ಬೆಂಗಳೂರು, ನವೆಂಬರ್ 18,2024 (www.justkannada.in): ಬಸವಣ್ಣ ಅವರ ವಿಚಾರ, ತತ್ವ ಆದರ್ಶಗಳನ್ನು ನೂರಕ್ಕೆ ನೂರು ಪಾಲನೆ ಮಾಡಲಾಗದಿದ್ದರೂ, ಪಾಲಿಸುವ ಪ್ರಯತ್ನವನ್ನು ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ಸಹಯೋಗ ರಮಣಶ್ರೀ ಪ್ರತಿಷ್ಠಾನ, ಬೆಂಗಳೂರು ಇವರ ವತಿಯಿಂದ ಹೊಟೇಲ್ ರಮಣಶ್ರೀಯಲ್ಲಿ ಆಯೋಜಿಸಿದ್ದ 19ನೇ ವರ್ಷದ“ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ” ಹಾಗೂ ಎಸ್. ಷಡಕ್ಷರಿ ಅವರ‘ಕ್ಷಣ ಹೊತ್ತು ಆಣಿಮುತ್ತು’ ಭಾಗ-14ರ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಶರಣ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿರುವವರನ್ನು ಪ್ರೋತ್ಸಾಹಿಸುವುದು ಬಹಳ ಮುಖ್ಯ.ಬಸವಾದಿ ಶರಣರ ವಿಚಾರಗಳು ಇಡೀ ಜಗತ್ತಿಗೆ ತಲುಪಬೇಕು.ನಮಗೆ ಮಾತ್ರ ಸೀಮಿತವಾಗಿ ತಲುಪಿದರೆ ಸಾಲುವುದಿಲ್ಲ. ಬಸವಾದಿ ಶರಣರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವವನ್ನು ಸಲ್ಲಿಸಿದಂತಾಗುತ್ತದೆ. ಸಮಾಜಕ್ಕೆ ಬಸವಣ್ಣ ಮತ್ತು ಅವರ ಅನುಯಾಯಿಗಳ ಕೊಡುಗೆ ಅಪಾರವಾದುದು. ಸಮಾಜದ ಜಾತಿ ವ್ಯವಸ್ಥೆಯಿಂದ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ ಎಂದರು.
ಸಮಾನತೆಯ ಸಮಾಜ ನಿರ್ಮಾಣವಾಗಲು ಜಾತಿ ವ್ಯವಸ್ಥೆ ಹೋಗಬೇಕು
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಜಾರಿಗೆ ಬಂದಾಗ ವೈರುಧ್ಯತೆಯಿರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ ಎಂದರು. ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ಇದೆ. ರಾಜಕೀಯ ಸಮಾನತೆ ಸಿಕ್ಕಿದ್ದರೂ, ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವ ಸಿಕ್ಕಿಲ್ಲ. ಬಸವಾದಿ ಶರಣರು ಇದನ್ನು 850 ವರ್ಷಗಳ ಹಿಂದೆಯೇ ಪ್ರತಿಪಾದಿಸಿದ್ದರು. ಸಮಾನತೆಯ ಸಮಾಜ ನಿರ್ಮಾಣವಾಗಲು ಜಾತಿ ವ್ಯವಸ್ಥೆ ಹೋಗಬೇಕು. ಇಂದಿಗೂ ಜಾತಿ ವ್ಯವಸ್ಥೆ ಇದ್ದು, ಇದನ್ನು ಹೋಗಲಾಡಿಸಲು ಮಾನವೀಯತೆಯಿಂದ ಕೂಡಿದ ಸಮಾಜ ಅಗತ್ಯ. ಎಲ್ಲರಿಗೂ ಸಮಾನ ಅವಕಾಶಗಳು, ವೈಚಾರಿಕತೆ ಇರಬೇಕು. ಕರ್ಮ ಸಿದ್ಧಾಂತ ಇರಬಾರದು. ಇದನ್ನು ಈಗಲೂ ಬಹಳ ಜನ ಪರಿಪಾಲಿಸುತ್ತಾರೆ. ವಿದ್ಯಾವಂತರೂ ಕೂಡ ಹಣೆಬರಹದಲ್ಲಿ ನಂಬಿಕೆ ಇಡುತ್ತಾರೆ. ವೈಚಾರಿಕತೆ, ವೈಜ್ಞಾನಿಕತೆಯಿಂದ ಕೂಡಿದ ಸಮಾಜದಿಂದ ಮಾತ್ರ ಇದಕ್ಕೆ ಪರಿಹಾರ. ನನಗಾಗಲಿ, ಬಸವರಾಜ ಬೊಮ್ಮಾಯಿ ಅವರಿಗಾಗಲಿ ಮುಖ್ಯಮಂತ್ರಿಯಾಗಲಿದ್ದೀರಿ ಎಂದು ಬರೆದಿದ್ದರೆ ಎಂದು ಪ್ರಶ್ನಿಸಿದರು.
