ಮೈಸೂರು, ನವೆಂಬರ್,19,2024 (www.juskannada.in): ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ವಸ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಉದಯೋನ್ಮುಖ ಪ್ರವೃತ್ತಿಗಳು ಎಂಬ ವಿಷಯದ ಕುರಿತು ಒಂದು ದಿನದ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಮೈಸೂರು ವಿಶ್ವವಿದ್ಯಾನಿಲಯದ ಬಹದ್ದೂರ್ ವ್ಯವಹಾರ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ತೈವಾನ್ ದೇಶದ, ರಾಷ್ಟ್ರೀಯ ತೈವಾನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದ ಪ್ರೊಫೆಸರ್ ವೀಸಾಂಗ್ ಹಂಗ್ ಅವರು ನೀರು ಶುದ್ಧೀಕರಣದಲ್ಲಿ ತಂತ್ರಜ್ಞಾನದ ಕುರಿತು ಮಾತನಾಡಿದರು.
ನವೀನ ಮತ್ತು ಉನ್ನತೀಕರಿಸಿದ ಗ್ರಾಫಿಕ್ ತಂತ್ರಜ್ಞಾನದಿಂದ ನೀರನ್ನು ಶುದ್ಧೀಕರಣ ಮಾಡುವ ವಿಧಾನದಿಂದ ಆಗುವ ಪ್ರಯೋಜನಗಳ ಕುರಿತು ಮಾತನಾಡಿದ ಅವರು, ಸದರಿ ತಂತ್ರಜ್ಞಾನ ಆಧುನಿಕ ಹಾಗೂ ಮುಂದುವರಿದ ತಂತ್ರಜ್ಞಾನವಾಗಿದ್ದು ಇದರಿಂದ ಯಾವುದೇ ವ್ಯತಿರಿಕ್ತವಾದ ಪರಿಣಾಮಗಳು ಮಾನವ ಮತ್ತು ಪರಿಸರದ ಮೇಲೆ ಆಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೊಂದು ಸರಳ ತಂತ್ರಜ್ಞಾನ. ಇದರಿಂದ ಯಾವುದೇ ಅಡ್ಡ ಪರಿಣಾಮವಾಗಲಿ, ಹೆಚ್ಚು ಹೊರೆಯಾಗಲಿ ಆಗುವುದಿಲ್ಲ. ಹಾಗಾಗಿ ಇದು ಮುಂದುವರಿಯುತ್ತಿರುವ ಭಾರತದಂತಹ ರಾಷ್ಟ್ರಗಳಿಗೆ ಪರಿಣಾಮಕಾರಿಯಾದ ವಿಜ್ಞಾನ ಮತ್ತು ತಂತ್ರಜ್ಞಾನ ವಾಗಿದೆ ಎಂದರು.
ಉತ್ತಮ ಗ್ರಾಫಿಕ್ ನಿಂದ ನೀರನ್ನು ಶುದ್ಧೀಕರಣ ಮಾಡುವುದರಿಂದ ನೀರು ಉತ್ತಮ ಗುಣಮಟ್ಟದಿಂದ ಕೂಡಿರುತ್ತದೆ ಮತ್ತು ಬಳಕೆಗೆ ಯೋಗ್ಯವಾಗಿರುತ್ತದೆ. ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಮತ್ತು ಇದನ್ನ ಅನುಸರಿಸಿದರೆ ತಗುಲುವ ಖರ್ಚು ಕೂಡ ಕಡಿಮೆ ಪ್ರಮಾಣದಲ್ಲಿ ಇರುತ್ತದೆ, ಎಂದು ಪ್ರತಿಪಾದಿಸಿದ ಅವರು, ಕೈಗಾರಿಕೆಗಳಲ್ಲಿ ಈ ತಂತ್ರಜ್ಞಾನ ಬಳಸುವಂತೆ ಸಲಹೆ ನೀಡಿದರು. ” ಮುಂದುವರಿಯುತ್ತಿರುವ ಭಾರತದಂತಹ ಹಲವು ರಾಷ್ಟ್ರಗಳಲ್ಲಿ ಕೈಗಾರಿಕೆಗಳಲ್ಲಿ ಈ ತಂತ್ರಜ್ಞಾನ ಬಳಸಬೇಕು. ಇದರಿಂದ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಕಾಣಬಹುದು. ಅದು ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹೇಳಿದರು.
ವಿಚಾರ ಸಂಕಿರಣ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕ ಕೆ.ಹರೀಶ್ ಗೌಡ, ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು ಮಾತನಾಡಿ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ, ಪ್ರಾಯೋಗಿಕ ಜ್ಞಾನ ಮತ್ತು ಸಂಶೋಧನೆ ಗುಣ ವೃದ್ಧಿ ಮಾಡಿಕೊಳ್ಳಲು ಸಲಹೆ ನೀಡಿದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರೊ. ರಾಮಕೃಷ್ಣ ರಾವ್ ಅವರು, ಇತ್ತೀಚಿನ ಸಂಶೋಧನಾ ಬೆಳವಣಿಗೆಗಳ ಬಗ್ಗೆ ಬೆಳಕು ಚಲ್ಲಿದರು. ವಿವಿಧ ರಾಜ್ಯ, ದೇಶಗಳಿಂದ ಸುಮಾರು 400ಕ್ಕೂ ಹೆಚ್ಚು ಸಂಶೋದಕರು, ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿದ್ದರು.
ಎಂ.ಎಲ್.ಸಿ ಕೆ.ವಿವೇಕಾನಂದ , ಕಾಲೇಜಿನ ಪ್ರಾಂಶುಪಾಲ ಪ್ರೊ.ಅಬ್ದುಲ್ ರಹಿಮಾನ್ ಎಂ, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಡಾ.ವಿ.ನಂದಕುಮಾರ್, ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ಸಂಯೋಜಕ ಡಾ.ರವಿಶಂಕರ್ ಡಿ.ಕೆ, ಎಲ್ಲಾ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು, ಕಾಲೇಜಿನ ಸ್ನಾತಕೋತ್ತರ ಮತ್ತು ಸ್ನಾತಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Key words: mysore, maharani college, Water Resource, seminar