ಮೈಸೂರಿನಲ್ಲಿ ಮತ್ತೊಂದು ಹೆಜ್ಜೆಯಿಟ್ಟ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆ: ನ.22 ರಂದು ಕ್ವೆಸ್ಟ್ ಅಕಾಡೆಮಿಗೆ ಚಾಲನೆ

ಮೈಸೂರು,ನವೆಂಬರ್,20,2024 (www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಮತ್ತೊಂದು ಹೆಜ್ಜೆಯಿಟ್ಟಿದ್ದು, ರಾಜ್ಯದಲ್ಲಿ 88ನೇ ಶಾಲೆಯಾಗಿ ಕ್ವೆಸ್ಟ್ ಅಕಾಡೆಮಿಗೆ ಇದೇ ನವೆಂಬರ್ 22ರಂದು  ಚಾಲನೆ ಸಿಗಲಿದೆ.

ಈ ಕುರಿತು ಇಂದು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಎಸ್ ಎಸ್ ಇಎಸ್  ಚೇರ್ಮನ್ ಆಫೀಸ್ ಆದ ಡಾ. ವಿವೇಕ್ ವೀರಯ್ಯ ಅವರು,  ಮೈಸೂರಿನ ಶುಭಾಶನಗರದಲ್ಲಿ ತಲೆ ಎತ್ತಿರುವ ಕ್ವೆಸ್ಟ್ ಅಕಾಡೆಮಿ ಶಾಲೆಗೆ ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರು  ನವೆಂಬರ್ 22ರ ಶುಕ್ರವಾರದಂದು ಬೆಳಿಗ್ಗೆ 11ಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವರಾದ ಕೆ.ವೆಂಕಟೇಶ್, ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಪಾಲ್ಗೊಳ್ಳಲಿದ್ದಾರೆ. ಖ್ಯಾತ ಶಿಕ್ಷಣ ತಜ್ಞರಾದ ಡಾ.ಅಬ್ರಾಹಂ ಎಬನೇಜರ್, ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್, ನಿರ್ದೇಶಕರಾದ ಕನ್ನಿಕಾ ಪರಮೇಶ್ವರಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ಗುಣ ಮಟ್ಟದ ಶಿಕ್ಷಣ ನಕಾಶೆಯಲ್ಲಿ ತನ್ನದೇ ಆದ ಹೆಜ್ಜೆಗುರುತು ಮೂಡಿಸುವಲ್ಲಿ ‘ಶ್ರೀಸಿದ್ಧಾರ್ಥ ಶಿಕ್ಷಣ ಸಂಸ್ಥೆ’ ಪ್ರಮುಖವಾಗಿದೆ. ಇದೀಗ ಮೈಸೂರಿನಲ್ಲಿ 88ನೇ ಶಾಲೆಯಾಗಿ ಕ್ವೆಸ್ಟ್ ಅಕಾಡೆಮಿ ರೂಪುಗೊಂಡಿದೆ. ಇಲ್ಲಿ ಪ್ರೀ ಯುಕೆಜಿ ಇಂದ 7 ನೇ ತರಗತಿಯ ತನಕ ಸಿಬಿಎಸ್ಸಿ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಈಗ ಸಂಸ್ಥೆಯ ರೂವಾರಿಯಾಗಿರುವ ಡಾ.ಜಿ.ಪರಮೇಶ್ವರ್ ಅವರ ಕಠಿಣ ಪರಿಶ್ರಮದ ಫಲದಿಂದ ಇದು ಸಾಧ್ಯವಾಗಿದೆ. ಪ್ರಾಧಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ತನ್ನ ರೆಕ್ಕೆಗಳನ್ನು ಚಾಚಿ ಬೃಹತ್‌ ಆಲದಮರದಂತೆ ರಾಜ್ಯದಲೆಲ್ಲಡೆ ತನ್ನ ಬೇರುಗಳನ್ನು ಬಿಟ್ಟುಕೊಂಡಿದೆ. ಆ ಎಲ್ಲಾ ಸಂಸ್ಥೆಗಳ ಉಳಿಸಿ-ಬೆಳೆಸಿ. ಅಲ್ಲಿಆಧುನಿಕ ಗುಣಮಟ್ಟಕ್ಕೆ, ಜನಸಾಮಾನ್ಯ ಮಕ್ಕಳು ಶಿಕ್ಷಣ ಪಡೆಯಬೇಕು ಎನ್ನುವ ಹೆಬ್ಬಯಕೆ-ತವಕ ಅವರಲ್ಲಿದೆ. ಹಾಗಾಗಿ ಡಾ.ಜಿ.ಪರಮೇಶ್ವರ್ ಅವರು ಸದಾ ಒರ್ವ ವಿಜ್ಞಾನಿಯಂತೆ-ಸಂಶೋಧಕರಂತೆ ಹೊಸ-ಹೊಸ ಸವಾಲುಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಾ ಶೈಕ್ಷಣಿಕ ಸುಧಾರಣೆಗಳ ಜಾರಿಗೆ ಒತ್ತು ನೀಡುತ್ತಿದ್ದಾರೆ ಎಂದು ಡಾ. ವಿವೇಕ್ ವೀರಯ್ಯ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ  ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೇಶವಮೂರ್ತಿ   ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ್ ಚಕ್ಕಡಿ,  ಜಿಲ್ಲಾಧ್ಯಕ್ಷರು ಡಾ.ಜಿ. ಪರಮೇಶ್ವರ್ ಅಭಿಮಾನಿ ಬಳಗ ಯುವ ಸೇನೆ ಜಿಲ್ಲಾಧ್ಯಕ್ಷರಾದ ಮಂಜುನಾಥ್ ಸಿ,  ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿ  ವಕ್ತಾರರಾದ ಮಹೇಶ್ ಕೆ ಉಪಸ್ಥಿತರಿದ್ದರು.

