ಸಮಾವೇಶಕ್ಕೆ ಸರ್ಕಾರಿ ಬಸ್ ಗಳ ಬಳಕೆ: ವಿದ್ಯಾರ್ಥಿಗಳಿಂದ ಪ್ರತಿಭಟನೆ, ಸರ್ಕಾರಕ್ಕೆ ಹಿಡಿಶಾಪ ಹಾಕಿದ ಪ್ರಯಾಣಿಕರು

ಮೈಸೂರು,ಡಿಸೆಂಬರ್,5,2024 (www.justkannada.in) ಹಾಸನದಲ್ಲಿ ನಡೆಯುತ್ತಿರುವ ಜನಕಲ್ಯಾಣ ಸಮಾವೇಶಕ್ಕೆ ಸರ್ಕಾರಿ ಬಸ್ ಗಳನ್ನ ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬಸ್‌ ಗಳ ಕೊರತೆ ಉಂಟಾಗಿದ್ದು ಬಸ್ ಗಳಿಲ್ಲದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಜನಪ್ರತಿನಿಧಿಗಳು ಮತ್ತು ಕಾಂಗ್ರೆಸ್ ಸರ್ಕಾರಕ್ಕೆ  ಪ್ರಯಾಣಿಕರು  ಹಿಡಿಶಾಪ ಹಾಕಿದ್ದಾರೆ.

ಹಾಸನದಲ್ಲಿ ಇಂದು ನಡೆಯುತ್ತಿರುವ ಜನಕಲ್ಯಾಣ ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶಕ್ಕೆ ನೂರಾರು ಸರ್ಕಾರಿ ಬಸ್ ಗಳನ್ನ ಬಳಸಿಕೊಂಡಿರುವ ಹಿನ್ನಲೆ. ಶಾಲಾ ಕಾಲೇಜುಗಳಿಗೆ ತೆರಳಲು ವಿಧ್ಯಾರ್ಥಿಗಳಿಗೆ ಬಸ್ಸುಗಳ ಕೊರತೆ ಉಂಟಾಗಿದೆ.

ಈ ಹಿನ್ನೆಲೆಯಲ್ಲಿ ಹುಣಸೂರು ತಾಲ್ಲೂಕಿನ ಬಿಳಿಕೆರೆಯಲ್ಲಿ ಸರಿಯಾದ ಸಮಯಕ್ಕೆ ಬಸ್ ಗಳಿಲ್ಲಿದೆ ಸಿಡಿದೆದ್ದ ವಿದ್ಯಾರ್ಥಿಗಳು ಬಸ್‌ ಗಳನ್ನ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನದತ್ತ ಕಾರ್ಯಕರ್ತರನ್ನ ಕರೆದೊಯ್ಯುತ್ತಿರುವ ಬಸ್ ಗಳನ್ನ ತಡೆದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ವಿದ್ಯಾರ್ಥಿಗಳು ಚಾಲಕರ ಜೊತೆಗೆ ಮಾತಿನ ಚಕಮಕಿ ನಡೆಸಿದ್ದು, ಬಸ್ ಗಳಿಗೆ ಅಳವಡಿಸಲಾದ ಸಮಾವೇಶದ ಬ್ಯಾನರ್ ಗಳನ್ನ ಕಿತ್ತುಹಾಕಿ ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಕೆಲಕಾಲ ಸುಗಮ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ವಿಧ್ಯಾರ್ಥಿಗಳ ಮನವೊಲಿಸುವ ಪ್ರಯತ್ನಕ್ಕೆ ಮುಂದಾದರು. ಬಸ್ ಹಾಗೂ ವಾಹನಗಳ ಸಂಚಾರಕ್ಕೆ ಅನುವು ಮಾಡಿದ್ದಾರೆ. ವಿಧ್ಯಾರ್ಥಿಗಳ ಆಕ್ರೋಶಕ್ಕೆ ಪೋಷಕರು ಹಾಗೂ ಸ್ಥಳೀಯರು ಸಾಥ್ ನೀಡಿದರು.

