“JUST KANNADA” EXCLUSIVE: ಸರಕಾರಿ ಸಂಸ್ಥೆಗೆ ಧೋಕ, ಲಕ್ಷಗಟ್ಟಲೇ ಹಣ ಲಪಟಾಯಿಸಿದ ವಂಚಕರ ಜಾಲ..!

A network of fraudsters duped a government agency of lakhs of rupees.

ಮೈಸೂರು, ನ.27,2024: (www.justkannada.in news) ಒಂದ್ಕಡೆ ಡಿಜಿಟಲ್‌ ಇಂಡಿಯಾದ ಬೆಳವಣಿಗೆ ವೇಗವಾಗಿ ಬೆಳೆಯುತ್ತಿದ್ದರೆ ಮತ್ತೊಂದೆಡೆ ಇದೇ ಡಿಜಿಟಲ್‌ ವಂಚನೆಯ ಜಾಲ ಸಹ ರಾಕೆಟ್‌ ವೇಗದಲ್ಲಿ ವ್ಯಾಪಿಸುತ್ತಿದೆ. ಈ ತನಕ ಇಂಡುವಿಷ್ಯುವಲ್‌ ಆಗಿದ್ದ ವಂಚಕರ ಟಾರ್ಗೆಟ್‌ ಇದೀಗ ಯೂನಿವರ್ಸಲ್‌ ಆಗುತ್ತಿದೆ. ಅದು ರಾಜ್ಯ-ಕೇಂದ್ರ ಸರಕಾರವನ್ನೇ ಯಾಮಾರಿಸುವ ಮಟ್ಟಿಗೆ ವಿಸ್ತರಿಸಿದೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಪ್ರಮಾಣಗಳು ಮಂಡಳಿ – FSSAI (Food Safety and Standards Authority of India) ಸಂಸ್ಥೆ ಸದಸ್ಯರನ್ನು ಗುರಿಯನ್ನಾಗಿಸಿಕೊಂಡು ಆ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಲಕ್ಷಾಂತರ ರೂಪಾಯಿಗಳನ್ನು ವಂಚಿಸಲಾಗಿದೆ.

 ಏನಿದು ಪ್ರಕರಣ :

ಫುಡ್‌ ಇಂಡಸ್ಟ್ರಿ ಅಥವಾ ವ್ಯಾಪಾರ ನಡೆಸುತ್ತಿರುವವರು ತಮ್ಮ ಲೈಸೆನ್ಸ್‌ ಅನ್ನು ವಾರ್ಷಿಕ ನವೀಕರಿಸಿಕೊಳ್ಳಬೇಕು. ಅದು ಸ್ವಯಂ ನವೀಕರಿಸುವ ಮೂಲಕ ಲೈಸೆನ್ಸ್‌ ರಿನ್ಯೂವಲ್‌ ಮಾಡಿಕೊಳ್ಳಬೇಕು. ಈ ರೀತಿ ಎಸ್.ಎಸ್.‌ ಎಸ್. ಎ.ಐ ಅನುಮತಿ ಪಡೆದು ಉದ್ದಿಮೆ ನಡೆಸುತ್ತಿರುವವರನ್ನು ಗುರಿಯಾಗಿಸಿಕೊಂಡು ಅವರಿಗೆ ಕರೆ ಮಾಡಿ ನಿಮ್ಮ ಲೈಸೆನ್ಸ್‌ ಎಕ್ಸ್‌ ಪೈರ್‌ ಆಗುತ್ತಿದೆ. ನಾವು ನವೀಕರಿಸಿಕೊಡುತ್ತೇವೆ. ಒಟ್ಟಿಗೆ ನಾಲ್ಕು ವರ್ಷಕ್ಕೆ ನವೀಕರಿಸಿಕೊಂಡರೇ ರಿಯಾಯತಿ ಸಿಗುತ್ತದೆ ಎಂದು ಆಮಿಷ ಒಡ್ಡಲಾಗುತ್ತದೆ. ಬಳಿಕ ಹಣ ವರ್ಗಾಯಿಸಿಕೊಂಡು ನವೀಕರಿಸಿದ ಪ್ರಮಾಣ ಪತ್ರ ನೀಡುತ್ತಾರೆ.

