ಮೈಸೂರು,ನವೆಂಬರ್,15,2024 (www.justkannada.in): ಜೆಡಿಎಸ್ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ ದೇವೇಗೌಡರ ಮುನಿಸು ಮತ್ತೆ ಮುಂದುವರೆದಿದ್ದು, ಇದೀಗ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ.
ಹೌದು ಇಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಕ್ಕೆ ತಾವೇ ಗೈರಾಗುವ ಮೂಲಕ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡರು ಇದೀಗ ಮತ್ತೆ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.
ಮೈಸೂರಿನ ದಟ್ಟಗಳ್ಳಿಯಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಕಾರ್ಯಕ್ರಮ ನಡೆಯುತ್ತಿದ್ದು, ಮೈಸೂರಿನಲ್ಲಿಯೇ ಇದ್ದರೂ ಶಾಸಕ ಜಿಟಿ ದೇವೇಗೌಡರು ಕಾರ್ಯಕ್ರಮಕ್ಕೆ ಹಾಜರಾಗಿಲ್ಲ. ಅಲ್ಲದೆ ಕೇಂದ್ರ ಸಚಿವ ಹೆಚ್ ಡಿಕೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದಾಗಲೂ ಅಲ್ಲಿಗೂ ಸಹ ಜಿಟಿ ದೇವೇಗೌಡರು ಬಂದಿಲ್ಲ.
ದಸರಾ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯರನ್ನ ಶಾಸಕ ಜಿಟಿ ದೇವೇಗೌಡರು ಹಾಡಿ ಹೊಗಳಿದ್ದರು. ನಾಡಹಬ್ಬ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿ ಖುದ್ದು ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಟ್ಟಿದ್ದರು. ಇದಾದ ಬಳಿಕ ಜೆಡಿಎಸ್ ಸಭೆ ಸಮಾರಂಭಗಳು, ನಾಯಕರು , ಮುಖಂಡರ ಜೊತೆ ಜಿಟಿ ದೇವೇಗೌಡರು ಕಾಣಿಸಿಕೊಂಡಿರಲಿಲ್ಲ. ಈ ಮಧ್ಯೆ ಉಪಚುನಾವಣೆಗೆ ಸ್ಟಾರ್ ಪ್ರಚಾರಕರ ಪಟ್ಟಿಯಿಂದಲೂ ಜಿ.ಟಿ.ದೇವೇಗೌಡರ ಹೆಸರು ಕೈಬಿಡಲಾಗಿತ್ತು. ಹೀಗಾಗಿ ಚನ್ನಪಟ್ಟಣ ಚುನಾವಣೆಯಿಂದ ಜಿಟಿ ದೇವೇಗೌಡರು ಅಂತರ ಕಾಯ್ದುಕೊಂಡಿದ್ದರು.ಇದೆಲ್ಲವನ್ನೂ ಗಮನಿಸಿದರೆ ಜಿ.ಟಿ.ದೇವೇಗೌಡರು ಜೆಡಿಎಸ್ ಪಕ್ಷದಿಂದಲೂ ದೂರವಾಗ್ತಾರಾ? ಎಂಬ ಪ್ರಶ್ನೆ ಎದ್ದಿದೆ.
Key words: MLA, GT Deve Gowda, HDK, JDS, Mysore