ಸಂಸ್ಥೆಯ ಸಂಕ್ಷಿಪ್ತ ಪರಿಚಯ:

ಅಕ್ಷರವೇ ಆಸ್ತ್ರ ಎಂಬ ಸಂದೇಶ ಸಾರಿದ ಗಂಗಾಧರಯ್ಯನವರ ಕಾಣಿಕೆಯೆ ಸಿದ್ದಾರ್ಥ ಶಿಕ್ಷಣ ಸಂಸ್ಥೆ. 1958ರಲ್ಲಿ ರಾಜ್ಯದ ಶಿವಮೊಗ್ಗದ ಸಾಗರ ತಾಲ್ಲೂಕಿನ ಕಾಗೋಡುವಿನಲ್ಲಿ “ಭೂ ದಾನ ಚಳುವಳಿ” ಚಳುವಳಿ ಆರಂಭವಾಗಿತ್ತು. ಇದೇ ವೇಳೆಗೆ ಸರಿಯಾಗಿ ಸರ್ವೋದಯದ ನೇತಾರರಾಗಿದ್ದ ವಿನೋಬಾ ಆರಂಭಿಸಿದ ಚಳುವಳಿ ದೇಶದೆಲ್ಲೆಡೆ ಸಂಚರಿಸಿ ತುಮಕೂರಿಗೆ ಬಂದಾಗ ಸುಮಾರು 200 ಮಂದಿ ತಂಡ ಗೊಲ್ಲಹಳ್ಳಿಯಲ್ಲಿ ಗಂಗಾಧರಯ್ಯನವರ ಮನೆಯಲ್ಲಿ ವಾಸ್ತವ್ಯ ಹೂಡಿತ್ತು. ವಿನೋಬಾ ಅವರ ಸಾಮಾಜಿಕ ಕಳಕಳಿ ಮತ್ತು ಬದ್ಧತೆಯ ಸಂದೇಶವನ್ನು ಸ್ವೀಕರಿಸಿದ ಶಿಕ್ಷಣ ಭೀಷ್ಮರು ದುರ್ಬಲ ವರ್ಗದ ಎಲ್ಲ ಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಚಿಂತಿಸತೊಡಗಿದರು ಅದರ ಫಲವೇ ಇಂದಿನ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆ”,

1959ರಲ್ಲಿ ಉಚಿತ ವಿದ್ಯಾರ್ಥಿನಿಲಯಗಳನ್ನು ಸೇರಿಸಿ ‘ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆ’ ಆರಂಭಿಸಿದರು. ಗೊಲ್ಲಹಳ್ಳಿಯಲ್ಲಿ ಅದೇ ವರ್ಷ ಜೂನ್ ತಿಂಗಳಲ್ಲಿ ಡಾ.ಶಿವಕುಮಾರ ಸ್ವಾಮಿಗಳಿಂದ ‘ಶ್ರೀ ಸಿದ್ದಾರ್ಥ ಪ್ರೌಢಶಾಲೆ’ಗೆ ಚಾಲನೆ ದೊರೆಯಿತು. ಮೂವತ್ತೈದು ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಪ್ರೌಢಶಾಲೆ ಇಂದಿಗೂ ಗೊಲ್ಲಹಳ್ಳಿಯ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಅಷ್ಟೆ ಅಲ್ಲದೆ ದೇಶದ ವಿವಿಧೆಡೆಯಿಂದ ಆಗಮಿಸುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಅಷ್ಟೇ ಅಲ್ಲ ಶ್ರೀ ಸಿದ್ಧಾರ್ಥ ಸಂಸ್ಥೆಯ ಶಾಲಾ-ಕಾಲೇಜುಗಳು ಬೆಂಗಳೂರು, ಮಂಡ್ಯ ಹಾಸನ, ಕಲ್ವುರ್ಗಿ, ಶಿವಮೊಗ್ಗ ಕೋಲಾರ ಅಲ್ಲದೆ ರಾಜ್ಯದ 10 ಜಿಲ್ಲೆಗಳ ಮೂಲೆಮೂಲೆಗಳಲ್ಲಿ ಶಿಕ್ಷಣದ ಕಂಪು ಪಸರಿಸುತ್ತಿವೆ.

