ನ್ಯಾಷನಲ್ ಕಾಲೇಜಿನ 13ನೇ ಘಟಿಕೋತ್ಸವ: 16 ಚಿನ್ನದ ಪದಕ, 485 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಬೆಂಗಳೂರು, ನವೆಂಬರ್, 25,2024 (www.justkannada.in):  ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ಆಯೋಜಿಸಿದ್ದ 13ನೇ ಘಟಿಕೋತ್ಸವದಲ್ಲಿ ಕಾಲೇಜಿನ ವಿವಿಧ ವಿಭಾಗದ ಒಟ್ಟು ಹದಿನಾರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ 485 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಎಂಕಾಂ, ಗಣಿತ, ಭೌತಶಾಸ್ತ್ರ ವಿಭಾಗದ 52 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ, ಹಾಗೂ 433 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಪಡೆದುಕೊಂಡರು.

ಘಟಿಕೋತ್ಸವವನ್ನು ಬೆಂಗಳೂರು ವಿ.ವಿ. ಉಪಕುಲಪತಿ ಪ್ರೊ.ಡಾ.ಜಯಕರ ಶೆಟ್ಟಿ ಎಂ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭ ಕೋರಿದರು.  ಶಿಕ್ಷಣವೆಂದರೆ ಕೇವಲ ಪ್ರಮಾಣಪತ್ರಗಳು, ಚಿನ್ನದ ಪದಕಗಳಲ್ಲ, ನಿಮಗೆ ಶಿಕ್ಷಕರು ಸೂಕ್ತ ರೀತಿಯಲ್ಲಿ ಮಾರ್ಗದರ್ಶನ  ಮಾಡಿದ್ದು, ನಿಮ್ಮ ಪಾಲಕರು ನಿಮಗಾಗಿ ಹೆಚ್ಚಿನ ತ್ಯಾಗ ಮಾಡಿದ್ದಾರೆ. ನೈತಿಕ ಶಿಕ್ಷಣ ನಿಮಗೆ ಭದ್ರ ಬುನಾದಿಯಾಗಬೇಕು. ಇಂದು ನೀವು ಪದವಿಯನ್ನಷ್ಟೇ ಪಡೆದಿಲ್ಲ. ಬದಲಿಗೆ ಸಮಾಜದ ಅತಿದೊಡ್ಡ ಜವಾಬ್ದಾರಿಯ ಪಾಲುದಾರರಾಗುತ್ತಿದ್ದೀರಿ ಎಂದರು.

ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಿ ಮಾತನಾಡಿದ ಅಮೆರಿಕಾದ ಫ್ಲೋರಿಡಾ ಇಂಟರ್ನ್ಯಾಷನಲ್ ಯೂನಿವರ್ಸಿಟಿಯ ಪ್ರೊ. ಸುಂದರಾಜ ಸೀತಾರಾಮ ಅಯ್ಯಂಗಾರ್, ನ್ಯಾಷನಲ್ ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿನ ದೂರದೃಷ್ಟಿಯ ಜೊತೆಗೆ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ತುಂಬಿದೆ. ಮುಂದೆ ನೀವೆಲ್ಲರೂ ಉತ್ತಮ ಸಮಾಜದ ಬದಲಾವಣೆಗೆ ಮುನ್ನುಡಿ ಬರೆಯಬೇಕು ಎಂದರು.

ಘಟಿಕೋತ್ಸವದಲ್ಲಿ  ಎನ್ ಇಎಸ್ ಆಫ್ ಕರ್ನಾಟಕದ ಅಧ್ಯಕ್ಷರಾದ ಡಾ.ಎಚ್.ಎನ್. ಸುಬ್ರಮಣ್ಯ, ಎನ್ ಇಎಸ್ ಆಫ್ ಕರ್ನಾಟಕ ಗೌರವ ಕಾರ್ಯದರ್ಶಿ, ಡಾ.ಎಚ್. ಎನ್. ಎನ್.ಇಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷರಾದ ವಿ.ವೆಂಕಟಶಿವಾ ರೆಡ್ಡಿ, ಎನ್ ಇ ಎಸ್ ಉಪಾಧ್ಯಕ್ಷರಾದ ವೈ.ಜಿ.ಮಧುಸೂಧನ್, ಎನ್ ಇ ಎಸ್ ಕಾರ್ಯದರ್ಶಿ ಬಿ.ಎಸ್.ಅರುಣ್ ಕುಮಾರ್, ಚೇರ್ಮನ್ ಡಾ. ಪಿ.ಎಲ್.ವೆಂಕಟರಾಮ ರೆಡ್ಡಿ, ಜಂಟಿ ಕಾರ್ಯದರ್ಶಿ ಸುಧಾಕರ ಇಸ್ತೂರಿ, ಕೋಶಾಧಿಕಾರಿ ತಲ್ಲಮ್ ಆರ್.ದ್ವಾರಕನಾಥ್, ವಿ. ಮಂಜುನಾಥ್,ವರ್ಕ್ಸ್ ಕಮಿಟಿ ಚೇರ್ಮನ್ ಜಿ.ಎಂ.ರವೀಂದ್ರ,  ಪ್ರಾಂಶುಪಾಲರಾದ ಡಾ.ಪಿ.ಎಲ್.ರಮೇಶ್, ಕಾಲೇಜ್ ಕೌನ್ಸಿಲ್ ಸೆಕ್ರೆಟರಿ ಪ್ರೊ.ಚೆಲುವಪ್ಪ, ಅಧ್ಯಾಪಕರು ಭಾಗವಹಿಸಿದ್ದರು.

Key words: National College, 13th convocation, students