ಮೈಸೂರು,ನವೆಂಬರ್,7,2024 (www.justkannada.in): 50:50 ಅನುಪಾತದಲ್ಲಿ ಸೈಟ್ ಪಡೆದವರಿಗೆ ಬಿಗ್ ಶಾಕ್ ಎದುರಾಗಿದೆ. ವಿವಾದದ ಗೂಡಾದ ಮುಡಾದಲ್ಲಿ 50:50 ನಿವೇಶನ ಜಪ್ತಿಗೆ ಸಾಮಾನ್ಯ ಸಭೆ ನಿರ್ಣಯ ಮಾಡಿದ್ದು ದೇಸಾಯಿ ರಿಪೋರ್ಟ್ ಬಳಿಕ ಕಾನೂನು ಬಾಹಿರವಾಗಿ ನಿವೇಶನ ಪಡೆದವರ ಸೈಟ್ ಬಹುತೇಕ ಜಪ್ತಿ ಆಗಲಿವೆ.
ಮುಡಾದಲ್ಲಿ ನಡೆದ ಸಾಮಾನ್ಯ ಸಭೆ 50:50 ಕಾನೂನು ಬಾಹಿರ ನಿವೇಶನ ಪಡೆದವರಿಗೆ ನಡುಕ ಶುರುವಾಗಿದೆ. ಕೋಟಿ ಕೋಟಿ ಭ್ರಷ್ಟಾಚಾರದ ಕೂಪವಾದ 50:50 ಸೈಟ್ ಹಂಚಿಕೆ ರಾಜ್ಯಾದ್ಯಂತ ಸದ್ದು ಮಾಡಿತ್ತು. ಸ್ವತಃ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು 50:50ಯಲ್ಲಿ ಕಾನೂನು ಬಾಹಿರವಾಗಿ ನಿವೇಶನ ಪಡೆದಿದ್ದಾರೆ ಅನ್ನೋ ವಿಚಾರ ಚರ್ಚೆ ಆದ ಬಳಿಕ ವಾಪಸ್ ನೀಡಿದರು. ಇದೀಗ ಹತ್ತು ತಿಂಗಳ ಬಳಿಕ ನಡೆದ ಸಾಮಾನ್ಯ ಸಭೆ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಸಾಮಾನ್ಯ ಸಭೆ ಐತಿಹಾಸಿಕ ನಿರ್ಣಯಕ್ಕೆ ಮುಂದಾಗಿದೆ.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಜಿಲ್ಲಾಧಿಕಾರಿಯೂ ಆದ ಲಕ್ಷ್ಮಿಕಾಂತರೆಡ್ಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕರೂ ಮುಡಾ ಸದಸ್ಯರೂ ಆದ ಜಿ.ಟಿ.ದೇವೇಗೌಡ, ಕೆ.ಹರೀಶ್ ಗೌಡ, ಶ್ರೀವತ್ಸ, ದರ್ಶನ್ ಧೃವನಾರಾಯಣ್, ಪರಿಷತ್ ಸದಸ್ಯರಾದ ಹೆಚ್. ವಿಶ್ವನಾಥ್, ಸಿಎನ್ ಮಂಜೇಗೌಡ, ವಿವೇಕಾನಂದ ಸೇರಿದಂತೆ ಮುಡಾ ಆಯುಕ್ತ ರಘುನಂದನ್ ಮುಡಾ ಅಧಿಕಾರಿಗಳು ಹಾಜರಿದ್ದರು. ಅಧಿಕಾರಿಗಳು ಜನಪ್ರತಿನಿಧಿಗಳ ಸಮ್ಮುಖದಲ್ಲಿ ನಡೆದ ಸಭೆಯು 50:50ಯ ನಿವೇಶನ, ಕಾನೂನು ಬಾಹಿರವಾಗಿ ಪಡೆದ ನಿವೇಶನ, ಈಗಾಗಲೇ ಪರಿಹಾರ ಪಡೆದು, ಮತ್ತೆ ನಿವೇಶನ ಪಡೆದ ನಿವೇಶನಗಳು ಎಲ್ಲವನ್ನೂ ಜಪ್ತಿ ಮಾಡಲು ಸಭೆಯಲ್ಲಿ ಒಮ್ಮತದ ತಿರ್ಮಾನವಾಗಿದೆ. ಈ ಸಂಬಂಧ ಕಳೆದ ಬಾರಿಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗಿತ್ತು. ಆದರೆ ದಾಖಲೀಕರಣ ಆಗಿರಲಿಲ್ಲ. ಹೀಗಾಗಿ ಅದರ ದಾಖಲೀಕರಣ ಮಾಡದ ಅಧಿಕಾರಿಗಳ ಮೇಲೆ ಎಫ್ ಐಆರ್ ದಾಖಲು ಮಾಡಲು ಸರ್ಕಾರಕ್ಕೆ ಶಿಸ್ತು ಕ್ರಮಕ್ಕೆ ಪತ್ರ ಬರೆಯಲು ನಿರ್ಧರಿಸಲಾಗಿದೆ.
ಇನ್ನೂ, ಸದ್ಯ ರಾಜ್ಯ ಸರ್ಕಾರ ನೇಮಕ ಮಾಡಿರುವ ದೇಸಾಯಿ ಆಯೋಗ ಮುಡಾ ತನಿಖೆ ಮಾಡುತ್ತಿದ್ದು, ತನಿಖೆ ವರದಿ ಬಂದ ಬಳಿಕ 50:50 ನಿವೇಶನ ಜಪ್ತಿ ವರದಿ ಅಂಗೀಕರಿಸಲು ತಿರ್ಮಾನ ಕೈಗೊಂಡು ಸರ್ಕಾರಕ್ಕೆ ಶಿಫಾರಸ್ಸು ಮಾಡಬಹುದು ಎಂದು ಮುಡಾ ಅಧ್ಯಕ್ಷ ಲಕ್ಷ್ಮೀಕಾಂತರೆಡ್ಡಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನೂ ಜಪ್ತಿಯಾದ ಬಳಿಕ ಕಾನೂನು ಬದ್ಧವಾಗಿದ್ದವರಿಗೆ ವಾಪಸ್ ನೀಡಲು ತೀರ್ಮಾನಕ್ಕೆ ಬರಲಾಗಿದೆ. ಮುಡಾ ಹಗರಣದ ಮಧ್ಯೆ, ಸಾರ್ವಜನಿಕರ ಕೆಲಸ ಕಾರ್ಯಗಳನ್ನ ಮುಂದುವರೆಸಲು ನಿರ್ಧಾರ ಮಾಡಿದ್ದು, ಇದೇ ತಿಂಗಳ 21 ರಂದು ಮತ್ತೊಂದು ಸಾಮಾನ್ಯ ಸಭೆಯ ದಿನಾಂಕ ನಿಗದಿಯಾಗಿದೆ. ಒಟ್ಟಿನಲ್ಲಿ ಇಂದಿನ ಮುಡಾ ಸಭೆ 50:50 ನಿವೇಶನ ಪಡೆದವರಿಗೆ ಸಂಕಷ್ಟ ತಪ್ಪಿದ್ದಲ್ಲ ಅನ್ನೋದನ್ನ ಸಭೆ ಸಂದೇಶ ಸಾರಿದೆ.
Key words: MUDA, Meeting, 50: 50 site, mysore