ರೋಹಿಣಿ v/s ರೂಪ : ರಾಜೀಗೆ ನಕಾರ, ಮೆರಿಟ್ ಮೇಲೆ ಪ್ರಕರಣ ಇತ್ಯರ್ಥಕ್ಕೆ ಸಿಂಧೂರಿ ಪಟ್ಟು.

 

ನವ ದೆಹಲಿ, ನ.08,2024: (www.justkannada.in news) ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಜತೆಗಿನ ಕಾನೂನು ಸಮರದಲ್ಲಿ  ಐಪಿಎಸ್‌ ಅಧಿಕಾರಿ ರೂಪ.ಡಿ.ಮುದ್ಗಿಲ್‌ ಅವರಿಗೆ ಸುಪ್ರೀಂಕೋರ್ಟ್‌ ನಲ್ಲಿ ಹಿನ್ನಡೆ.

ತಮ್ಮ ವಿರುದ್ಧ ಹೂಡಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ಮನವಿ ಹಿಂಪಡೆಯಲು ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್‌ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ತಿಳಿಸಿದೆ.

ಈ ಹಿಂದಿನ ವಿಚಾರಣೆಗಳ ವೇಳೆ ಪ್ರಕರಣದ ಸೌಹಾರ್ದಯುತ ಇತ್ಯರ್ಥಕ್ಕೆ ನ್ಯಾಯಾಲಯ ಕಕ್ಷಿದಾರರಿಗೆ ಸಮಯಾವಕಾಶ ನೀಡಿತ್ತು. ಆದರೆ, ಪ್ರಕರಣ ಇತ್ಯರ್ಥಗೊಳಿಸಲು ಇಬ್ಬರ ಕಡೆಯವರು ಒಪ್ಪಂದಕ್ಕೆ ಬಾರದ ಕಾರಣ, ಜತೆಗೆ  ಪ್ರಕರಣದ ವಿಚಾರಣಾ ಪ್ರಕ್ರಿಯೆಗೆ ಮುಂದಾಗುವುದಾಗಿ ರೋಹಿಣಿ ಸಿಂಧೂರಿ ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ , ಅಹ್ಸಾನುದ್ದೀನ್ ಅಮಾನುಲ್ಲಾ ಹಾಗೂ ಅಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಅರ್ಜಿ ವಾಪಸ್‌ ಪಡೆಯಲು ರೂಪಾ ಅವರಿಗೆ ಅನುಮತಿಸಿತು.

ವೃತ್ತಿಗೆ ಧಕ್ಕೆ ತರುವುದರಿಂದ ವ್ಯಾಜ್ಯ ಮುಂದುವರೆಸುವ ಬದಲು ಸೌಹಾರ್ದಯುತವಾಗಿ ವಿವಾದ ಇತ್ಯರ್ಥಪಡಿಸಿಕೊಳ್ಳುವ ಬಯಕೆ ಇದೆಯೇ ಎಂದು ನ್ಯಾಯಾಲಯ ಇಬ್ಬರನ್ನೂ ಪ್ರಶ್ನಿಸಿತು.  ಹಿರಿಯ ಅಧಿಕಾರಿಗಳು ತಮ್ಮ ಕೆಲಸಕ್ಕಿಂತ ವಕೀಲರ ಕಚೇರಿಯಲ್ಲಿ ಹೆಚ್ಚು ಸಮಯ ಕಳೆಯುತ್ತಿರುವ ಕಾರಣ ರಾಜಿಗೆ ಮುಂದಾಗುವಂತೆ ಸೂಚಿಸುತ್ತಿದ್ದೇವೆ. ಈ ಪ್ರಕರಣದ ಪ್ರಕ್ರಿಯೆಗಳು ಅಧಿಕಾರಿಗಳ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿತು.

ಮೌದ್ಗಿಲ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ವಕೀಲ ಆದಿತ್ಯ ಸೋಂಧಿ , ಇಬ್ಬರ ನಡುವಿನ ವಿವಾದವನ್ನು ಬಗೆಹರಿಸಲು ಮಧ್ಯಸ್ಥಿಕೆದಾರರನ್ನು ನೇಮಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ, ಸಿಂಧೂರಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಅವರು ಸಲಹೆಯನ್ನು ತಿರಸ್ಕರಿಸಿ, ತಮ್ಮ ಕಕ್ಷಿದಾರೆಯ ಘನತೆಗೆ ಅಪಾರ ಹಾನಿಯಾಗಿದೆ ಎಂದರು.

