ಸಿಎಂ ಪತ್ನಿಗೆ 14 ನಿವೇಶನಗಳನ್ನು ಕೊಟ್ಟ ಮಹಾ ಪುರುಷ ಯಾರು? ಹೆಚ್.ವಿ ರಾಜೀವ್ ಹೇಳಿಕೆಗೆ ಶಾಸಕ ಶ್ರೀವತ್ಸ ಟಾಂಗ್

ಮೈಸೂರು,ಡಿಸೆಂಬರ್,5,2024 (www.justkannada.in): ಮುಡಾದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳಿಕೆ ನೀಡಿದ್ದ ಮಾಜಿ ಮುಡಾ ಅಧ್ಯಕ್ಷ ರಾಜೀವ್ ಅವರಿಗೆ ಬಿಜೆಪಿ ಶಾಸಕ ಶ್ರೀವತ್ಸ ತಿರುಗೇಟು ನೀಡಿದ್ದಾರೆ.

ಹಾಗಾದರೇ ಸಿಎಂ ಪತ್ನಿಗೆ 14 ನಿವೇಶನಗಳನ್ನು ಕೊಟ್ಟ ಮಹಾ ಪುರುಷ ಯಾರು? 848 ಸೈಟುಗಳನ್ನ ಕಬಳಿಸಿದವರು ಯಾರು.? ಹಾಗಾದರೆ ನಮ್ಮ ಟೈಮಲ್ಲಿ ಏನೂ ನಡೆದಿಲ್ಲ ಅಂತ ಒಂದು ಬರವಣಿಗೆ ಮೂಲಕ ಪತ್ರ ಕೊಡಲಿ ಎಂದು  ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್ ಹೇಳಿಕೆಗೆ ಶಾಸಕ  ಶ್ರೀವತ್ಸ ಟಾಂಗ್ ಕೊಟ್ಟರು.

ಇಂದು ಮೈಸೂರಿನಲ್ಲಿ ಮಾತನಾಡಿದ ಶಾಸಕ ಶ್ರೀವತ್ಸ,  ನಟೇಶ್ ಮತ್ತು ದಿನೇಶ್ ಸರ್ಕಾರವನ್ನೇ ಅಲ್ಲಾಡಿಸುತ್ತಿದ್ದಾರೆ. ಮುಡಾದಲ್ಲಿ ಇಷ್ಟೆಲ್ಲ ಹಗರಣಕ್ಕೆ ಕಾರಣಕರ್ತರಾದ ಇವರನ್ನ ಇನ್ನೂ ಬಂಧಿಸಿಲ್ಲ ಅಂದರೆ ಏನು ಅರ್ಥ.? 48 ನಿವೇಶನ ಹಂಚಿಕೆಯಲ್ಲಿ ದಿನೇಶ್ ಕುಮಾರ್ ನೇರ ಪಾತ್ರ ಇದೆ. ಆಗಿದ್ರೂ ಕೂಡ ಅವರಿಬ್ಬರ ಮೇಲೆ ಕ್ರಮ ತೆಗೆದುಕೊಳ್ಳದೆ ಮೀನಮೇಷ ಎಣಿಸುತ್ತಿದ್ದಾರೆ. ಅವರಿಬ್ಬರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಆದರೆ ಸರ್ಕಾರವೇ ಅಸಡ್ಡೆ ತೋರುತ್ತಿದೆ, ಇವರಿಬ್ಬರು ಸಿಎಂ ಮತ್ತು ಸಚಿವ ಭೈರತಿ ಸುರೇಶ್ ಮೇಲೆ ಅಷ್ಟೊಂದು ಪ್ರಭಾವ ಬೀರಿದ್ದಾರೆ. ನಮ್ಮನ್ನ ಮುಟ್ಟಿದರೆ ಬೇರೆ ಎಲ್ಲಾ ಬಯಲಿಗೆ ಬರುತ್ತದೆ ಎಂದು ಹೆದರಿಸುತ್ತಿರಬೇಕು ಅದಕ್ಕೆ ಅವರನ್ನ ಬಂಧಿಸಲು ಹೆದರುತ್ತಿದ್ದಾರೆ. ಈಗಾಗಲೇ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ಕೂಡ ಪತ್ರ ಬರೆದಿದ್ದೇನೆ. ಹಿಂದೆ ಸಿಎಂ ಸಿದ್ದರಾಮಯ್ಯ ಅವರನ್ನ ಕಂಡರೆ ಅಧಿಕಾರಿಗಳು ಗಡ ಗಡ ನಡುಗುತ್ತಿದ್ರು ಆದರೆ ನಟೇಶ್ ಮತ್ತು ದಿನೇಶ್ ಇಬ್ಬರೂ ಸೇರಿ ಸಿಎಂ ಅವರನ್ನೇ ನಡುಗಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇಡಿ ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡಿ ಮುಗಿಸಿದೆ. ಇನ್ನೂ ವೈಯಕ್ತಿಕವಾಗಿ ಒಬ್ಬೊಬ್ಬರನ್ನು ಕರೆದು ತನಿಖೆ ಮಾಡಬೇಕು ಅಷ್ಟೇ. ಇಡಿ ಬಗ್ಗೆ ಎರಡು ವಿಚಾರದಲ್ಲಿ ನನಗೆ ಅಸಮಧಾನ ಇದೆ. ಮುಡಾದಲ್ಲಿದ್ದ  ಫೈಲ್ ಗಳು ಎಲ್ಲಿಗೋದವು.? ಯಾಕೆ ಭೈರತಿ ಸುರೇಶ್ ಕಚೇರಿಗೆ ರೈಡ್ ಮಾಡಲಿಲ್ಲ? 140 ಫೈಲ್ ಗಳ ಅಲ್ಲಿಗೆ ಹೋಗಿವೆ ಎಂದು ಲೋಕಾಯುಕ್ತಾ ಟಿಪ್ಪಣಿ ಹಾಕಿದೆ. ದೂರುದಾರ ಸ್ನೇಹಮಯಿ ಕೃಷ್ಣ ಅವರ ಆರೋಪದಂತೆ ದಿನೇಶ್ ಕುಮರ್ ಮತ್ತು ನಟೇಶ್ ಬೇರೆ ಕಡೆ ತಮ್ಮ ಸಂಬಂಧಿಕ ಹೆಸರಿನಲ್ಲಿ ಹೂಡಿಕೆ ಮಾಡಿದ್ದಾರೆ. ವಕ್ರತುಂಡ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ದಿನೇಶ್ ಕುಮಾರ್ ಕುಟುಂಬದ ಸದಸ್ಯರು ಇದ್ದಾರೆ ಅಂತಾರೆ ಅಲ್ಲಿಗೆ ಯಾಕೆ ನೀವು ರೈಡ್ ಮಾಡಿಲ್ಲ. ಕೋರ್ಟ್ ಹೇಳಿದ ಕೆಲಸವನ್ನ ಮಾತ್ರ ನಾವು ಮಾಡುತ್ತೇವೆ ಎಂದು ಇಡಿ ಅಧಿಕಾರಿಗಳು ಹೇಳುತ್ತಾರೆ. ಮುಡಾ ಅಕ್ರಮದಲ್ಲಿ ಯಾರೇ ಆದರೂ ಸರಿ ಜೆಡಿಎಸ್ ಇರಲಿ ಕಾಂಗ್ರೆಸ್ ಇರಲಿ ಬಿಜೆಪಿ ಇರಲಿ ಯಾರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಅವರ ಮೇಲೆ ಕ್ರಮ ಆಗಲಿ ಯಾರು ಬೇಡ ಅಂತಾರೆ? ಎಂದು ಶ್ರೀವತ್ಸ ಹೇಳಿದರು.

