ಅಧಿವೇಶನದ ಬಳಿಕ ಪೌರಕಾರ್ಮಿಕರ ಸಮಸ್ಯೆಗೆ ಪರಿಹಾರ: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

ಬೆಂಗಳೂರು, ಡಿಸೆಂಬರ್,4,2024 (www.justkannada.in): “ಪೌರಕಾರ್ಮಿಕರ ಬಗ್ಗೆ ನಮಗೆ ಸಹಾನುಭೂತಿ ಇದೆ. ವಿಧಾನಮಂಡಲ ಅಧಿವೇಶನದ ಬಳಿಕ ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ಐಪಿಡಿ ಸಾಲಪ್ಪ ವರದಿ ಜಾರಿ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಮಾಡುತ್ತಿದ್ದ ಪೌರಕಾರ್ಮಿಕರನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರು ಭೇಟಿ ಮಾಡಿ ಭರವಸೆ ನೀಡಿದರು.

“ಕಳೆದ 25 ವರ್ಷಗಳಿಂದ ಮಾತ್ರವಲ್ಲ, ಈ ಸಮಾಜ ಆರಂಭವಾದಾಗಿನಿಂದಲೂ ನೀವು ಈ ಕೆಲಸ ಮಾಡುತ್ತಾ ಸೇವೆ ಮಾಡುತ್ತಿದ್ದೀರಿ. ಕಳೆದ ಸರ್ಕಾರದ ಅವಧಿಯಲ್ಲಿ ನೀವು ಪಾಲಿಕೆ ವ್ಯಾಪ್ತಿಗೆ ಬರುವುದಿಲ್ಲ ಎಂದು ತೀರ್ಮಾನ ಮಾಡಲಾಗಿತ್ತು. ಆಗ ನಿಮ್ಮ ಜತೆ ಚರ್ಚೆ ಮಾಡಲಾಗಿತ್ತು. ಈಗಲೂ ನೀವು ಹೋರಾಟ ಮಾಡುತ್ತಿದ್ದೀರಿ. ದೇಶದ ವಿವಿಧ ಭಾಗಗಳಲ್ಲಿ ವಿವಿಧ ವ್ಯವಸ್ಥೆ ಇವೆ. ಏನೇ ಮಾಡಿದರೂ ವ್ಯವಸ್ಥಿತವಾಗಿ ಮಾಡಬೇಕು. ಖಾಸಗಿಯವರ ಜತೆ ಗುತ್ತಿಗೆ ಆಧಾರದ ಮೇಲೆ ನೀವು ಕೆಲಸ ಮಾಡುತ್ತಿದ್ದೀರಿ. ನಿಮಗೆ ಎಲ್ಲಾ ರೀತಿಯಲ್ಲೂ ಸೂಕ್ತವಾಗುವಂತೆ ನೆರವು ನೀಡಬೇಕು. ಈ ವಿಚಾರವಾಗಿ ನಮ್ಮ ಸರ್ಕಾರ ಸಿಎಂಸಿ ಮಟ್ಟದಲ್ಲಿ ಕೆಲವು ಪರಿಹಾರ ತೆಗೆದುಕೊಂಡಿದೆ. ಅಧಿವೇಶನದ ಬಳಿಕ ನಿಮ್ಮಲ್ಲಿರುವ ಎಲ್ಲಾ ಗುಂಪುಗಳನ್ನು ಕರೆಸಿ ಚರ್ಚೆ ಮಾಡಿ ಕಾನೂನು ಚೌಕಟ್ಟಿನಲ್ಲಿ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಪರಿಹಾರ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು.

Key words: Solution, problem, civic workers, DCM D.K. Shivakumar