ವಂಚನೆ ಹೇಗೆ:

ಈ ರೀತಿ ನವೀಕರಿಸಿಕೊಡುವ ಜಾಲ, ಉದ್ದಿಮೆದಾರನಿಂದ ನಾಲ್ಕೈದು ವರ್ಷಕ್ಕೆ ಬೇಕಾದ ಮೊತ್ತವನ್ನು ಪಾವತಿಸಿಕೊಳ್ಳುತ್ತದೆ. ಆದರೆ ನವೀಕರಿಸುವಾಗ ಮಾತ್ರ FSSAI ಗೆ ಕೇವಲ ಒಂದು ವರ್ಷಕ್ಕೆ ನಿಗಧಿಯಾದ ಹಣ ಪಾವತಿಸುತ್ತಾರೆ. ಬಳಿಕ ಈ ಸಂಬಂಧದ ಪ್ರಮಾಣ ಪತ್ರವನ್ನು ಫೋಟೋ ಶಾಪ್‌ ಮಾಡಿ ಲೈಸೆನ್ಸ್‌ ಪಡೆದಿರುವ ವರ್ಷಗಳನ್ನು ತಿದ್ದಿ ಅದನ್ನು ಹಣ ಪಾವತಿಸಿದ ಉದ್ದಿಮೆದಾರನಿಗೆ ವಾಟ್ಸ್‌ ಅಪ್‌ ಮೂಲಕ ಕಳುಹಿಸುತ್ತಾರೆ.

ಈ ಪ್ರಮಾಣ ಪತ್ರ FSSAI ನದ್ದೇ ಆಗಿರುವುದರಿಂದ ಉದ್ದಿಮೆದಾರನಿಗೂ ಸಹ ಯಾವುದೇ ಅನುಮಾನ ಬಾರದು. ಇದನ್ನು ಆತ ನಂಬಿ, ನಾಲ್ಕು ವರ್ಷಕ್ಕೆ ಪರವಾನಗಿ ಲಭಿಸಿದೆ ಎಂದೇ ನಂಬಿಕೊಳ್ಳುತ್ತಾನೆ. ಇದರಿಂದ ಉದ್ದಿಮೆದಾರ ನಾಲ್ಕು ವರ್ಷಕ್ಕೆ ಎಂಟು ಸಾವಿರ ಪಾವತಿಸಿದ್ದರೆ, ವಂಚಕರು FSSAI ಗೆ ಕೇವಲ ಎರಡು ಸಾವಿರ ಮಾತ್ರ ಪಾವತಿಸಿ ಪರವಾನಗಿ ನವೀಕರಿಸಿರುತ್ತಾರೆ.

ಬೆಳಕಿಗೆ ಬಂದ್ದದ್ದು:

ಮೈಸೂರಿನಲ್ಲಿ ಕೆಫೆ ನಡೆಸುತ್ತಿರುವ ಉದ್ದಿಮೆದಾರರನ್ನು ಈ ವಂಚಕ ತಂಡ ದೂರವಾಣಿ ಮೂಲಕ ಸಂಪರ್ಕಿಸಿ, ರಹದಾರಿ ನವೀಕರಣಕ್ಕೆ ಕಡೆದಿನವಾಗುತ್ತಿದೆ. ಹಣ ಪಾವತಿಸಿದರೆ ನಾವೇ ರಿನ್ಯೂವಲ್‌ ಮಾಡಿಸಿಕೊಡುತ್ತೇವೆ ಎಂದು ಆಮಿಷ ಒಡ್ಡುತ್ತಾರೆ.

ಆನ್‌ ಲೈನ್‌ ವ್ಯವಹಾರದ ಬಗ್ಗೆ ತಿಳುವಳಿಕೆ ಹೊಂದಿದ್ದ ಈ ಉದ್ದಿಮೆದಾರಗೆ ವಂಚನೆಯ ವಾಸನೆ ಸಿಗುತ್ತದೆ. ತಕ್ಷಣ ಉದ್ದಿಮೆದಾರರ ವಾಟ್ಸ್‌ ಅಪ್‌ ಗುಂಪಿನಲ್ಲಿ ಈ ಬಗ್ಗೆ ಮಾಹಿತಿ ಶೇರ್‌ ಮಾಡುತ್ತಾರೆ. ಆಗ ಹಲವಾರು ಮಂದಿ ನಾವು ಸಹ ಇದೇ ರೀತಿ ಪರವಾನಿ ನವೀಕರಿಸಿಕೊಂಡಿದ್ದೇವೆ ಎಂಬ ಮಾಹಿತಿ ಬಹಿರಂಗ ಪಡಿಸುತ್ತಾರೆ.

