ಮೈಸೂರು,ನವೆಂಬರ್,27,2024 (www.justkannada.in): ಈ ನಾಡು ಕಂಡ ಪ್ರಭಾವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯವರೇ ಆಗಿದ್ದು, ಪ್ರಾತಿನಿಧಿಕವಾಗಿ ಪ್ರಮುಖರೂ ಆಗಿರುವುದರಿಂದ ಮೈಸೂರು ನಗರದ ಸಮಗ್ರ ಅಭಿವೃದ್ಧಿಗೆ ಪ್ರಮುಖ ಆದ್ಯತೆ ನೀಡಬೇಕೆಂದು ಮೈಸೂರು ಪೂರ್ವವಲಯ ಬಡಾವಣೆಗಳ ಒಕ್ಕೂಟ ಆಗ್ರಹಿಸಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎ.ಎಂ.ಬಾಬು, ರಾಜ್ಯದ ಬೆಳೆಯುತ್ತಿರುವ ನಗರಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಮೈಸೂರು ನಗರಕ್ಕೆ ಸಾಂಸ್ಕೃತಿಕ, ಪಾರಂಪರಿಕ ಹಾಗೂ ನಿವೃತ್ತರ ನಗರ ಎಂಬ ಖ್ಯಾತಿ ಇದ್ದರೂ ಸಮಸ್ಯೆಗಳಿಂದ ಹೊರತಾಗಿಲ್ಲವಾದ್ದರಿಂದ ಮುಖ್ಯಮಂತ್ರಿಗಳು ತಮಗಿರುವ ಪರಮಾಧಿಕಾರ ಬಳಿಸಿ ಮೈಸೂರು ನಗರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಮನವಿ ಮಾಡಿದರು.
ದಿನ ಕಳೆದಂತೆ ಮೈಸೂರು ನಗರದ ವಿಸ್ತೀರ್ಣ ಹೆಚ್ಚುತ್ತಿದ್ದು, ಜನ ವಸತಿ ಪ್ರದೇಶಗಳು ಕೂಡ ನಿರೀಕ್ಷೆಗೂ ಮೀರಿ ನೆಲೆಗೊಂಡಿವೆ. ಇಂತಹ ಹೊತ್ತಿನಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಿದಲ್ಲಿ ಮೈಸೂರು ಕನಸಿನ ನಗರವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಸಲುವಾಗಿಯೇ ಮೈಸೂರು ಪೂರ್ವವಲಯ ಬಡಾವಣೆಗಳ ಒಕ್ಕೂಟ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಈಗಾಗಲೇ ಹಲವು ಬಾರಿ ಮೈಸೂರು ನಗರಕ್ಕೆ ಅಗತ್ಯವಿರುವ ಯೋಜನೆಗಳ ಅನುಷ್ಠಾನ ಸಂಬಂಧ ಮನವಿ ಸಲ್ಲಿಸಿದ್ದರೂ ಈವರೆಗೆ ನಿರೀಕ್ಷಿತ ಮಟ್ಟದಲ್ಲಿ ಫಲ ನೀಡಿಲ್ಲ ಎಂದು ಹೇಳಿದರು.
ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟ ವ್ಯಾಪ್ತಿಯಲ್ಲಿ 27 ಬಡಾವಣೆಗಳಿದ್ದು, ನಿತ್ಯ ಒಂದಿಲ್ಲೊಂದು ಸಮಸ್ಯೆಗಳಿಂದ ನರಳುತ್ತಿವೆ. ಆದ ಕಾರಣ, ಮತ್ತೊಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಲಾದರೂ ಈ ಬಡಾವಣೆಗಳಿಗೆ ಆದ್ಯತಾನುಸಾರ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಆರ್. ನರಸಿಂಹಯ್ಯ, ಶಿವಕುಮಾರಸ್ವಾಮಿ, ಸಿದ್ದು, ಡಿ.ಆರ್.ಜಯಸ್ವಾಮಿ, ಸಿದ್ದರಾಜೇಗೌಡ, ಬೊಮ್ಮೇಗೌಡ, ಶಿವಣ್ಣ, ಥಾಮಸ್ ಉಪಸ್ಥಿತರಿದ್ದರು.
Key words: Request, development, Mysore, East Zone layouts