ಹಾಸನ ಸಮಾವೇಶಕ್ಕೆ ಮೈಸೂರು ವಿಭಾಗದಿಂದ 700 ಕ್ಕೂ ಹೆಚ್ಚು ಕೆಎಸ್ಆರ್ಟಿಸಿ ಬಸ್ ನಿಯೋಜನೆ ಮಾಡಲಾಗಿದೆ. ರಾಜ್ಯದ ವಿವಿಧ ವಿಭಾಗಗಳಿಂದ ಒಟ್ಟು 2000 ಕ್ಕೂ ಹೆಚ್ಚು ಬಸ್ ಗಳ ಕಳುಹಿಸಲಾಗಿದೆ. ಮೈಸೂರಿನ ಗ್ರಾಮೀಣ ವಿಭಾಗದಿಂದ  300  ಮತ್ತು ನಗರ ಬಸ್ ವಿಭಾಗದಿಂದ ಸುಮಾರು 400 ಕ್ಕೂ ಹೆಚ್ಚು ಬಸ್ ಸಮಾವೇಶಕ್ಕೆ ಕೊಡಲಾಗಿದೆ. ಸದ್ಯಕ್ಕೆ ಮೈಸೂರಿನ ಸಬರ್ಬನ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ಎಂದಿನಂತೆ ಆಪರೇಟ್  ಮಾಡಲಾಗುತ್ತಿದೆ. ಸಬರ್ಬನ್ ಬಸ್ ನಿಲ್ದಣದಲ್ಲಿ ಮುಂಜಾನೆ ಅಷ್ಟೊಂದು ಪ್ರಯಾಣಿಕರ ಸಂದಣಿ ಇದೆ. ಗ್ರಾಮೀಣ ಭಾಗದಿಂದ ನಗರ ಪ್ರದೇಶಕ್ಕೆ ಬರುವುದರಿಂದ  ಮಧ್ಯಾಹ್ನ, ಸಂಜೆ ಸಮಯದಲ್ಲಿ ಹೆಚ್ಚಿನ ಪ್ರಯಾಣಿಕರು ಇರುತ್ತಾರೆ. ಆ ಸಂಧರ್ಭದಲ್ಲಿ ಸ್ವಲ್ಪ ಸಮಸ್ಯೆ ಆಗಬಹುದು. ಈಗ ಪ್ರತಿ ನಿತ್ಯ ತೆರಳು ಮಾರ್ಗಗಳಿಗೆ ಬಸ್ ಹೋಗುತ್ತಿವೆ. ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಒಂದು ವೇಳೆ ಹೆಚ್ಚುವರಿ ಬಸ್ ಅವಶ್ಯಕತೆ ಬಿದ್ದರೆ ವ್ಯವಸ್ಥೆ ಮಾಡಲು ಸಿದ್ದತೆ ಮಾಡಿಕೊಂಡಿದ್ದೇವೆ ಎಂದು  ಮೈಸೂರಿನ ಕೇಂದ್ರ ಬಸ್ ನಿಲ್ದಾಣದ ಡಿವಿಷನ್ ಟ್ರಾಫೀಲ್ ಆಫೀಸರ್ ಹೇಮಂತ್ ಮಾಹಿತಿ ನೀಡಿದರು.

ಮೈಸೂರು ನಗರ ಬಸ್ ನಿಲ್ದಾಣದಲ್ಲೂ ಬಸ್ ಗಳ ಕೊರತೆ: ಹೈರಾಣಾದ ಪ್ರಯಾಣಿಕರು

ಹಾಸನ‌ ಸಮಾವೇಶಕ್ಕೆ ಮೈಸೂರಿನ  ಕೆಎಸ್ಆರ್ಟಿಸಿ ಬಸ್ ನಿಯೋಜನೆ ಹಿನ್ನೆಲೆ, ನಗರ ಬಸ್ ನಿಲ್ದಾಣದಲ್ಲಿ ಬಸ್ ಗಳಿಲ್ಲದೆ ಪ್ರಯಾಣಿಕರ ಪರದಾಟ ನಡೆಸಿದ್ದಾರೆ. ಸಮಾವೇಶಕ್ಕೆ ನಗರ ವಿಭಾಗದಿಂದ 400 ಕ್ಕೂ ಹೆಚ್ಚು ಬಸ್ ನಿಯೋಜನೆ ಮಾಡಲಾಗಿದೆ. ಹೀಗಾಗಿ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಗ್ರಾಮೀಣ ಭಾಗಕ್ಕೆ ಹೋಗುವ ಪ್ರಯಾಣಿಕರು ಹೈರಾಣಾಗಿದ್ದು, ಗಂಟೆ ಗಟ್ಟಲೇ ಕಾದು ನಿಂತಿರುವ ಪ್ರಯಾಣಿಕರು ಸರ್ಕಾರಕ್ಕೆ ,ಜನಪ್ರತಿನಿಧಿಗಳಿಗೆ  ಹಿಡಿಶಾಪ ಹಾಕಿದ್ದಾರೆ.

Key words: congress, Govrnment Bus, student, protest