ಮೈಸೂರು,ನವೆಂಬರ್,27,2024 (www.justkannada.in): ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್ ಸಿಕ್ಕಿದ್ದು ಸಿಎಂ ಸಿದ್ದರಾಮಯ್ಯ ಕುಟುಂಬದ ವಿರುದ್ದ ಇದೀಗ ಮತ್ತೊಂದು ಕೇಸ್ ದಾಖಲಾಗಿದೆ.
ಪ್ರಕರಣದ A4 ಆರೋಪಿ ಜೆ.ದೇವರಾಜು ಅವರ ಅಣ್ಣ ಮೈಲಾರಯ್ಯ ಅವರ ಮಗಳು ಜಮುನಾ ಎಂಬುವವರು ಸಿಎಂ ಪತ್ನಿ ಬಿ.ಎನ್.ಪಾರ್ವತಿ ಅವರ ವಿರುದ್ಧ ದಾವೆ ಹೂಡಿದ್ದಾರೆ. ಸಿಎಂ ಸಿದ್ದರಾಮಯ್ಯ ತಮ್ಮ ಜಮೀನು ಎಂದು ಹೇಳುವ ಸಂಬಂಧ ಕೇಸ್ ದಾಖಲಿಸಿದ್ದಾರೆ.
ಕೆಸರೆ ಗ್ರಾಮದ ಸರ್ವೆ ನಂಬರ್ 464 ರ ಜಮೀನಿನಲ್ಲಿ ನಮಗೂ ಭಾಗ ಬರಬೇಕು. ಪಿತ್ರಾರ್ಜಿತ ಆಸ್ತಿಯಲ್ಲಿ ನನಗೂ ಪಾಲು ಕೊಡಿ ಎಂದು ಜಮುನಾ ಅವರು ಸಿಎಂ ಸಿದ್ದರಾಮಯ್ಯ ಕುಟುಂಬದ ವಿರುದ್ದ ಮೈಸೂರಿನ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
ಸರ್ವೆ ನಂ.464ರ 3.16 ಎಕರೆ ಭೂಮಿ ಇದಾಗಿದ್ದು, ಸಿಎಂ ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ವಿರುದ್ಧ ಕೂಡ ಪ್ರಕರಣ ದಾಖಲಿಸಿದ್ದಾರೆ. ಸ್ವಂತ ದೊಡ್ಡಪ್ಪ ದೇವರಾಜು ಹಾಗು ಕುಟುಂಬದವರು ಎದುರಾಳಿ ಮಾಡಿದ್ದು, ಮೈಸೂರು ಮುಡಾ ಕಮೀಷನರ್, ಜಿಲ್ಲಾಧಿಕಾರಿಯನ್ನೂ ಪಾರ್ಟಿ ಮಾಡಿದ್ದಾರೆ. ಸಿ. ಎನ್.ಆರ್ ನಂಬರ್ KAMS020031832024ರ ಅಡಿ ದಾವೆ ಹೂಡಿದ್ದು, ಮಂಜುನಾಥ್ ಸ್ವಾಮಿ, ಜೆ.ದೇವರಾಜು, ಸರೋಜಮ್ಮ , ಡಿ.ಶೋಭಾ, ಡಿ.ದಿನಕರ್, ಡಿ.ಪ್ರಭಾ, ಡಿ.ಪ್ರತಿಭಾ, ಡಿ.ಶಶಿಧರ್ , ಬಿ.ಎಂ.ಮಲ್ಲಿಕಾರ್ಜುನ್ ಸ್ವಾಮಿ, ಡಿ.ಎನ್.ಪಾರ್ವತಿ, ಮುಡಾದ ಆಯುಕ್ತ, ಹಾಗೂ ಮೈಸೂರು ಜಿಲ್ಲಾಧಿಕಾರಿಗಳು ಎಂದು ಉಲ್ಲೇಖಿಸಿದ್ದಾರೆ.
ಮುಡಾ ಹಗರಣ ಸಂಬಂಧ ಸಿಬಿಐ ತನಿಖೆಗೆ ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಈಗಾಗಲೇ ಹೈಕೋರ್ಟ್ ಡಿಸೆಂಬರ್ 10ಕ್ಕೆ ಮುಂದೂಡಿದೆ. ಈ ನಡುವೆ ಹಗರಣ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಿದ್ದು ಡಿಸೆಂಬರ್ 10 ರಂದು ವರದಿ ಸಲ್ಲಿಕೆಗೆ ಕೋರ್ಟ್ ಸೂಚಿಸಿದೆ. ಈ ನಡುವೆಯೇ ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್ ಸಿಕ್ಕಿದೆ.
Key words: Muda scam, Another case, against , CM’s family