ಬೆಂಗಳೂರು, ನ.23,2024: (www.justkannada.in news) : ಪ್ರಜಾಪ್ರಭುತ್ವದಲ್ಲಿ ಜನರ ಆರ್ಶೀವಾದದಿಂದ ಅಧಿಕಾರಕ್ಕೆ ಬಂದ ಸರಕಾರದ ವಿರುದ್ಧ ವಿಪಕ್ಷಗಳು ನಡೆಸುತ್ತಿದ್ದ ಪಿತೂರಿಗೆ ರಾಜ್ಯದ ಚುನಾವಣೆಯಲ್ಲಿ ಅವರನ್ನು ತಿರಸ್ಕರಿಸುವ ಮೂಲಕ ಜನ ತಕ್ಕ ಉತ್ತರ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತನೀಡಿ, ಆಶೀರ್ವದಿಸಿದ ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣದ ಮತದಾರರಿಗೆ ಡಾ.ಯತೀಂದ್ರ ಸಿದ್ದರಾಮಯ್ಯ ಧನ್ಯವಾದ ಹೇಳಿದ್ದಾರೆ. ಈ ಬಗ್ಗೆ “ ಜಸ್ಟ್ ಕನ್ನಡ “ ಜತೆ ಮಾತನಾಡಿದ ಅವರು ಹೇಳಿದಿಷ್ಟು…
ವಿಪಕ್ಷಗಳ ನಿರಂತರ ಅಪಪ್ರಚಾರ, ಸುಳ್ಳು ಆರೋಪಗಳನ್ನು ರಾಜ್ಯದ ಪ್ರಜ್ಞಾವಂತ ಮತದಾರರು ತಿರಸ್ಕರಿಸಿದ್ದಾರೆ. ಜನರಿಗೆ ರಾಜ್ಯದ ಪ್ರಗತಿ, ಅಭಿವೃದ್ಧಿ ಹಾಗೂ ನೆಮ್ಮದಿಯ ಜೀವನ ನಿರ್ವಹಣೆಯ ಅವಶ್ಯಕತೆ ಇದೆ. ಹಾಗಾಗಿ ನುಡಿದಂತೆ ನಡೆಯುವ “ಗ್ಯಾರಂಟಿ “ ಸರಕಾರದ ಮೇಲೆ ವಿಶ್ವಾಸವಿರಿಸಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ.
ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಸರಕಾರ ಜನತೆಯ ಬಯಕೆ. ಆದರೆ ಕೋಮು ಧ್ವೇಷ ಹರಡಿಸಿ ಅಶಾಂತಿ ಉಂಟು ಮಾಡುವ ವಿಪಕ್ಷಗಳ ಕುತಂತ್ರಕ್ಕೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಆರಂಭದಲ್ಲಿ “ಬಿಟ್ಟಿಭಾಗ್ಯ” ಎಂದು ಟೀಕಿಸುವ ಮೂಲಕ ವಿಪಕ್ಷಗಳು ರಾಜ್ಯದ ಬಡಜನತೆಯನ್ನು ಅಪಹಾಸ್ಯ ಮಾಡಿದ್ದವು. ಜತೆಗೆ ಚುನಾವಣೆ ಸಂದರ್ಭದಲ್ಲಿ ಅನಗತ್ಯ ವಿಷಯಗಳನ್ನು ವಿವಾದಗಳನ್ನಾಗಿಸಿ ಅಶಾಂತಿ ಸೃಷ್ಠಿಸಲು ಯತ್ನಿಸಿದ್ದವು. ಇದೀಗ ಚುನಾವಣೆಯಲ್ಲಿ ಜನತೆ ಇವೆಲ್ಲಕ್ಕೂ ಉತ್ತರ ನೀಡಿದ್ದಾರೆ.
ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಜಯ ದಾಖಲಿಸಿದ್ದಾರೆ. ಪಕ್ಷದ ಅಭ್ಯರ್ಥಿಗಳಾದ ಯಾಸಿರ್ ಅಹ್ಮದ್ ಖಾನ್ ಪಠಾಣ್, ಅನ್ನಪೂರ್ಣ ತುಕಾರಾಮ್ ಹಾಗೂ ಸಿ.ಪಿ. ಯೋಗೇಶ್ವರ್ ಅವರಿಗೆ ಡಾ. ಯತೀಂದ್ರ ಸಿದ್ದರಾಮಯ್ಯ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದರು.
Key words: Dr.Yathindra Siddharamaiah, Thanks Voters, for Supporting, Congress Candidates ,in By-Election