ಕೂಡಲೇ ಅವರ ಪ್ರಮಾಣಪತ್ರವನ್ನು ಪರಿಶೀಲಿಸಲು ಮೈಸೂರಿನ ತಿಲಕ್‌ ನಗರದಲ್ಲಿರುವ FSSAI ಕಚೇರಿ ಸಂಪರ್ಕಿಸಿದಾಗ ವಂಚನೆ ಬೆಳಕಿಗೆ ಬಂದಿದೆ.

ಸಂಸ್ಥೆಯ ದಾಖಲೆಗಳಲ್ಲಿ ಲೈಸೆನ್ಸ್‌ ಒಂದು ವರ್ಷಕ್ಕೆ ಮಾತ್ರ ನವೀಕರಿಸಿರುವುದು ಗೋಚರಿಸುತ್ತಿದ್ದರೆ, ಉದ್ದಿಮೆದಾರರಿಗೆ ಕಳುಹಿಸಿರುವ ಲೈಸೆನ್ಸ್‌ ನಾಲ್ಕು ವರ್ಷದ ಅವಧಿ ತೋರಿಸುತ್ತಿತ್ತು. ಆಗಲೇ ವಂಚನೆ ಪ್ರಕರಣ ಬೆಳಕಿಗೆ ಬಂದದ್ದು. ಇದನ್ನು ಮತ್ತಷ್ಟು ಕೆದಕಿದಾಗ ಇದು ಮೈಸೂರು ಮಾತ್ರವಲ್ಲ, ಮಂಡ್ಯ, ಮಡಿಕೇರಿ, ಹಾಸನ, ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ನಗರಗಳಲ್ಲಿ ವಂಚನೆ ಜಾಲ ವಿಸ್ತರಿಸಿರುವುದು ದೃಢಪಟ್ಟಿತು.

 

 ಮೋಸ ಹೋದವರಿಂದ ದೂರು:

ಮೈಸೂರಿನ ಜೆ.ಪಿ.ನಗರದಲ್ಲಿ ಉದ್ದಿಮೆ ನಡೆಸುತ್ತಿರುವ ರಾಜಸ್ತಾನ ಮೂಲದ ಸುರೇಶ್‌ ಎಂಬುವವರೇ ಈ ವಂಚನೆ ಬಗ್ಗೆ ಮೊದಲಿಗೆ ದೂರು ನೀಡಲು ಮುಂದಾದವರು.

‌FSSAI ನ ನಕಲಿ ಪ್ರಮಾಣಪತ್ರವನ್ನು ಪ್ರದರ್ಶಿಸುತ್ತಿರುವ ದೂರುದಾರ ಸುರೇಶ್.

ಇವರಿಗೆ ಪ್ರಿಯಾದರ್ಶಿನಿ ಎಂದು ಪರಿಚಯಿಸಿಕೊಂಡ ಮಹಿಳೆ, ಉದ್ದಿಮೆ ಪರವಾನಗಿ ವವೀಕರಿಸುವುದಾಗಿ ಹೇಳಿ ಫೋನ್‌ ಪೇ ಮೂಲಕ ತನ್ನ ಖಾತೆಗೆ ಹಣ ವರ್ಗಾಯಿಸಿಕೊಂಡಳು. ಬಳಿಕ ಕೆಲ ಸಮಯದಲ್ಲೇ FSSAI ಪ್ರಮಾಣ ಪತ್ರವನ್ನು ವಾಟ್ಸ್‌ ಅಪ್‌ ಮೂಲಕ ರವಾನಿಸಿದಳು. ಉದ್ದಿಮೆದಾರರಿಗೆ ಕಳುಹಿಸಿದ್ದ ಸರ್ಟಿಫಿಕೆಟ್‌ ನಲ್ಲಿ ರಹದಾರಿಯು ೨೦೨೪ ರಿಂದ ೨೦೨೮ ರ ತನಕ ನವೀಕರಿಸಲಾಗಿತ್ತು. ಆದರೆ ಈ ಪ್ರಮಾಣಪತ್ರವನ್ನು FSSAI ಅಧಿಕಾರಿಗಳು ಪರಿಶೀಲಿಸಿದಾಗ ಫ್ರಾಡ್‌ ಎಂಬುದು ತಿಳಿಯಿತು. ಕಚೇರಿ ದಾಖಲೆ ಪ್ರಕಾರ ಲೈಸೆನ್ಸ್‌ ೨೦೨೪ ರಿಂದ ೨೦೨೬ ರ ವರೆಗೆ ಮಾತ್ರ ರಿನ್ಯೂವಲ್‌ ಆಗಿತ್ತು. ಉಳಿದ ಎರಡು ವರ್ಷದ ಹಣವನ್ನು ಸಂಸ್ಥೆಗೆ ಪಾವತಿಸಿದೆ ವಂಚಿಸಲಾಗಿತ್ತು.

