ಬೆಂಗಳೂರು,ನವೆಂಬರ್,13,2024 (www.justkannada.in): ರಾಜಕಾರಣಿಗಳು ಅಂದರೆ ಕೋಟಿಗಟ್ಟಲೆ ಹಣ ಹೊಂದಿರುತ್ತಾರೆಂಬ ಮಾತಿದೆ. ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ಅವರ ಆಸ್ತಿ ಮೂರರಿಂದ ನಾಲ್ಕುಪಟ್ಟು ಜಾಸ್ತಿಯಾಗಿರುತ್ತದೆ. ಆದರೆ ಇಲ್ಲೊಬ್ಬರು ಮುಖ್ಯಮಂತ್ರಿಯಾಗಿದ್ದವರ ಮನೆಯೇ ಇದೀಗ ಮಾರಾಟಕ್ಕಿದೆ.
ಹೌದು ಇದನ್ನು ನಂಬಲೇಬೇಕು. ಕರ್ನಾಟಕ ಏಕೀಕರಣವಾದ ನಂತರ ಮೊದಲ ಮುಖ್ಯಮಂತ್ರಿ ಆಗಿದ್ದ ಎಸ್. ನಿಜಲಿಂಗಪ್ಪ ಅವರು ವಾಸವಾಗಿದ್ದ ಚಿತ್ರದುರ್ಗದ ಮನೆ ‘ವಿನಯ’ ಮಾರಾಟ ಮಾಡಲು ಅವರ ಕುಟುಂಬದ ಸದಸ್ಯರು ನಿರ್ಧರಿಸಿದ್ದಾರೆ. ಚಿತ್ರದುರ್ಗದ ಡಿಸಿ ಕಚೇರಿ ಬಳೆ ಇರುವ ಮನೆಯಿದು.
ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ 1937ರಲ್ಲಿ ನಿಜಲಿಂಗಪ್ಪ ವಕೀಲರಾಗಿದ್ದಾಗ ನಿರ್ಮಿಸಿದ ಮನೆಯನ್ನು 10 ಕೋಟಿ ರೂ.ಗೆ ಮಾರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಚಿತ್ರದುರ್ಗ ನಗರದ ವಾರ್ಡ್ ನಂ 32 ವಿಪಿ ಬಡಾವಣೆಯ ಡಿಸಿ ಬಂಗಲೆಯ ಹತ್ತಿರ ಇರುವ 117 X 130 ಅಡಿ ವಿಸ್ತೀರ್ಣದ ಶ್ವೇತ ಭವನದಲ್ಲಿ ಮಾಜಿ ಮುಖ್ಯಮಂತ್ರಿಗಳು ವಾಸವಾಗಿದ್ದರು. ಈ ಮನೆಯನ್ನು ಹತ್ತು ಕೋಟಿ ರೂ. ಗೆ ಮಾರಾಟ ಮಾಡಲು ನಿಜಲಿಂಗಪ್ಪ ಅವರ ಪುತ್ರ ಎಸ್ಎನ್ ಕಿರಣಶಂಕರ್ ಮುಂದಾಗಿದ್ದಾರೆ.
ಪ್ರಾಮಾಣಿಕವಾಗಿ ಆಡಳಿತ ನಡೆಸಿದ ಮುಖ್ಯಮಂತ್ರಿಗಳಲ್ಲಿ ನಿಜಲಿಂಗಪ್ಪನವರು ಪ್ರಮುಖರು. ಇಂತಹ ವ್ಯಕ್ತಿಗೆ ಸೇರಿದ ಮನೆ ಇಂದು ಮಾರಾಟಕ್ಕಿದೆ ಎಂಬ ಜಾಹೀರಾತು ನೋಡಿದರೇ ನಿಜಕ್ಕೂ ಕಳವಳಕಾರಿ ಸಂಗತಿ.
ಸರ್ಕಾರವು ಈ ಮನೆಯನ್ನು ಒಂದು ಸ್ಮಾರಕ ಮಾಡಿ, ರಾಜ್ಯದ ಮುಖ್ಯಮಂತ್ರಿಗಳಾಗಿದ್ದ, ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನಿಜಲಿಂಗಪ್ಪನವರ ಜೀವನ, ಆಡಳಿತ, ರಾಜ್ಯಕ್ಕೆ ಕೊಡುಗೆ, ಅಂದಿನ ವಿದ್ಯಮಾನಗಳು ಇವುಗಳನ್ನು ಮುಂದಿನ ಪೀಳಿಗೆಗೆ ನೆನಪಿಸಲು ಪ್ರಯತ್ನಿಸುಬಹುದಾಗಿತ್ತೆ ಎಂಬ ಪ್ರಶ್ನೆ ಉದ್ಬವಿಸಿದೆ.
ನಿಜಲಿಂಗಪ್ಪ ಅವರು ನಮ್ಮ ನಾಡಿನ ಹೆಮ್ಮೆಯ ನಾಯಕ. ಇಂತಹ ನಾಯಕರ ಮನೆ, ಮುಂದಿನ ಪೀಳಿಗೆಗೆ ಪ್ರೇರಣೆ ಉಂಟುಮಾಡುವ ಸ್ಮಾರಕವಾಗುವುದು ಅತ್ಯಗತ್ಯವೇ ಎಂಬುದನ್ನು ಸರ್ಕಾರ ಮನಗಾಣಬೇಕಿದೆ.
Key words: Former CM, house, for, sale