ಮಾಧ್ಯಮ ಕಳಕಳಿ: ರೇಡಿಯೋ ಮತ್ತು ಟೆಲಿವಿಷನ್ ಕೇಂದ್ರ;

ವಾಣಿಜ್ಯ ಕೋರ್ಸ್‌ ಗಳಿಗೆ ಅಷ್ಟೆ ಅಲ್ಲದೆ ಸಾಮಾಜಿಕ ಕಳಕಳಿಯ ಕೋರ್ಸ್‌ಗಳನ್ನು ಆರಂಭಿಸಲು ಸಂಸ್ಥೆ ಹಿಂದೆ ಬಿದ್ದಿಲ್ಲ. 2004-05 ರಲ್ಲಿ ತುಮಕೂರಿನಲ್ಲಿ ಎಂ.ಎ ಪತ್ರಿಕೋದ್ಯಮ ಮತ್ತು ಎಂ.ಎಸ್ಸಿ ಎಲೆಕ್ಟ್ರಾನಿಕ್ ಮಿಡಿಯಾ ಕೋರ್ಸ್‌ಗಳ ಆರಂಭ. ನಂತರ ಸಮುದಾಯದ ಸಾಮಾಜಿಕ ಕಳಕಳಿಯ ಆಶಯವನ್ನು ಇಟ್ಟುಕೊಂಡು ರೇಡಿಯೋ ಸಿದ್ದಾರ್ಥ-90.8 ಎಫ್.ಎಂ ಕೇಂದ್ರ ಹಾಗೂ ಸಿದ್ದಾರ್ಥ ಟೆಲಿವಿಷನ್ ಕೇಂದ್ರ ಆರಂಭವಾಗಿದೆ.

ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದ ತನಕ ಎಲ್ಲ ಕೋರ್ಸ್‌ಗಳನ್ನು ಒಳಗೊಂಡ ಒಟ್ಟು 88 ಶಿಕ್ಷಣ ಸಂಸ್ಥೆಗಳು ರಾಜ್ಯದ 10 ಜಿಲ್ಲೆಗಳಲ್ಲಿವೆ. ನ್ಯಾಕ್ ನಿಂದ ಎ+ ಶ್ರೇಣಿ ಪಡೆದಿರುವ ತುಮಕೂರಿನ ಶ್ರೀ ಸಿದ್ದಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್(ಸಾಹೇ ವಿವಿ) ಸ್ವಾಯತ್ತ ವಿಶ್ವವಿದ್ಯಾನಿಲಯ, ತುಮಕೂರಿನಲ್ಲಿರುವ ವೈದ್ಯಕೀಯ ಕಾಲೇಜಿನ ಜೊತೆಗೆ ಬೆಂಗಳೂರಿನಲ್ಲಿ ತಲೆ ಎತ್ತುತ್ತಿರುವ ಇನ್ನೊಂದು ವೈದ್ಯಕೀಯ ಕಾಲೇಜು ಸೇರ್ಪಡೆಯಾಗಿದೆ (2 ಮೆಡಿಕಲ್ ಕಾಲೇಜುಗಳು) ದಂತ ವೈದ್ಯ ಮಹಾವಿದ್ಯಾಲಯ-1, ಇಂಜಿನಿಯರಿಂಗ್ ಕಾಲೇಜು-2, ದಾದಿಯರ ತರಬೇತಿ ಕೇಂದ್ರ ಹಾಗೂ ಕಾಲೇಜು-4, ಪ್ರಥಮ ದರ್ಜೆ ಕಾಲೇಜು-2 ಡಿ.ಎಡ್ ಮತ್ತು ಬಿ.ಇಡ್ ಕಾಲೇಜುಗಳು-4, ಜೂನಿಯರ್ ಕಾಲೇಜು-6. ನರ್ಸರಿ ಶಿಕ್ಷಕರ ತರಬೇತಿ ಶಾಲೆ, ಪ್ರೌಢಶಾಲೆಗಳು-22, ಪಾಲಿಭಾಷೆ ಭೋದನಾ ಕೆಂದ್ರ, ಸಂಸ್ಕೃತ ಪಾಠಶಾಲೆಗಳು -08, ಸಿದ್ದಾರ್ಥ ಐಟಿಐ- 2. ಪಿಯುಸಿ, ಶ್ರೀ ಮೆಟ್ರಿಕ್ ಮತ್ತು ಪದವಿ ಕಾಲೇಜು ವಸತಿ ನಿಲಯಗಳು-20.. ಹೀಗೆ ಎಲ್ಲ ಪ್ರಕಾರಗಳಲ್ಲಿ ಶೈಕ್ಷಣಿಕ ವ್ಯಾಸಾಂಗ ಅವಕಾಶವನ್ನು ರಾಜ್ಯದ ಗ್ರಾಮಾಂತರ ಪ್ರದೇಶದಲ್ಲಿ ಸ್ಥಾಪಿಸಿರುವುದು ಗಂಗಾಧರಯ್ಯನವರ ಸಾಮಾಜಿಕ ಬದ್ದತೆ ಮತ್ತು ಕಳಕಳಿಯನ್ನು ಪ್ರತಿಬಿಂಬಿಸುತ್ತದೆ.

