ಜಂತುಹುಳುವನ್ನು ನಿಯಂತ್ರಿಸಿದರೆ, ಶೇ.70 ರಷ್ಟು ಅನಿಮಿಯ ತಡೆಗಟ್ಟಲು ಸಾಧ್ಯ- ಡಾ.ಪಿ.ಸಿ.ಕುಮಾರಸ್ವಾಮಿ.

ಮೈಸೂರು,ಡಿಸೆಂಬರ್,9,2024 (www.justkannada.in): ಅನಿಮಿಯ ಎಂಬುದು ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚಾಗಿ ಕಂಡುಬರುತ್ತಿದ್ದು, ಅದನ್ನು ನಿಯಂತ್ರಿಸಿ ಅನಿಮಿಯ ಮುಕ್ತ ಭಾರತನ್ನಾಗಿ ಮಾಡಲು ಕ್ರಮವಹಿಸಲಾಗಿದೆ. ಈ ನಿಟ್ಟಿನಲ್ಲಿ ಜಂತುಹುಳುವನ್ನು ನಿಯಂತ್ರಿಸಿದರೆ ಶೇ. 70 ರಷ್ಟು ಅನಿಮಿಯವನ್ನು ನಿಯಂತ್ರಿಸಬಹುದು ಎಂದು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ  ಡಾ. ಪಿ. ಸಿ. ಕುಮಾರಸ್ವಾಮಿ ಅವರು ತಿಳಿಸಿದರು.

ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ)ದಲ್ಲಿ ಆಯೋಜಿಸಲಾಗಿದ್ದ, ರಾಷ್ಟ್ರೀಯ  ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ದೇಶದಾದ್ಯಂತ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಜಿಲ್ಲೆಯಲ್ಲಿನ ಎಲ್ಲಾ ಅಂಗನವಾಡಿ, ಶಾಲೆಗಳು, ಪದವಿ ಪೂರ್ವ ಕಾಲೇಜು ಮತ್ತು ಪ್ರಥಮ ವರ್ಷದ ಪದವಿ ಕಾಲೇಜಿನಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಿ, 1 ರಿಂದ 19 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಜಂತುಹುಳುವಿನ ಮಾತ್ರೆ ಹಾಗೂ ಅದರಿಂದಾಗುವ ಉಪಯೋಗದ ಬಗ್ಗೆ ಅರಿವನ್ನು ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪ್ರಸ್ತುತ 2024 ನೇ ಸಾಲಿನಲ್ಲಿ 701228 ಮಕ್ಕಳಿಗೆ ಜಂತುಹುಳು ಮಾತ್ರೆಯನ್ನು ವಿತರಿಸಿ, ಇದರಿಂದ ಜಂತುಹುಳು ನಿವಾರಣೆ ಮಾಡಲಾಗುತ್ತದೆ. ಮಕ್ಕಳ ಆರೋಗ್ಯದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಬೀರದ ರೀತಿಯಲ್ಲಿ ಮಾತ್ರೆಯನ್ನು ತಯಾರಿಸಲಾಗಿದ್ದು, ಮಕ್ಕಳು ನಿಶ್ಚಿಂತೆಯಿಂದ ಯಾವುದೇ ಭಯ ಅಥವಾ ಹಿಂಜರಿಕೆ ಪಡದೆ 6 ತಿಂಗಳಿಗೊಮ್ಮೆ ತೆಗೆದುಕೊಳ್ಳಬೇಕು. ಇದರಿಂದ ಮಕ್ಕಳಲ್ಲಿ ಕಂಡುಬರುವ ಹೊಟ್ಟೆನೋವು, ಆಯಾಸ ಹಾಗೂ ಇನ್ನಿತರ ಸಮಸ್ಯೆಗಳು ಕಡಿಮೆಯಾಗಿ ಅನಿಮಿಯವನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ಹಾಗಾಗಿ ಸದೃಢ ಅರೋಗ್ಯವಂತ ಭಾರತವನ್ನು ನಿರ್ಮಿಸಲು ಇಂದಿನಿಂದಲೇ  ಮಕ್ಕಳು ಹೆಚ್ಚೆಚ್ಚು ಅರೋಗ್ಯ ಅಧಿಕಾರಿಗಳು ಶಿಕ್ಷಕರು ನೀಡುವ ಸಲಹೆಯನ್ನು ಪಾಲಿಸಬೇಕು ಎಂದು ಹೇಳಿದರು.