ಶಕ್ತಿ ಪ್ರದರ್ಶನಕ್ಕಿಳಿದಿದ್ದ ಸಿಎಂ ಸಿದ್ದರಾಮಯ್ಯಗೆ ಡಿಕೆ ಶಿವಕುಮಾರ್ ಚೆಕ್ ಮೆಟ್ ಕೊಟ್ಟಿದ್ದಾರೆ

ಹಾಸನ ಸಮಾವೇಶದ ಬಗ್ಗೆ ಲೇವಡಿ ಮಾಡಿದ ಬಿಜೆಪಿ ಶಾಸಕ ಶ್ರೀವತ್ಸ, ಗೆದ್ದಿರುವ ಕ್ಷೇತ್ರಗಳಲ್ಲಿ ಅಲ್ಲಿನ ಜನರಿಗೆ ಕೃತಜ್ಞತೆ ಹೇಳುವ ಬದಲು ಹಾಸನದಲ್ಲಿ ಸಮಾವೇಶ ಯಾವ ಪುರುಷಕ್ಕೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಶಿಗ್ಗಾಂವಿಯಲ್ಲಿ ಎಂದೂ ಗೆದ್ದಿರಲಿಲ್ಲ ಅಲ್ಲಿ ಜನರಿಗೆ ಹೋಗಿ ಕೃತಜ್ಞತೆ ಹೇಳಬೇಕಿತ್ತು. ಚನ್ನಪಟ್ಟಣ ಬೋನಸ್ ಇತ್ತು ಅಲ್ಲಿ ಗೆದ್ದಿದ್ದೀರಿ ಅಲ್ಲಿ ಹೋಗಿ ಕೃತಜ್ಞತೆ ಹೇಳಬೇಕಿತ್ತು. ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಶಕ್ತಿ ಪ್ರದರ್ಶನ ಮಾಡಲಿಕ್ಕೆ ಹೋಗಿದ್ದರು. ಆದರೆ ಡಿಸಿಎಂ ಡಿಕೆ ಶಿವಕುಮಾರ್ ಚೆಕ್ ಮೆಟ್ ಕೊಟ್ಟಿದ್ದಾರೆ. ಸ್ವಾಭಿಮಾನಿ ಸಮಾವೇಶದ ಬದಲು ಜನ ಕಲ್ಯಾಣ ಸಮಾವೇಶ ಎಂದು ಬದಲಿಸಿದ್ದಾರೆ. ಅವರಲ್ಲೇ ಗದ್ದುಗೆ ಗುದ್ದಾಟ ನಡೆಯುತ್ತಿದೆ ಎಂದು ಟೀಕಿಸಿದರು.

Key words: Muda scam, site, MLA, Srivatsa, Rajeev