ಮೌಢ್ಯ, ಕಂದಾಚಾರಗಳನ್ನು ಬಿಡಬೇಕು
ಗೊತ್ತಿದ್ದೋ ಗೊತ್ತಿಲ್ಲದೆಯೋ ಮೌಢ್ಯ, ಕಂದಾಚಾರಗಳನ್ನು ಆಚರಿಸುತ್ತೇವೆ. ಇದನ್ನು ಬಿಟ್ಟಾಗ ಮಾತ್ರ ಬಸವಾದಿ ಶರಣರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಬಸವಾದಿ ಶರಣರು ಹೇಳಿದಂತೆ ಇವನಾರವ ಎಂದು ಎಣಿಸದೆ ಇವ ನಮ್ಮವ ಎಂದು ಎಣಿಸಬೇಕು ಎಂದರು. ವಚನಗಳನ್ನು ಹೇಳುತ್ತಲೇ ನೀವು ಯಾವ ಜಾತಿ ಎಂದು ಕೇಳುತ್ತವೆ. ಇದನ್ನು ಮೊದಲು ನಾವು ಬಿಡಬೇಕು. ಆರ್ಥಿಕ, ಸಾಮಾಜಿಕ ಸಮಾನತೆ ಹೋಗಲಾಡಿಸಲು, ಬಸವಾದಿ ಶರಣರ ಕನಸು ನನಸಾಗಿಸಲು, ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನಗಳು ಆಗಲಿ. ನಾನು ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಪ್ರಯತ್ನವನ್ನು ನಿಜವಾಗಿ ಮಾಡುತ್ತಿದ್ದೇನೆ. ಅಸಮಾನತೆ ಹೋಗಬೇಕಾದರೆ ಬದಲಾವಣೆ ಅಗತ್ಯ. ಎಲ್ಲರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಬಂದಾಗ ಮಾತ್ರ ಅಸಮಾನತೆ ಹೋಗಲು ಸಾಧ್ಯ. ಆ ಶಕ್ತಿಯನ್ನು ಜನರಲ್ಲಿ ತುಂಬುವ ಕೆಲಸವನ್ನು ನಾವೆಲ್ಲರೂ ಮಾಡೋಣ ಎಂದರು.
ರಮಣ ಶ್ರೀ ಶರಣ ಪ್ರಶಸ್ತಿಗೆ ಭಾಜನರಾಗಿರುವರಿಗೆ ಮುಖ್ಯಮಂತ್ರಿಗಳು ಶುಭಾಶಯಗಳನ್ನು ತಿಳಿಸಿದರು.
ಗೋರುಚ ಅವರಿಗೆ 95 ವರ್ಷಗಳಾಗಿದ್ದು, ನೂರು ವರ್ಷಗಳಿಗಿಂತಲೂ ಹೆಚ್ಚು ಕಾಲ ಬಾಳಲಿ ಎಂದು ಹಾರೈಸುತ್ತೇನೆ ಎಂದರು.
Key words: trying, follow, Basavanna, philosophy, ideals, CM Siddaramaiah