ಚೆನ್ನೈ ನಲ್ಲಿ ಕುಳಿತು ವಂಚನೆ..?:

ತಮಿಳ್ಗನ್ನಡದಲ್ಲಿ ಮಾತನಾಡುವ ಆಕೆ, ತನ್ನನ್ನು ಪ್ರಿಯದರ್ಶಿ ಎಂದು ಪರಿಚಯಿಸಿಕೊಂಡು ಯಾರಿಗೆ ಫೋನ್‌ ಮಾಡುತ್ತಾಳೋ ಅದೇ ಊರಿನ FSSAI ಕಚೇರಿ ವಿಳಾಸ ಅಥವಾ ಆ ಊರಿನ ತಾಲೋಕು ಆಫೀಸ್‌ ಅಡ್ರೆಸ್‌ ನೀಡಿ ತಾನು ಅಲ್ಲಿಂದಲೇ ಕರೆ ಮಾಡುತ್ತಿರುವುದು ಎಂಬುದಾಗಿ ನಂಬಿಸುತ್ತಾಳೆ.

ಆದರೆ, ವಂಚಕಿ ಮೊಬೈಲ್‌ ಸಂಖ್ಯೆ ಆಧಾರಿಸಿ ಅದನ್ನು ಟ್ರೇಸ್‌ ಮಾಡಿದಾಗ ಆಕೆ ಚೆನ್ನೈನ ಪಿಜಿಯೊಂದರಲ್ಲಿ ಕುಳಿತು ಈ ವಂಚನೆ ಜಾಲ ಆಪರೇಟ್‌ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿರುವುದನ್ನು ಮೂಲಗಳು ಜಸ್ಟ್‌ ಕನ್ನಡಗೆ ದೃಢಪಡಿಸಿವೆ.

ಮಹಾ ವಂಚನೆ:

ಸದ್ಯ ಬೆಳಕಿಗೆ ಬಂದಿರುವುದು ಎಂಟತ್ತು ಸಾವಿರ ರೂ.ಗಳ ನಾಲ್ಕೈದು ಪ್ರಕರಣಗಳು ಮಾತ್ರ. ಅದರೆ ಇದು  ಟಿಪ್‌ ಆಫ್‌ ದಿ ಐಸ್‌ ಬರ್ಗ್‌ ಎಂಬಂತೆ. ವಾಸ್ತವವಾಗಿ ವಂಚನೆಯ ಜಾಲ ದೊಡ್ಡದಿದೆ.  ಮಾಹಿತಿ ಪ್ರಕಾರ ಅಬಕಾರಿ ಇಲಾಖೆ ವ್ಯಾಪ್ತಿಗೆ ಒಳಪಡುವ ಉದ್ದಿಮೆದಾರರು ಸಹ ಈಕೆಯ ವಂಚನೆ ಜಾಲದಲ್ಲಿ ಸಿಲುಕಿ ಮೋಸ ಹೋಗಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲವನ್ನು ಕೂಲಂಕುಷವಾಗಿ ತನಿಖೆ ನಡೆಸಿದರೆ ಹಲವಾರು ಲಕ್ಷಗಳೇ ಮೋಸ ಮಾಡಿರುವುದು ಬೆಳಕಿಗೆ ಬರಲಿದೆ.

key words: fraudsters, duped, FSSAI, Food Safety and Standards Authority of India

A network of fraudsters duped a government agency of lakhs of rupees.