ಮೈಸೂರು, ನ.23,2024: (www.justkannada.in news) ರಾಜ್ಯದ ಮೂರು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ವಿಪಕ್ಷಗಳಾದ ಜೆಡಿಎಸ್- ಬಿಜೆಪಿ ಹೀನಾಯವಾಗಿ ಸೋಲು ಕಂಡಿವೆ. ಇಷ್ಟಾದರೂ ಆ ಪಕ್ಷದ ಮುಖಂಡರುಗಳಿಗೆ ಬುದ್ಧಿ ಬಂದಿಲ್ಲ. ಈಗಲೂ ಅನಗತ್ಯ ಹಾಗೂ ಸುಳ್ಳಿನಿಂದ ಕೂಡಿದ ಹೇಳಿಕೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ನಗರ ಪಾಲಿಕೆ ಮಾಜಿ ಸದಸ್ಯ ಲೊಕೇಶ್ ವಿ.ಪಿಯಾ ಟೀಕಿಸಿದ್ದಾರೆ.
ಚುನಾವಣೆಯಲ್ಲಿ ಗೆಲುವು, ಸೋಲು ಸಹಜ. ಅದು ಮತದಾರರ ಇಚ್ಛಗೆ ಬಿಟ್ಟ ವಿಚಾರ. ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಮತದಾರರನ್ನು ನಿಂದಿಸಿ ಅವಮಾನಿಸುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಹಣದ ಹೊಳೆ ಹರಿಸಿದೆ ಎಂದು ಬಿಜೆಪಿ ಮುಖಂಡರಾದ ಬಸವರಾಜ ಬೊಮ್ಮಾಯಿ, ಆರ್. ಅಶೋಕ್ ನೀಡಿರುವ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್ ಮುಖಂಡ ಲೊಕೇಶ್ ಪಿಯಾ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಬಡವರ ನೆಮ್ಮದಿ ಬದುಕಿಗೆ ಆಸರೆಯಾಗಿದೆ. ಆದ್ದರಿಂದ ಈ ಬಾರಿ ಚುನಾವಣೆಯಲ್ಲಿ ಶೋಷಿತರು, ಬಡವರು ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದಾರೆ. ಆದರೆ ಈ ಸತ್ಯ ಮರೆ ಮಾಚಿ ತಮ್ಮ ಸೋಲಿನ ನೈತಿಕತೆ ಹೊರುವ ಬದಲು, ಮತದಾರರನ್ನೇ ಅವಮಾನಿಸುವ ಕೀಳುಮಟ್ಟಕ್ಕೆ ಬಿಜೆಪಿ ಮುಖಂಡರು ಇಳಿದಿರುವುದು ನಾಚಿಕೆಗೇಡು.
ರಾಜ್ಯದಲ್ಲಿ ದಿನ ಒಂದಲ್ಲ ಒಂದು ವಿಷ ಬೀಜ ಬಿತ್ತುತ್ತ ಜನತೆಯಲ್ಲಿ ದ್ವೇಷ ಭಾವನೆ ಕೆರಳಿಸುತ್ತಿದ್ದ ಬಿಜೆಪಿ ನಾಯಕರ ವರ್ತನೆಯಿಂದ ಕರ್ನಾಟಕದ ಜನ ರೋಸಿ ಹೋಗಿದ್ದಾರೆ. ಈ ಕಾರಣಕ್ಕೆ ಕಳೆದ ಸಾರ್ವತ್ರಿಕ ಚುನಾವಣೆಯಲ್ಲೂ ಅವರಿಗೆ ತಕ್ಕ ಪಾಠ ಕಲಿಸಿದ್ದರು. ಇಷ್ಟಾದರೂ ಬುದ್ಧಿ ಕಲಿಯದ ಬಿಜೆಪಿ ನಾಯಕರು ಮತ್ತೆ ಹಳೇ ಚಾಳಿ ಮುಂದುವರೆಸಿರುವುದು ನೋಡಿದರೆ ರಾಜ್ಯದಲ್ಲಿ ಅವರಿಗೆ ಉಳಿಗಾಲವಿಲ್ಲ ಎಂದೇ ಭಾವಿಸಬೇಕಾಗುತ್ತದೆ.
ಪ್ರಧಾನಿ ಉತ್ತರಿಸಲಿ:
ಚುನಾವಣೆಯಲ್ಲಿ ಗೆದ್ದವರನ್ನು ಹಣದ ಹೊಳೆ ಹರಿಸಿದರು ಎಂದು ಆರೋಪಿಸುವ ಬಸವರಾಜ ಬೊಮ್ಮಾಯಿ ಹಾಗೂ ಆರ್. ಅಶೋಕ್ ಅವರಿಗೆ ನನ್ನದೊಂದು ನೇರ ಸವಾಲು, ನೆರೆಯ ಮಹಾರಾಷ್ಟ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಜಯಗಳಿಸಿದ್ದಾರೆ. ಹಾಗಾದರೆ ಅಲ್ಲೂ ಅವರು ಹಣದ ಹೊಳೆ ಹರಿಸಿ ಚುನಾವಣೆ ಗೆದ್ದರೆ..? ಎಂದು ಲೊಕೇಶ್ ಪಿಯಾ ಪ್ರಶ್ನಿಸಿದ್ದಾರೆ.
ರಾಜ್ಯ ಬಿಜೆಪಿ ನಾಯಕರ ಈ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಸ್ಪಷ್ಟನೆ ನೀಡಬೇಕು. ಕಾರಣ ಬಿಜೆಪಿಯವರು ಮೋದಿ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದು. ಈಗ ಜಯಗಳಿಸಿರುವುದು ಅವರ ನಾಯಕತ್ವದಿಂದಲೂ ಅಥವಾ ಹಣದ ಹೊಳೆಯಿಂದಲೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಈ ಮೂಲಕ ಆಗ್ರಹಿಸುತ್ತೇನೆ ಎಂದಿದ್ದಾರೆ ಲೊಕೇಶ್ ಪಿಯಾ.
key words: Money flow in elections, BJP, insult to voters, PM should clarify, on this allegation.