MYSORE COURT: ಹೆಂಡತಿ, ಮಕ್ಕಳು ಹಾಗೂ ತಾಯಿಯನ್ನೇ ಕೊಲೆ ಮಾಡಿದ್ದ ಅಪರಾಧಿಗೆ ಮರಣ ದಂಡನೆ.

MYSORE COURT: DEATH PENALTY FOR A MAN CONVICTED OF MURDERING HIS WIFE, CHILDREN AND MOTHER.

 

ಮೈಸೂರು.26 ನವೆಂಬರ್‌; ಹೆಂಡತಿ ಮಕ್ಕಳನ್ನು ಮಾತ್ರವಲ್ಲದೆ ಜೊತೆಗೆ ತನ್ನ ತಾಯಿಯನ್ನೂ ಕೊಲೆ ಮಾಡಿದ ಅಪರಾಧಿಗೆ ಮೈಸೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮರಣ ದಂಡನೆ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ವಿವರ:

ಸರಗೂರು ತಾಲ್ಲೂಕು ಚಾಮೇಗೌಡನಹುಂಡಿ ಗ್ರಾಮದ ನಿವಾಸಿ ಲೇಟ್ ಚಿಕ್ಕನಾಯಕ ಅವರ ಮಗನಾದ ಮಣಿಕಂಠಸ್ವಾಮಿ ಅಲಿಯಾಸ್ ಕುಂಟ ಎಂಬ ವ್ಯಕ್ತಿ ವಿಶಿಷ್ಟ ಚೇತನನಾಗಿದ್ದು,ಆತ  2014 ನೇ ಮಾರ್ಚ್ ತಿಂಗಳಲ್ಲಿ ಗಂಗೆ ಎಂಬಾಕೆಯನ್ನು ವಿವಾಹವಾಗಿದ್ದ. ಆತನಿಗೆ 4 ವರ್ಷದ ಸಾಮ್ರಾಟ್ ಮತ್ತು ಒಂದುವರೆ ವರ್ಷದ ರೋಹಿತ್ ಎಂಬ ಇಬ್ಬರು ಗಂಡು ಮಕ್ಕಳಿದ್ದು, ಅಲ್ಲದೆ ಆತನ ಹೆಂಡತಿ 9 ತಿಂಗಳ ಗರ್ಭಿಣಿಯಾಗಿದ್ದು ಆಕೆಯ ಮೇಲೆ ಅನುಮಾನಪಟ್ಟು ಪದೇ ಪದೇ ಜಗಳವಾಡುತ್ತಿದ್ದ.  ಆತನ ತಾಯಿ ಕೆಂಪಾಜಮ್ಮ ಸಮಾಧಾನ ಮಾಡುತ್ತಿದ್ದಾಗ ಆಕೆಯೊಂದಿಗೂ ಜಗಳವಾಡುತ್ತಿದ್ದ.

ದಿನಾಂಕ 28.04.2021 ರಂದು ಸಂಜೆ 6.00 ಗಂಟೆಯ ಸಮಯದಲ್ಲಿ ಆರೋಪಿಯಾದ ಮಣಿಕಂಠಸ್ವಾಮಿಯು ತನ್ನ ಹೆಂಡತಿಯ ಶೀಲವನ್ನು ಶಂಕಿಸಿ ಆಕೆಯೊಂದಿಗೆ ಮತ್ತು ತನ್ನ ತಾಯಿ ಕೆಂಪಾಜಮ್ಮನೊಂದಿಗೆ ಜಗಳವಾಡಿ ಗಲಾಟೆ ಮಾಡಿದ್ದ.ನಂತರ ಅದೇ ದಿನ ರಾತ್ರಿ 9.00 ಗಂಟೆಗೆ ಮನೆಗೆ ಬಂದು ಮಧ್ಯರಾತ್ರಿ 12.00 ಗಂಟೆಯವರೆಗೆ ಟಿವಿ ನೋಡಿ ಬೆಳಗಿನ ಜಾವ 4.00 ಗಂಟೆಯಲ್ಲಿ ಎಲ್ಲರೂ ಮಲಗಿದ್ದ ಸಮಯದಲ್ಲಿ ತಾನು ನಡೆದಾಡಲು ಉಪಯೋಗಿಸುತ್ತಿದ್ದ ಅಂಗವಿಕಲರ ಸಾಧನವಾದ ಕಬ್ಬಿಣದ ಊರುಗೋಲಿನಿಂದ ಒಂಬತ್ತು ತಿಂಗಳ ಗರ್ಭಣಿಯಾದ ತನ್ನ ಹೆಂಡತಿ  ಮತ್ತು ತಾಯಿ ಕೆಂಪಾಜಮ್ಮ ಹಾಗೂ ತನ್ನ ನಾಲ್ಕು ವರ್ಷದ ಮಗ ಸಾಮ್ರಾಟ್ ಸೇರಿದಂತೆ ಮೂರೂ ಜನರಿಗೆ ತಲೆಗೆ ಮುಖಕ್ಕೆ ಬಲವಾಗಿ ಹೊಡೆದು ಸಾಯಿಸಿದ್ದಲ್ಲದೆ, ಇನ್ನೊಬ್ಬ ಒಂದುವರೆ ವರ್ಷದ ಮಗ ರೋಹಿತ್ ನನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಸಾಯಿಸಿದ್ದ.ಜೊತೆಗೆ ತನ್ನ ಪತ್ನಿಯ ಗರ್ಭದಲ್ಲಿದ್ದ ಮಗುವಿನ ಸಾವಿಗೂ ಕಾರಣವಾಗಿದ್ದ.

