ವಕ್ಫ್ ಆಸ್ತಿ ವಿವಾದ : ಅನ್ಯಾಯ ಖಂಡಿಸಿ ನಾಳೆ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ- ಎಲ್.ನಾಗೇಂದ್ರ

ಮೈಸೂರು,ನವೆಂಬರ್,21,2024 (www.justkannada.in):  ವಕ್ಫ್ ಆಸ್ತಿ ವಿವಾದ ಸಂಬಂಧ ರಾಜ್ಯದ ಜನರಿಗೆ ಆಗುತ್ತಿರುವ ಅನ್ಯಾಯವನ್ನ  ಖಂಡಿಸಿ ನಾಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ನಗರ ಅಧ್ಯಕ್ಷ ಎಲ್ ನಾಗೇಂದ್ರ ತಿಳಿಸಿದರು.

ವಕ್ಫ್ ಆಸ್ತಿ ವಿವಾದ ವಿಚಾರ ಕುರಿತು ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ಮೈಸೂರು ಜಿಲ್ಲಾ ಬಿಜೆಪಿ ವತಿಯಿಂದ ಸುದ್ದಿಗೋಷ್ಠಿ ನಡೆಯಿತು.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಎಲ್ ನಾಗೇಂದ್ರ, ರಾಜ್ಯದಲ್ಲಿ ವಕ್ಪ್ ಪ್ರಾಪರ್ಟಿ ಹಕ್ಕು ಬದಲಾವಣೆ ಇಡೀ ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ. ರಾಜ್ಯ ಸರ್ಕಾರದ ತುಷ್ಠಿಕರಣ ರಾಜಕಾರಣ ಮಾಡಲು ಹೊರಟಿದೆ. ಇವತ್ತು ರಾಜ್ಯದ ರೈತರಿಗೆ ಆತಂಕವನ್ನ ತಂದಿಟ್ಟಿದೆ. ಮಠ ಮಾನ್ಯ ಆಸ್ತಿಗಳು, ರುದ್ರಭೂಮಿಗಳು, ಶಾಲಾ ಕಾಲೇಜುಗಳ ಆಸ್ತಿಗೆ ಧಕ್ಕೆ ಬಂದಿದೆ. ಅವುಗಳ ರಕ್ಷಣೆಗೆ ನಮ್ಮ ಪಕ್ಷ ಮುಂದಾಗಿದೆ. ಮೂರು ತಂಡಗಳ ಮಾಡಿ ಇಡೀ ರಾಜ್ಯ ಪ್ರವಾಸ ಮಾಡಲು ಹೊರಟಿದೆ. ನಮ್ಮ ಭೂಮಿ ನಮ್ಮ ಹಕ್ಕು ಅಭಿಯಾನ ಮಾಡುತ್ತಿದ್ದೇವೆ. ಈಗಾಗಲೇ ಸಹಾಯವಾಣಿಯನ್ನ ತೆರೆಯಲಾಗಿದೆ. ಮೈಸೂರಿನಲ್ಲಿ ಸಹಾಯವಾಣಿಯಲ್ಲಿ 7 ಜನರನ್ನೂ ನೇಮಿಸಲಾಗಿದೆ. ವಕ್ಫ್ ಸಂಬಂಧ ರೈತರಿಗೆ ಸಮಸ್ಯೆ ಆಗಿದ್ದರೆ ನಮಗೆ ಕರೆ ಮಾಡಬಹುದು ಎಂದು ತಿಳಿಸಿದರು.

