ಮಂಡ್ಯ ನವೆಂಬರ್,19,2024 (www.justkannada.in): 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ಹಾಗೂ ಗಣ್ಯರಿಗೆ ಸೂಕ್ತ ಸಾರಿಗೆ ವ್ಯವಸ್ಥೆಯಾಗಬೇಕು. ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ಲೋಪದೋಷ ಉಂಟಾಗದಿರಲಿ ಎಂದು ಮದ್ದೂರು ಶಾಸಕರು ಹಾಗೂ ಸಾರಿಗೆ ಸಮಿತಿಯ ಅಧ್ಯಕ್ಷ ಕೆ. ಎಂ. ಉದಯ್ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸಾರಿಗೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮ್ಮೇಳನಕ್ಕೆ ನೊಂದಾಯಿತ ಅತಿಥಿಗಳಿಗೆ ಸುಸಜ್ಜಿತ ವಸತಿ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಅತಿಥಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಮಾಡಬೇಕು. ವಸತಿ ಸಮಿತಿಯವರನ್ನು ಸಂಪರ್ಕಿಸಿ, ನೊಂದಾಯಿತ ಪ್ರತಿನಿಧಿಗಳು ಹಾಗೂ ಗಣ್ಯರ ಮಾಹಿತಿ ಪಡೆದು ಅವರಿಗೆ ವಾಹನದ ವ್ಯವಸ್ಥೆ ಮಾಡಬೇಕು ಎಂದರು.
ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಾರಿಗೆ ವ್ಯವಸ್ಥೆಗಾಗಿ ವಾಹನಗಳು ಹಾಗೂ ಇತರೆ ವೆಚ್ಚಕ್ಕಾಗಿ ಸಾರಿಗೆ ಸಮಿತಿಗೆ ಹಂಚಿಕೆಯಾಗಿರುವ ಅನುದಾನವನ್ನು ಬಹಳ ಜವಾಬ್ದಾರಿಯುತವಾಗಿ ವೆಚ್ಚ ಮಾಡಿ ಸಮ್ಮೇಳನದ ಯಶಸ್ವಿಗೆ ಕಾರಣಕರ್ತರಾಗೋಣ ಎಂದರು.
ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದಂತೆ ಸರ್ಕಾರಿ ವಾಹನ ಹಾಗೂ ಖಾಸಗಿ ವಾಹನಗಳನ್ನು ಪಡೆಯಬೇಕು. ಖಾಸಗಿ ಶಾಲೆಗಳು ಮತ್ತು ಕಾಲೇಜುಗಳ ವತಿಯಿಂದ ವಾಹನಗಳನ್ನು ಪಡೆದು ಸಮ್ಮೇಳನದಲ್ಲಿ ಪಾಲ್ಗೊಳ್ಳುವವರಿಗೆ ಅನುಕೂಲ ಮಾಡಿಕೊಡಬೇಕು. ಸಮ್ಮೇಳನ ನಡೆಯುವ ಮೂರು ದಿನವೂ ಸುಗಮ ಸಂಚಾರಕ್ಕೆ ಅನುವಾಗಲು ವಾಹನಗಳಿಗೆ ಟೋಲ್ ವಿನಾಯಿತಿ ನೀಡಬೇಕು. ಸಮ್ಮೇಳನದ ಸಾರಿಗೆ ಕರ್ತವ್ಯಕ್ಕೆ ನಿಯೋಜನೆಗೊಂಡ ವಾಹನಗಳಿಗೆ ಅಧ್ಯಕ್ಷರ ಸಹಿಯನ್ನೊಳಗೊಂಡ ಪಾಸ್ ಮತ್ತು ಗುರುತಿನ ಚೀಟಿ ನೀಡಬೇಕು. ಆ ವಾಹನಗಳಿಗೆ ಟೋಲ್ ನಲ್ಲಿ ವಿನಾಯಿತಿ ನೀಡಬೇಕು ಎಂದು ಸೂಚಿಸಿದರು.
ಪಾರ್ಕಿಂಗ್ ವ್ಯವಸ್ಥೆ
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಂಚರಿಸುವ ವಾಹನಗಳಿಗೆ ಸೂಕ್ತ ರೀತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಶ್ರೀರಂಗಪಟ್ಟಣದ ಕಡೆಯಿಂದ ಸಮ್ಮೇಳನಕ್ಕೆ ಆಗಮಿಸುವ ವಾಹನಗಳಿಗೆ ಒಂದು ಪಾರ್ಕಿಂಗ್ ವ್ಯವಸ್ಥೆ ಹಾಗೂ ಮದ್ದೂರು ಕಡೆಯಿಂದ ಬರುವ ವಾಹನಗಳಿಗೆ ಮತ್ತೊಂದು ಪಾರ್ಕಿಂಗ್ ವ್ಯವಸ್ಥೆ ಆಗಬೇಕು ಎಂದರು.
ಸಮ್ಮೇಳನಕ್ಕೆ ನಿಯೋಜನೆಗೊಂಡ ವಿಶೇಷ ವಾಹನಗಳಿಗೆ ಅಧಿಕೃತ ನಾಮಫಲಕವನ್ನು ವಾಹನಗಳಿಗೆ ಅಳವಡಿಸಬೇಕು. ಒಂದು ವೇಳೆ ಸಮ್ಮೇಳನಕ್ಕೆ ನಿಯೋಜನೆಗೊಂಡ ಯಾವುದೇ ವಾಹನಗಳು ಕೆಟ್ಟು ನಿಂತರೆ ಆ ವಾಹನಗಳನ್ನು ಸಾಗಿಸಲು ಕ್ರೇನ್ ವ್ಯವಸ್ಥೆ ಮಾಡಬೇಕು ಎಂದರು.
ಸಮ್ಮೇಳನಕ್ಕಾಗಿ ಆಗಮಿಸುವ ಸಾರ್ವಜನಿಕರಿಗೆ ಉಚಿತವಾಗಿ ಕೆಎಸ್ ಆರ್ ಟಿಸಿ ಬಸ್ಸುಗಳ ವ್ಯವಸ್ಥೆ ಹಾಗೂ ವಾಹನಗಳ ಪಾರ್ಕಿಂಗ್ ಸ್ಥಳದಲ್ಲಿ ಆಂಬುಲೆನ್ಸ್, ಫೈರ್ ಫೈಟರ್, ವಿದ್ಯುತ್ ಹಾಗೂ ಪ್ರಥಮ ಚಿಕಿತ್ಸೆ ಕಲ್ಪಿಸುವ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ನಾಗರಾಜು, ಕರ್ನಾಟಕ ರಾಜ್ಯ ಮತ್ತು ಗ್ರಾಮೋದ್ಯೋಗ ಮಂಡಳಿಯ ಕಾರ್ಯದರ್ಶಿ ಸುಧಾಮ ಹೆಚ್.ಆರ್., ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಹೇಮಾವತಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಚೆಲುವಯ್ಯ, ನಗರಸಭೆ ಸದಸ್ಯರುಗಳಾದ ಮಂಜುನಾಥ್, ರವಿ, ಮಂಜು, ನೆಹರು ಯುವ ಕೇಂದ್ರದ ನಿವೃತ್ತ ಮುಖ್ಯ ಲೆಕ್ಕಾಧಿಕಾರಿ ಹೆಚ್.ಎಂ. ಬಸವರಾಜು, ಅಬಕಾರಿ ಇಲಾಖೆಯ ಉಪ ಆಯುಕ್ತರಾದ ರವಿಶಂಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Key words: Kannada Literary Conference, transportation, MLA, KM Uday