ರೋಹಿಣಿ ಸಿಂಧೂರಿ ಅವರ ಕುಟುಂಬದ ವರ್ಚಸ್ಸಿಗೆ ಧಕ್ಕೆ ತರಲಾಗಿದೆ. ರೋಹಿಣಿ ಅವರಿಗೆ ಸಂಬಂಧಿಸಿದ ಖಾಸಗಿ ವಿಚಾರಗಳನ್ನು ಬಹಿರಂಗಪಡಿಸಲಾಗಿದೆ. ಆ ಮಾಹಿತಿ ಇನ್ನೂ ಸಾರ್ವಜನಿಕವಾಗಿ ಲಭ್ಯವಿದೆ. ರಾಜಿಸೂತ್ರದ ಪ್ರಸ್ತಾಪ ಬೇಡ ಎಂದು ಅವರು ಹೇಳಿದರು.

ನ್ಯಾಯಾಲಯದಲ್ಲಿ ಖುದ್ದು ಹಾಜರಿದ್ದ ಸಿಂಧೂರಿ ಅವರು ತನಗೆ ರಾಜಿ ಸಂಧಾನದಲ್ಲಿ ಆಸಕ್ತಿ ಇಲ್ಲ. ಅರ್ಹತೆಯ ಆಧಾರದ ಮೇಲೆ ಪ್ರಕರಣ ನಿರ್ಧರಿಸಬೇಕು ಎಂದು ಕೋರಿದರು.

ಇದೇ ವೇಳೆ ಸಿಂಧೂರಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಆರೋಪದ ಹಿಂದಿನ ಉದ್ದೇಶವಾದರೂ ಏನು ಎಂದು ರೂಪಾ ಅವರನ್ನು ನ್ಯಾಯಾಲಯ ಪ್ರಶ್ನಿಸಿತು. ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ರೂಪಾ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಯೇ? ಸಂಬಂಧವಿಲ್ಲದ ಹೇಳಿಕೆ ನೀಡಿದರೆ ಅದು ಮಾನಹಾನಿಕರವಲ್ಲವೇ ಎಂದು ಕೇಳಿತು.

ಸಿಂಧೂರಿ ಅವರ ಕರ್ತವ್ಯಲೋಪಗಳ ಕುರಿತು ರೂಪಾ ಗಮನ ಸೆಳೆಯುತ್ತಿದ್ದಾರೆ ಎಂದು ಸೋಂಧಿ ಅವರು ವಾದಿಸಿದರೂ ನ್ಯಾ. ಅಮಾನುಲ್ಲಾ ಅದನ್ನು ಒಪ್ಪಲಿಲ್ಲ. ಇಲಾಖೆ ವ್ಯಾಪ್ತಿಯಲ್ಲೇ ರೂಪಾ ದೂರು ನೀಡಬಹುದಿತ್ತು. ಪರಸ್ಪರ ಮುಗಿಬೀಳಲು ಹೊರಟಿದ್ದಾರೆ. ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಪ್ರತಿಯೊಂದು ಅಂಶವೂ ನಿಮಗೆ ತಿಳಿದಿದೆ ಅಲ್ಲವೇ? ಆದರೂ ನೀವು ಇದನ್ನು ಮಾಡಿದ್ದೀರಿ ಎಂದು ಹೇಳಿದರು.

ತಾನು ಅರ್ಹತೆ ಆಧಾರದ ಮೇಲೆ ಪ್ರಕರಣ ನಿರ್ಧರಿಸುವೆನಾದರೂ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಕಕ್ಷಿದಾರರು ಮತ್ತೊಮ್ಮೆ ಯತ್ನಿಸುವಂತೆ ನ್ಯಾಯಾಲಯ ಈ ಹಂತದಲ್ಲಿ ಹೇಳಿತು.

ನ್ಯಾಯಾಲಯ ಸಮಯಾವಕಾಶ ನೀಡಿದರೂ, ಕಕ್ಷಿದಾರರ ನಡುವೆ ಯಾವುದೇ ಇತ್ಯರ್ಥಕ್ಕೆ ಬರಲು ಸಾಧ್ಯವಾಗದ ಕಾರಣ ಮನವಿ ಹಿಂಪಡೆಯುವುದಾಗಿ ಸೋಂಧಿ ನ್ಯಾಯಾಲಯಕ್ಕೆ ತಿಳಿಸಿದರು.ಇದನ್ನು ಗಮನಿಸಿದ ನ್ಯಾಯಾಲಯ ರೂಪಾ ಮೌದ್ಗಿಲ್ ಅವರಿಗೆ ಮನವಿ ಹಿಂಪಡೆಯಲು ಅನುಮತಿಸಿತು.

 ಕೃಪೆ : ಬಾರ್‌ ಅಂಡ್‌ ಬೆಂಚ್‌

key words: The Supreme Court, IPS D Roopa Moudgil, withdraw her plea, criminal defamation case, IAS Rohini Sindhuri 

 

 

 

SUMMARY:

 

 

 

 

 

 

The Supreme Court on Thursday allowed Indian Police Service (IPS) officer D Roopa Moudgil to withdraw her plea seeking quashing of the criminal defamation case initiated against her by Indian Administrative Service (IAS) officer Rohini Sindhuri