾಂಗ್ರೆಸ್ ಶಾಸಕ ಕೆ.ಹರೀಶ್ ಗೌಡ 2020 ರಿಂದ 2024ರವರೆಗೂ ಕೊಟ್ಟಿರುವ 50:50 ಅನುಪಾತದ ಎಲ್ಲಾ ಸೈಟ್ ಗಳನ್ನ ಸರ್ಕಾರ ತಕ್ಷಣವೇ ವಾಪಸ್ ಪಡೆಯಲಿ. ದೇಸಾಯಿ ಆಯೋಗದ ತನಿಖಾ ವರದಿ ಬಂದ ಮೇಲೆ ನ್ಯಾಯಸಮ್ಮತ ಸೈಟ್ ಗಳನ್ನ ವಾಪಸ್ ಕೊಡಲಿ. ಅಕ್ರಮ ಸೈಟ್ ಗಳನ್ನ ಸರ್ಕಾರವೇ ಮುಟ್ಟುಗೋಲು ಹಾಕಿಕೊಳ್ಳಲಿ. ಸರ್ಕಾರಕ್ಕೆ ಈ ಮೂಲಕ ನಾನು ಈ ಬಗ್ಗೆ ಮನವಿ ಮಾಡುತ್ತಿದ್ದೇನೆ. ಈಗಾಗಲೇ ಸಿಎಂ ಪತ್ನಿ ತಮಗೆ ಬಂದ ಸೈಟ್ ಗಳನ್ನು ವಾಪಸ್ ಕೊಟ್ಟಿದ್ದಾರೆ. ಇದೇ ಮಾದರಿಯಲ್ಲೇ ಎಲ್ಲಾ ಸೈಟ್ ಗಳನ್ನು ಸರ್ಕಾರ ತಕ್ಷಣವೇ ಜಪ್ತಿ ಮಾಡಲಿ ಎಂದು ಒತ್ತಾಯಿಸಿದರು.
ನನ್ನದು ಯಾವುದಾದರೂ ಸೈಟ್ ಇದ್ದರೆ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಿ.
ನಾನು ಒಂದು ಇಂಚೂ ಜಾಗವನ್ನು 50:50 ಅನುಪಾತದಲ್ಲಿ ಪಡೆದಿಲ್ಲ. ಒಂದು ಇಂಚು ಜಾಗಕ್ಕೂ ನಾನು ಶಿಫಾರಸ್ಸು ಮಾಡಿಲ್ಲ. 50:50 ಯಲ್ಲಿ ನನ್ನದು ಯಾವುದಾದರೂ ಸೈಟ್ ಇದ್ದರೆ ಸರ್ಕಾರ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಿ. ನನ್ನದು ಇರೋದು ಸಾಬೀತು ಮಾಡಿದ್ರೆ, ನಾನು ಸಾರ್ವಜನಿಕ ಜೀವನದಿಂದಲೇ ನಿವೃತ್ತಿ ಪಡೆಯುತ್ತೇನೆ. ನನಗೆ ಈ ತರದ ಸೈಟ್ ಗಳನ್ನ ತೆಗೆದುಕೊಳ್ಳುವ ಅನಿವಾರ್ಯತೆ ಅಗತ್ಯತೆ ನನಗೆ ಸೃಷ್ಟಿಯಾಗಿಲ್ಲ. ನನ್ನ ತಾತ, ನನ್ನ ತಂದೆ ಎಲ್ಲರೂ ಜಮಿನ್ದಾರರೇ ನಾನು ಈಗಲೂ ಜಮೀನು ಹೊಂದಿದ್ದೇನೆ. ನನಗೆ ಬೇರೆ ಸೈಟ್ ಗಳ ಅಗತ್ಯ ಇಲ್ಲ ಎಂದು ಹರೀಶ್ ಗೌಡ ತಿಳಿಸಿದರು
ಕಳೆದ ಬಾರಿಯ ಮುಡಾ ಸಭೆಯಲ್ಲೇ ನಾನು 50:50 ಯಲ್ಲಿ ಅಕ್ರಮ ಆಗಿದ್ದಾವೆ ಎಂದು ಹೇಳಿದ್ದೆ. ಅದೂ ರೆಕಾರ್ಡ್ ಕೂಡ ಇದೆ. ಆದರೇ ಅದನ್ನು ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ, ಪರಿಣಾಮ ಇಂತಹ ಸ್ಥಿತಿ ಬಂದಿದೆ. ಮುಡಾ ವಿಚಾರದಲ್ಲಿ ಮುಡಾಗೆ ಮಾತ್ರ ಅಲ್ಲ, ಇಡೀ ಮೈಸೂರಿಗೆ ಕಳಂಕ ಬಂದಿದೆ. ಈ ಕಳಂಕವನ್ನು ತೊಳೆಯುವ ಕೆಲಸ ಮಾಡಬೇಕು. ಯಾರೋ ಕೆಲವರು ಮಾಡಿರುವ ತಪ್ಪಿಗೆ ಜನ ಎಲ್ಲರನ್ನೂ ಅನುಮಾನದಿಂದ ನೊಡುವ ಪರಿಸ್ಥಿತಿ ಬಂದಿದೆ. ಈ ವಿಚಾರದಲ್ಲಿ ನನಗೆ ಮಾನಸಿಕವಾಗಿಯೂ ನೋವಾಗಿದೆ. ಮುಖ್ಯಮಂತ್ರಿಗಳು ಈ ನೆಲದ ಕಾನೂನು ಗೌರವಿಸಿ, ಇದೇ ವಿಚಾರದಲ್ಲಿ ವಿಚಾರಣೆಗೂ ಬಂದಿದ್ದರು. ಅದೇ ರೀತಿಯಲ್ಲೇ ಮುಡಾ ಸ್ವಚ್ಚ ಮಾಡುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಬೇಕಿದೆ ಎಂದು ಶಾಸಕ ಹರೀಶ್ ಗೌಡ ಹೇಳಿದರು.
Key words: MLA, Harish Gowda, government, Muda, illegal sites