ಮೈಸೂರು,ನವೆಂಬರ್,14,2024 (www.justkannada.in): ವಿಶ್ವ ರೈತ ದಿನಾಚರಣೆ ಹಿನ್ನೆಲೆ , ರೈತರ ಹಬ್ಬ ಆಚರಿಸಲು ನಿರ್ಧರಿಸಿಲಾಗಿದ್ದು ರಾಷ್ಟ್ರೀಯ ರೈತ ಸಮಾವೇಶವನ್ನು ಮೈಸೂರಿನಲ್ಲಿ ನಡೆಸಲಾಗುವುದು. ದೇಶದ ವಿವಿಧ ರಾಜ್ಯಗಳ ನೂರಾರು ರೈತ ಮುಖಂಡರು ಭಾಗವಹಿಸಲಿದ್ದಾರೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ತಿಳಿಸಿದರು.
ವಿಶ್ವ ರೈತ ದಿನದ ಅಂಗವಾಗಿ ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕುರುಬೂರು ಶಾಂತಕುಮಾರ್ ಮಾತನಾಡಿದರು.
ಎಲ್ಲಾ ಸರ್ಕಾರಗಳು ರೈತರನ್ನು ಮೋಸಗೊಳಿಸುತ್ತಿವೆ. ಕೃಷಿ ಕ್ಷೇತ್ರ ದುರ್ಬಲವಾಗುತ್ತಿದೆ ಕಾರ್ಪೊರೇಟ್ ಕಂಪನಿಗಳು ಕೃಷಿಯನ್ನು ವಶಪಡಿಸಿಕೊಳ್ಳಲು ವಾಮಮಾರ್ಗಗಳನ್ನು ಬಳಸುತ್ತಿವೆ. ಮುಂದಿನ ದಿನಗಳಲ್ಲಿ ರೈತ ಕುಲವನ್ನು ಅಪಾಯದಿಂದ ಪಾರು ಮಾಡಲು ಚಿಂತಿಸಬೇಕಾಗಿದೆ. ಅದಕ್ಕಾಗಿ ಮೈಸೂರಿನಲ್ಲಿ ರಾಷ್ಟ್ರೀಯ ರೈತ ಸಮಾವೇಶ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಶುಂಠಿ ಬೆಳೆದ ರೈತರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಕಳೆದ ವರ್ಷ ಚೀಲಕ್ಕೆ 5000 ರೂ. ದರ ಇತ್ತು ಪ್ರಸಕ್ತ ಸಾಲಿನಲ್ಲಿ 1600ಕ್ಕೆ ಇಳಿಕೆಯಾಗಿದೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗಲೆಂದು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಗ್ಯಾರಂಟಿ ಕಾನೂನು ಜಾರಿಗೆ ತರಬೇಕು ಎಂದು ದೆಹಲಿಯಲ್ಲಿ ರೈತ ಹೋರಾಟ ನಡೆಸಲಾಗುತ್ತಿದೆ. ಇದೇ ತಿಂಗಳು 25 ರಿಂದ ನಡೆಯಲಿರುವ ಸಂಸತ್ ಅದಿವೇಶನದ ವೇಳೆ ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೆತರ ಸಂಘಟನೆಯು ದೇಶಾದ್ಯಂತ ರೈತ ಚಳುವಳಿಯನ್ನು ತೀವ್ರಗೊಳಿಸಲು ತೀರ್ಮಾನಿಸಲಾಗಿದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ತಿಳಿಸಿದರು.
ಹಾಲಿನ ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹ
ರಾಜ್ಯ ಸರ್ಕಾರ 8 ತಿಂಗಳಿಂದಲೂ ಹಾಲಿನ ಪ್ರೋತ್ಸಾಹಧನ ಲೀಟರ್ ಗೆ ಐದು ರೂ ಬಿಡುಗಡೆ ಮಾಡದೆ ನಿರ್ಲಕ್ಷ್ಯ ಮಾಡಿದೆ. ಆದರೆ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ. ಇದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಕೂಡಲೇ ಹಣ ಬಿಡುಗಡೆ ಮಾಡಲಿ ಎಂದು ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ಇತ್ತೀಚಿಗೆ ಮೈಸೂರಿನ ಮುಡಾ 50:50 ಅನುಪಾತದ ನಿವೇಶನಗಳನ್ನು ರದ್ದು ಮಾಡಲಾಗಿದೆ ಎನ್ನುವ ತೀರ್ಮಾನದಿಂದ ಜಮೀನು ಕಳೆದುಕೊಂಡ ನೈಜ ರೈತರಿಗೆ ತೊಂದರೆ ಉಂಟು ಮಾಡಬಾರದು. ರೈತನಿಗೆ ಅನ್ಯಾಯವಾದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸುತ್ತಿದ್ದೇವೆ. ಕಳೆದ ಎರಡು ವರ್ಷಗಳ ಹಿಂದೆ ಮುಡಾ ಕಛೇರಿಯಲ್ಲಿ ಕಡತಗಳು ಕಳ್ಳತನವಾದಾಗ ನಮ್ಮ ಸಂಘಟನೆ ಪ್ರತಿಭಟನೆ ಮಾಡಿ ಎಚ್ಚರಿಸಿದ್ದರೂ ಸರ್ಕಾರ ನಿರ್ಲಕ್ಷ್ಯ ಮಾಡಿದ ಪರಿಣಾಮ ಹಗರಣಗಳು ಏರಿಕೆಯಾಗಲು ಕಾರಣವಾಗಿದೆ ಎಂದರು.
ಭತ್ತಕ್ಕೆ ಬೆಂಬಲ ಬೆಲೆಗೆ ಪ್ರೋತ್ಸಾಹ ಧನ 500 ರೂ. ನೀಡಲು ಕ್ರಮ ಕೈಗೊಳ್ಳಿ
ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಗೆ ಪ್ರೋತ್ಸಾಹಧನ 500 ರೂ.ನೀಡಲು ಮುಖ್ಯಮಂತ್ರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಪಿಎಂಸಿಗಳಲ್ಲಿ ಹಣ್ಣು ತರಕಾರಿ ಧಾನ್ಯ ಮಾರಾಟ ಮಾಡುವ ರೈತರಿಂದ ಕಾನೂನು ಪ್ರಕಾರ ದಲ್ಲಾಳಿಗಳು ಕಮಿಷನ್ ಪಡೆಯಬಾರದು ಎಂದು ಕೃಷಿ ಮಾರಾಟ ಮಂಡಳಿ ಆಯುಕ್ತರು ಆದೇಶ ಹೊರಡಿಸಿದ್ದಾರೆ ಆದೇಶ ಉಲ್ಲಂಘನೆ ಮಾಡಿದರೆ ರಹದಾರಿ ರದ್ದು ಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ರೈತರು ಜಾಗೃತರಾಗಬೇಕು ಎಂದು ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಹತ್ತಳ್ಳಿ ದೇವರಾಜ್. ಬರಡನಪುರ ನಾಗರಾಜ್. ಕಿರಗಸುರ್ ಶಂಕರ್ ನೀಲಕಂಠಪ್ಪ. ಪೈಲ್ವಾನ್ ವೆಂಕಟೇಶ್, ಸೂರಿ ಉಮೇಶ್ ಮುಂತಾದವರು ಉಪಸ್ಥಿತರಿದ್ದರು.
Key words: National Farmers Conference, Mysore, Kuruburu Shanthakumar