ಘಟನೆಯ ಮಾಹಿತಿ ತಿಳಿದ ಸರಗೂರು ಪೊಲೀಸರು ಎಫ್ ಐ ಆರ್ ತಯಾರಿಸಿ, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ ಐದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಅಭಿಯೋಜಕರು ಆರೋಪಿಯ ವಿರುದ್ಧ ಆಪಾದಿಸಲಾದ ಆರೋಪವನ್ನು ನಿಸ್ಸಂದೇಹವಾಗಿ ಸಾಬೀತುಪಡಿಸಿದ್ದಾರೆಂದು‌ ತೀರ್ಪು ನೀಡಿದ ನ್ಯಾಯಾಧೀಶರಾದ ಶ್ರೀ ಗುರುರಾಜ್ ಸೋಮಕ್ಕಲವರ್ ಅವರು  ಅಪರಾಧಿಯಾದ ಮಣಿಕಂಠ ಸ್ವಾಮಿಗೆ ಮರಣದಂಡನೆ ವಿಧಿಸಿ ಆದೇಶ ನೀಡಿದ್ದಾರೆ.

ರಾಜ್ಯದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ರೀ ಬಿ.ಇ. ಯೋಗೇಶ್ವರ್  ವಾದಿಸಿದ್ದು,  ಪರವಾಗಿ  ಮೈಸೂರಿನ ಪ್ರಧಾನ ಕಾನೂನು ಸೇವಾ ಅಭಿರಕ್ಷಕರಾದ  ಮಾಚಂಗಡ ಎಸ್ ನವೀನ್ ವಕಾಲತ್ತು ವಹಿಸಿದ್ದರು.

ಶಿಕ್ಷೆ ಸೇಡಿನ ಕ್ರಮವಲ್ಲ :

ಅಪರಾಧ ಎಸಗಿದವನಿಗೆನ್ಯಾಯಾಲಯವು ಶಿಕ್ಷೆ ನೀಡುವುದು ಆತನ ವಿರುದ್ಧದ ಸೇಡಿನ ಕ್ರಮವಲ್ಲ. ‘ಅಪರಾಧ ಎಸಗುವವನಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ’ ಎಂಬ ಸತ್ಯವು ಸಮಾಜಕ್ಕೆ ತಿಳಿಯಲಿ ಎಂದು! ‘ಅಪರಾಧ ಎಸಗುವವನು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ’ ಎಂಬ ಸತ್ಯ ಬಹಿರಂಗವಾದರೆ ಅಪರಾಧ ಎಸಗುವವರು ಅಪರಾಧ ಎಸಗಲು ಹಿಂದೇಟು ಹಾಕಬಹುದು ಎಂಬ ಕಾರಣಕ್ಕಾಗಿಯೇ ಅಪರಾಧಿಗೆ ಶಿಕ್ಷೆ ನೀಡುವುದು. ಶಿಕ್ಷೆಯ ಭಯವೇ ಶಾಂತಿಯ ಮೂಲ! ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಅಪರಾಧಿಗೆ ಶಿಕ್ಷೆಯಾಗಲೇಬೇಕು.

-ಪಿ.ಜೆ.ರಾಘವೇಂದ್ರ ನ್ಯಾಯವಾದಿ ಮೈಸೂರು

KEY WORDS: MYSORE COURT, DEATH PENALTY, CONVICTED, MURDER

MYSORE COURT: DEATH PENALTY FOR A MAN CONVICTED OF MURDERING HIS WIFE, CHILDREN AND MOTHER.