ಶ್ರೀ ಸಿದ್ಧಾರ್ಥ ಸಮೂಹ ಶಿಕ್ಷಣ ಸಂಸ್ಥೆಯ 60 ವರ್ಷಗಳ ಸುದೀರ್ಘ ಶೈಕ್ಷಣಿಕ ಕ್ರಾಂತಿಯಲ್ಲಿ ಈಗಾಗಲೇ 1.5 ಲಕ್ಷ ವಿದ್ಯಾಥಿಗಳು ಶಿಕ್ಷಣ ಪಡೆದಿದ್ದಾರೆ. ಅವರಲ್ಲಿ 35 ಸಾವಿರ ಇಂಜಿನಿಯರ್‌ ಗಳು, 6 ಸಾವಿರ ವೈದ್ಯರು, 2 ಸಾವಿರ ದಂತ ವೈದ್ಯರು, 15 ಸಾವಿರ ಪದವೀಧರರು ಇದ್ದಾರೆ. 100ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಹಳೆ ವಿದ್ಯಾರ್ಥಿಗಳ ಸಮೂಹವನ್ನು ಸಂಸ್ಥೆ ಕಂಡಿದೆ.

ಮಹಾತ್ಮ ಗಾಂಧಿ, ಡಾ.ಅಂಬೇಡ್ಕರ್.ವಿನೋಬಾ ರಂತ ಮಹಾನೀಯರ ಪ್ರಭಾವದಿಂದ ಪ್ರೇರಿತರಾಗಿ ಗೌತಮ ಬುದ್ಧನ ವಿಚಾರಧಾರೆಗಳಿಗೆ ಬದ್ದರಾಗಿ ಸಮಾಜದಲ್ಲಿ ಏನೆಲ್ಲಾ ಸಾಧನೆ ಮಾಡಬಹುದು ಎಂಬುದಕ್ಕೆ ಡಾ. ಗಂಗಾಧರಯ್ಯನವರು ಬೆಳೆಸಿದ ಶಿಕ್ಷಣ ಸಂಸ್ಥೆಯ ಹೆಮ್ಮರ ವಾಗಿ ಬೆಳೆಯುತ್ತಿದೆ. ಕುಗ್ರಾಮದ ಹುಡುಗನಿಂದ ಹಿಡಿದು ದೇಶ-ವಿದೇಶ ಲಕ್ಷಾಂತರ ವಿದ್ಯಾಥಿಗಳು ಜ್ಞಾನದಾಸೋಹವನ್ನು ಪಡೆದುಕೊಳ್ಳುತ್ತಿದ್ದಾರೆ. ಇಂತಹ ಸಂಸ್ಥೆಯನ್ನು ಜೋಪಾನವಾಗಿ ಉಳಿಸಿ- ಬೆಳೆಸಿಕೊಳ್ಳುವ ಜವಾಬ್ದಾರಿಯನ್ನು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಸಾಹೇ ವಿವಿ ಕುಲಾಧಿಪತಿಯಾಗಿರುವ ಡಾ.ಜಿ.ಪರಮೇಶ್ವರ್ ಅವರು ಹೊತ್ತು ಮುನ್ನಡೆಸುತ್ತಿದ್ದಾರೆ.

Key words: Sri Siddhartha Educational Institution, Mysore, Quest Academy