ಬೆಂಗಳೂರು, ಡಿ.೦೭,೨೦೨೪: (www.justkannada.in news) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ( ಮುಡಾ) ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಹಿಂದಿನ ಆಯುಕ್ತ, ಕೆ.ಎ.ಎಸ್ ಅಧಿಕಾರಿ ಡಿ.ಬಿ. ನಟೇಶ್ ಅವರು ಜಾರಿ ನಿರ್ದೇಶನಾಲಯ (ಜಾನಿ) ತನಿಖೆಗೆ ತಡೆಯಾಜ್ಞೆ ಕೋರಿ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಡಿ.೦೫ ರಂದು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಂಖ್ಯೆ ೩೨೯೫೬/೨೦೨೪ ನಟೇಶ್ ಅವರ ಪರ ವಕೀಲರಾದ ಅನೀಶ ಎ. ಅತ್ರೇಶ್ ಈ ರಿಟ್ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರು ಡಿ.೦೬ ರಂದು ಈ ಅರ್ಜಿ ವಿಚಾರಣೆ ನಡೆಸಿದ್ದು ಅದನ್ನು ಡಿ. ೦೯ಕ್ಕೆ ಮುಂದೂಡಿದ್ದಾರೆ.
ಏನಿದು ಪ್ರಕರಣ:
ಮುಡಾದ ಮಾಜಿ ಆಯುಕ್ತ ಡಿಬಿ ನಟೇಶ್ ವಿರುದ್ಧ ಜಾನಿ ಪ್ರಕರಣ ದಾಖಲಿಸಿಕೊಂಡಿದ್ದು ಈಗಾಗಲೇ ಅವರನ್ನು ವಿಚಾರಣೆಗೆ ಒಳಪಡಿಸಿದೆ.
ನಿವೇಶನ ಹಂಚಿಕೆ ಪ್ರಕರಣದ ತನಿಖೆ ವೇಳೆಯಲ್ಲೇ ಜಾರಿ ನಿರ್ದೇಶನಾಲಯದವರು ಲೋಕಾಯುಕ್ತ ಪೊಲೀಸರಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೆ ಇದೀಗ ಡಿ.ಬಿ.ನಟೇಶ್ ಅವರು ಕೋರ್ಟ್ ಗೆ ಈ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಅಕ್ಟೋಬರ್ 28 ಮತ್ತು 29 ರಂದು ಜಾರಿ ನಿರ್ದೇಶನಾಲಯದವರು ತಮ್ಮ ಹೇಳಿಕೆ ಪಡೆದಿರುವುದು ಕಾನೂನುಬಾಹಿರ. ಆದ್ದರಿಂದ ಪಿಎಮ್ಎಲ್ಎ ಕಾಯ್ದೆಯ ಅಡಿ ವಿಚಾರಣೆ ರದ್ದು ಪಡಿಸಲು ನಟೇಶ್ ರಿಟ್ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮತ್ತೊಂದು ಆರೋಪ:
ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ವಿರುದ್ಧ ಲೋಕಾಯುಕ್ತಕ್ಕೆ ಕೆಲ ದಿನಗಳ ಹಿಂದೆಯಷ್ಟೆ ಮತ್ತೊಂದು ದೂರು ದಾಖಲಿಸಿದ್ದಾರೆ.
ನಟೇಶ್ ಅವರು 50:50 ಅನುಪಾತದಲ್ಲಿ ನಿವೇಶನಗಳ ಹಂಚಿಕೆ ಮೂಲಕ ಅಕ್ರಮವಾಗಿ ಗಳಿಸಿದ ಹಣವನ್ನು ಪತ್ನಿ ಹೆಸರಿನಲ್ಲಿ ವಿವಿಧ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದು, ಆ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಇಕ್ಕಟ್ಟಿನಲ್ಲಿ ಬಿಜೆಪಿ:
ಬ್ಲೂಸ್ಟೋನ್, ವಿಪಾಸನ ಹೆಲ್ತ್ ಕೇರ್, ಅಕುನೋವ ಹೆಲ್ತ್ ಕೇರ್ ಎಂಬ ಕಂಪನಿಗಳಲ್ಲಿ ನಟೇಶ್ ಪತ್ನಿ ನಿರ್ದೇಶಕಿಯಾಗಿದ್ದಾರೆ ಎಂದು ಆರ್.ಟಿ.ಐ. ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರಿನಲ್ಲಿ ತಿಳಿಸಿದ್ದು, ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಸೇರಿದಂತೆ ಹಲ ಬಿಜೆಪಿ ನಾಯಕರು ಮತ್ತು ಅವರ ಕುಟುಂಬದ ಸದಸ್ಯರು ಕೂಡ ಈ ಕಂಪನಿಗಳಲ್ಲಿ ನಿರ್ದೇಶಕರಾಗಿದ್ದಾರೆಂದು ಆರೋಪಿಸಿ ಈ ಸಂಬಂಧ ಜಾರಿ ನಿರ್ದೇಶನಾಲಯದಲ್ಲಿ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ.
ಇದು ಮುಡಾ ನಿವೇಶನಗಳ ಅಕ್ರಮ ಹಂಚಿಕೆ ವಿರುದ್ಧ ಜೋರು ದನಿಯಲ್ಲಿ ಹೋರಾಟ ನಡೆಸುತ್ತಿದ್ದ ಬಿಜೆಪಿ ಮುಖಂಡರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
key words: Muda, former commissioner. D.B. Natesh, writ petition, High Court, against ED,
SUMMARY:
D.B. Natesh filed a writ petition in the High Court against ED, hearing on Dec. 09.
On December 5, the High Court filed writ petition No. 32956/2024 in the High Court by Aneesh A. Atresh, advocate for Natesh. Justice Hemant Chandan Gowdar heard the petition on December 6 and adjourned it to December 9.