ಮೈಸೂರು,ನವೆಂಬರ್,22,2024 (www.justkannada.in): ರಾಜ್ಯ ಸರ್ಕಾರವು ರೈತರು, ಮಠ-ಮಾನ್ಯಗಳ ಭೂಮಿ ಕಸಿಯುವ ದುರಾಕ್ರಮಣ ನೀತಿ ಅನುಸರಿಸುತ್ತಿದೆ ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ರಘು ಕೌಟಿಲ್ಯ ವಾಗ್ದಾಳಿ ನಡೆಸಿದರು.
ಇಂದು ಮೈಸೂರಿನಲ್ಲಿ ವಕ್ಫ್ ಕಾಯ್ದೆ ವಿರುದ್ಧದ ʼನಮ್ಮ ಭೂಮಿ, ನಮ್ಮ ಹಕ್ಕುʼ ಹೆಸರಿನಲ್ಲಿ ನಡೆದ ಬಿಜೆಪಿ ಪ್ರತಿಭಟನೆಯ ವೇಳೆ ಮಾತನಾಡಿದ ರಘು ಕೌಟಿಲ್ಯ, ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಅಲ್ಲಾವುದ್ದೀನ್ ಖಿಲ್ಜಿ ತನ್ನ ಬಂಟ ಮಲ್ಲಿಕಾಫರ್ ನ್ನು ಛೂ ಬಿಟ್ಟು ಹಿಂದೂ ಸಾಮ್ರಾಜ್ಯಗಳ ಮೇಲೆ ಆಕ್ರಮಣ ನಡೆಸಿದ ಮಾದರಿಯಲ್ಲೇ ಸಚಿವ ಜಮೀರ್ ಅಹ್ಮದ್ ಅವರ ಮೂಲಕ ವಕ್ಫ್ ಹೆಸರಿನಲ್ಲಿ ರೈತರ ಹಾಗೂ ಮಠ-ಮಾನ್ಯಗಳ ಭೂಮಿ ಕಸಿಯುವ ದುರಾಕ್ರಮಣ ನೀತಿ ಅನುಸರಿಸಲಾಗುತ್ತಿದೆ. ಇದನ್ನು ಖಂಡಿಸುವ ಹಾಗೂ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಈ ನೆಲದ ನೈಜ ಭೂಮಾಲೀಕರ ಹಕ್ಕು ಸಂರಕ್ಷಿಸುವುದು ಭಾರತೀಯ ಜನತಾ ಪಾರ್ಟಿಯ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ವಕ್ಫ್ ದಾಳಿಯ ಭೀತಿ ಎದುರಿಸುತ್ತಿರುವವರ ಪರವಾಗಿ ಭಾರತೀಯ ಜನತಾ ಪಾರ್ಟಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರರವರ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದೆ ಎಂದರು.
ರಾಷ್ಟ್ರದಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಮಾನ್ಯ ಪ್ರಧಾನಿ ಮೋದಿ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಜನಾಭಿಪ್ರಾಯ ರೂಪಿಸಲಾಗುತ್ತಿದೆ. ಕೆಲವರು ತಮ್ಮ ಹಿಡನ್ ಅಜೆಂಡಾ ಕಾರ್ಯಗತಗೊಳಿಸಿಕೊಳ್ಳಲು ವಕ್ಫ್ ಹೆಸರಿನಲ್ಲಿ ಬಣ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಹೇಳಿದರು.
ರಾಷ್ಟ್ರದ ಹಿತಾಸಕ್ತಿಗಾಗಿ ಜನ್ಮ ತಾಳಿದ ಭಾರತೀಯ ಜನತಾ ಪಾರ್ಟಿಯ ರಾಜ್ಯ ಘಟಕದಲ್ಲಿ ಯಾವುದೇ ಬಣ ಇಲ್ಲ. ಇರುವುದು ಒಂದೇ ಬಣ, ಅದು ಕೇಸರಿ ಬಣ ಎಂದು ರಘು ಕೌಟಿಲ್ಯ ಹೇಳಿದರು.
ಪ್ರತಿಭಟನೆಯ ವೇದಿಕೆಯಲ್ಲಿ ಜಿಲ್ಲಾಧ್ಯಕ್ಷರುಗಳಾದ ಮಾಜಿ ಶಾಸಕ ನಾಗೇಂದ್ರ, ಎಲ್. ಆರ್. ಮಹದೇವಸ್ವಾಮಿ , ಶಾಸಕ ಶ್ರೀವತ್ಸ, ವಕ್ತಾರ ಎಂ.ಜಿ. ಮಹೇಶ, ಮಾಜಿ ಶಾಸಕ ಬಸವರಾಜು, ಸಂದೇಶ್ ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.
Key words: government, land, farmers, Waqf, Raghu Kautilya