ಬೆಳಗಾವಿ ಅಧಿವೇಶನ: ಸದನ ಸುಗಮವಾಗಿ ನಡೆಯಲು ಅಗತ್ಯ ಕ್ರಮ- ಬಸವರಾಜ ಹೊರಟ್ಟಿ

ಬೆಳಗಾವಿ,ಡಿಸೆಂಬರ್,7,2024 (www.justkannada.in): ಬೆಳಗಾವಿ ಅಧಿವೇಶನದಲ್ಲಿ  ಸದನ ಸುಗಮವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು  ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಸುವರ್ಣ ವಿಧಾನಸೌಧದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯ ಅವರು ಹೇಳಿದ್ದಿಷ್ಟು..

ಬೆಳಗಾವಿ ಅಧಿವೇಶನ ಯಶಸ್ವಿಗೆ ಹಾಗೂ ಕಲಾಪವನ್ನು ರಚನಾತ್ಮಕವಾಗಿ ನಡೆಸಲು ಪರಿಷತ್ ಸದಸ್ಯರಿಗೆ ಅನೇಕ ಸಲಹೆಗಳನ್ನು ನೀಡಲಾಗಿದೆ.  ಮಂಗಳವಾರ ಮತ್ತು ಬುಧವಾರ ಪ್ರಶ್ನೋತ್ತರ ವೇಳೆ‌ ನಂತರ ಸಂಪೂರ್ಣ ಕಿತ್ತೂರ ಕಲ್ಯಾಣ ಪ್ರಾಂತ್ಯಗಳ ಅಭಿವೃದ್ಧಿ ಚಿಂತನೆ ನಡೆಸಲು ಸಲಹೆ ನೀಡಲಾಗಿದೆ.  ಮಕ್ಕಳ ರಕ್ಷಣೆ ಕುರಿತು ಅರಿವು ಮೂಡಿಸಲು ಕ್ರಮ.  ಪರಿಷತ್ ಸದಸ್ಯರ ವೇದಿಕೆ ಮಾಡಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಸರಕಾರಕ್ಕೆ ಸಲಹೆ ನೀಡಲು ಕ್ರಮ ಎಂದರು.

ಸದನದಲ್ಲಿ ರಚನಾತ್ಮಕ ಚರ್ಚೆಗೆ ಪರಿಷತ್ ಸದಸ್ಯರ ಜತೆ ಈಗಾಗಲೇ ಚರ್ಚಿಸಲಾಗಿದೆ. ಸದನ ಸುಗಮವಾಗಿ ನಡೆಯಲು ಅಗತ್ಯ ಕ್ರಮಗಳನ್ನು ವಹಿಸಲಾಗಿದೆ.  ಯುಕೆಪಿ, ಮಹಾದಾಯಿ, ರೈತರ ಸಮಸ್ಯೆ, ಕಬ್ಬು ಬೆಳೆಗಾರರ ಸಮಸ್ಯೆ,  ಮೊದಲ ವಾರ ಹಾಗೂ ಎರಡನೇ ವಾರದಲ್ಲಿ ಮಂಗಳವಾರ ಮತ್ತು ಬುಧವಾರ ದಿನಗಳಂದು ಅಧಿವೇಶನ ನಡೆಸಲು ಈ ಬಾರಿ 20 ಕೋಟಿ ಅಂದಾಜಿಸಲಾಗಿದೆ.

ಶಾಸಕರ ಭವನ ನಿರ್ಮಿಸಲು ಕೆಲವು ಪ್ರಸ್ತಾವನೆಗಳು ಬಂದಿವೆ. ಇವುಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ನಿರ್ಧಾರ ಮಾಡಲಾಗಿದೆ.  ತಾಜ್ ಗ್ರುಪ್, ಕೆ.ಎಲ್.ಇ. ಹೀಗೆ ಅನೇಕ ಸಂಸ್ಥೆಗಳು ಶಾಸಕರ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡಿದ್ದಾರೆ. ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಶಾಸಕರ ಹಾಜರಾತಿ ಹೆಚ್ಚಳಕ್ಕೆ ಕೂಡ ಆದ್ಯತೆ ನೀಡಲಾಗುವುದು. ಬೆಳಗಾವಿ ಸುವರ್ಣ ವಿಧಾನಸೌಧ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಬೆಳಗಾವಿ ವಿಭಜನೆ ಸಾಧಕ-ಬಾಧಕಗಳ ಬಗ್ಗೆ ಸರಕಾರದ ಹಂತದಲ್ಲಿ ಚರ್ಚೆಯಾಗಬೇಕಿದೆ.  ಪರಿಷತ್ತಿನಲ್ಲಿ ಒಟ್ಟು 1397 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 150 ಚುಕ್ಕೆ ಗುರುತಿನ ಪ್ರಶ್ನೆಗಳನ್ನು ಸ್ವೀಕರಿಸಲಾಗಿದೆ.  ಈ ಬಾರಿ 81 ಗಮನಸೆಳೆಯುವ ಸೂಚನೆಗಳು ಬಂದಿರುತ್ತವೆ ಎಂದರು.

Key words: Belgaum session, Basavaraj Horatti