ಇಲವಾಲದ ಸರ್ವೆ ನಂಬರ್ 54 ಗುಂಡೂರಾವ್ ನಗರದ ಸ್ಮಶಾನ ಕೂಡ ವಕ್ಫ್ ಆಸ್ತಿ ಎಂದು ಆಗಿದೆ. ಎಲ್ಲಾ ಕಡೆ ನಾವು ಮಾಹಿತಿಯನ್ನು ಕಲೆ ಹಾಕುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಹುಣಸೂರಿನ ಕಟ್ಟೆಮಳಲವಾಡಿ ಸ್ಮಶಾನ ಕೂಡ ವಕ್ಫ್ ಆಸ್ತಿ ಎಂದು ಆಗಿದೆ. ರಂಗಸಮುದ್ರದಲ್ಲಿ ಆರ್ ಟಿಸಿ ಬದಲಾವಣೆ ಆಗಿದೆ. ಈ ರೀತಿ ಬದಲಾವಣೆಯನ್ನ ಸರ್ಕಾರ ಬದಲಾವಣೆ ಮಾಡಿದೆ. ಹಿಂದೆ ಇದ್ದ ವಕ್ಪ್ ಆಸ್ತಿಗೆ ನಮ್ಮ ತಕರಾರು ಇಲ್ಲ. ಆದರೆ, ರೈತರು ಉಳುಮೆ ಮಾಡುತ್ತಿದ್ದ ಜಮೀನಿನ ಆರ್ ಟಿಸಿ ಬದಲಾವಣೆ ಆಗಿರುವುದು ಖಂಡನೀಯ ಎಂದರು.

ಸರ್ಕಾರ ಒಂದು ಕಡೆ ಆದೇಶ ಮಾಡುತ್ತೆ, ಇನ್ನೊಂದು ಕಡೆ ಆದೇಶ ಹಿಂಪಡೆಯುತ್ತೆ ಯಾಕೆ ಈ ಇಬ್ಬಂದಿ ನಡೆ ..? ನಮ್ಮ ದೇಶದ ಕಾನೂನು ನಮ್ಮ ಸಂವಿಧಾನ ಸಂವಿಧಾನದಲ್ಲಿ ವಕ್ಪ್ ಬಗ್ಗೆ ಉಲ್ಲೇಖವೇ ಇಲ್ಲ. ಸಂವಿಧಾನದಲ್ಲಿ ಈ ವಿಚಾರ ಅಡಕ ಆಗಿಲ್ಲ. ವಕ್ಫ್ ಮಂಡಳಿಗೆ ಸಾವಿರಾರು ಎಕರೆ ಅಸ್ತಿ ಹೇಗೆ ಬಂತು.? ಇದಕ್ಕೆ ರೈತರು, ಮಠಮಾನ್ಯಗಳು, ಕ್ರೈಸ್ತರು, ಎಸ್ಸಿ,ಎಸ್ಟಿ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಸಿದ್ದರಾಮಯ್ಯ ಅವರ ಸರ್ಕಾರ ಬಂದ ಮೇಲೆ ಅಗತ್ಯ ವಸ್ತುಗಳ ಮೇಲೂ ಬೆಲೆ ಏರಿಕೆ ಆಯಿತು. ಹತ್ತಾರು ಹಗರಣಗಳು ನಡೆದವು, ಒಂದು ಸಮುದಾಯದ ಓಲೈಕೆಗೋಸ್ಕರ ಸರ್ಕಾರ ಈ ಕೆಲಸ ಮಾಡುತ್ತಿದೆ. ರೈತರ ಹಕ್ಕನ್ನ ಕಸಿಯುವ ಕೆಲಸ ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ವಕ್ಫ್ ಆಸ್ತಿ ವಿವಾದ ರಾಜ್ಯದ ಜನರಿಗೆ ಆಗುತ್ತಿರುವ ಅನ್ಯಾಯವನ್ನ  ಖಂಡಿಸಿ ನಾಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ಬೆಳಗ್ಗೆಯಿಂದ ಸಂಜೆವರೆಗೂ ದೊಡ್ಡ ಧರಣಿಯನ್ನ ಹಮ್ಮಿಕೊಳ್ಳಲಾಗಿದೆ ಎಂದರು.

ಸುದ್ದಿ ಗೋಷ್ಠಿಯಲ್ಲಿ ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಎಲ್ ಆರ್. ಮಹದೇವಸ್ವಾಮಿ, ಶಾಸಕ ಶ್ರೀವತ್ಸ, ಗ್ರಾಮಾಂತರ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ, ಎನ್ ಆರ್ ಕ್ಷೇತ್ರದ ಬಿಜೆಪಿ ಮುಖಂಡ ಸಂದೇಶ್ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಗಿರಿಧರ್, ಮಿರ್ಲೇ ಶ್ರೀನಿವಾಸ ಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು.

Key words: Waqf property, dispute, Massive protest,  Mysore, tomorrow, L. Nagendra