ಪ್ರತಿಯೊಬ್ಬರೂ ಅರೋಗ್ಯವಂತರಾಗಿರಲು ಮುಖ್ಯವಾಗಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಸೇವಿಸುವ ಆಹಾರ, ಹಣ್ಣು ಹಾಗೂ ಕುಡಿಯುವ ನೀರು ಶುದ್ಧವಾಗಿದೆಯೇ ಎಂದು ಪರೀಕ್ಷಿಸಿ ನಂತರ ಸೇವಿಸಬೇಕು. ಶೌಚದ ನಂತರ ಕೈಗಳನ್ನು ಉತ್ತಮ ರೀತಿಯಲ್ಲಿ ಸ್ವಚ್ಛಗೋಳಿಸಿಕೊಳ್ಳಬೇಕು. ಊಟಕ್ಕೆ ಮೊದಲು ಹಾಗೂ ಊಟದ ನಂತರ ಕೈ ಸ್ವಚ್ಛಗೋಳಿಸಿಕೊಳ್ಳಬೇಕು ಅಲ್ಲದೆ ನಮ್ಮ ಸುತ್ತ -ಮುತ್ತಲಿನ ವಾತಾವರಣವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಆಗಿದ್ದಾಗ ಮಾತ್ರವೇ ನಮ್ಮ ಅರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಜಿಲ್ಲೆಯಾದ್ಯಂತ  ಅರೋಗ್ಯ ಸಿಬ್ಬಂದಿಗಳು, ವೈದ್ಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ 4000 ಕ್ಕೂ ಅಧಿಕ ಅಧಿಕಾರಿಗಳಿಂದ ಶಾಲಾ-ಕಾಲೇಜಿಗೆ ತೆರಳಿ ಶುದ್ಧ ಕುಡಿಯುವ ನೀರು ಹಾಗೂ ಮಕ್ಕಳ ಅರೋಗ್ಯ ಹಾಗೂ ಜಂತುಹುಳುವಿಗೆ ಸಂಬಂಧಿಸಿದಂತೆ ಸರ್ವೇ  ಮಾಡಲಾಗುತ್ತಿದ್ದು, ಈ ಸಂದರ್ಭದಲ್ಲಿ ಸಮಸ್ಯೆಗಳು ಕಂಡುಬಂದರೆ ಅವುಗಳಿಗೆ ಚಿಕಿತ್ಸೆಯನ್ನು ನೀಡಲಾಗುವುದು, ಹಾಗಾಗಿ ಪ್ರತಿಯೊಬ್ಬ ಮಕ್ಕಳು ಅಧಿಕಾರಿಗಳೊಂದಿಗೆ ಸ್ಪಂದಿಸಿ ತಮ್ಮಲ್ಲಿರುವ ಸಮಸ್ಯೆಯನ್ನು ಮುಕ್ತವಾಗಿ ಹೇಳಿಕೊಳ್ಳುವ ಮೂಲಕ ಅರೋಗ್ಯವಂತ ಸಮಾಜವನ್ನು ನಿರ್ಮಿಸಲು ಸಹಕರಿಸಬೇಕು ಎಂದರು.

ಈಗಾಗಲೇ 100 ದಿನಗಳ ಕ್ಷಯರೋಗ ಅರಿವು ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದ್ದು, ಮಕ್ಕಳು ಒಂದು ಬಾರಿ ಚೆಕಪ್ ಮಾಡಿಸಿಕೊಳ್ಳುವ ಮೂಲಕ ಮುಂದೆ ಬರುವ ಸಮಸ್ಯೆಯನ್ನು ಈಗಲೇ ನಿಯಂತ್ರಿಸಬಹುದು ಹಾಗೂ ಅದರ ಬಗ್ಗೆ ಇತರರಿಗೂ ಅರಿವನ್ನು ಮೂಡಿಸಬಹುದಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಕಾರ್ಯಕ್ರಮದ ಉಪಯುಕ್ತತೆಯನ್ನು ಅರಿತು ಅದರ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಮೈಸೂರು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅನಂತರಾಜು ಅವರು ಮಾತನಾಡಿ, 01 ವರ್ಷದಿಂದ 19 ವರ್ಷದವರೆಗಿನ ಮಕ್ಕಳಿಗೆ ಇಂದು ಜಂತು ಹುಳುವಿನ ಮಾತ್ರೆಯನ್ನು ವಿತರಿಸಲಾಗುತ್ತಿದ್ದು, ಇದರ ಉದ್ದೇಶ ರೋಗ ಮುಕ್ತ ಉತ್ತಮ ಸಮಾಜದ ಸ್ಥಾಪನೆಯಾಗಿದೆ. ಜಂತು ಹುಳುವನ್ನು ತಡೆಗಟ್ಟಿದರೆ, ಅನಿಮಿಯವನ್ನು ತಡೆಗಟ್ಟಲು ಸಾಧ್ಯ. ಹಾಗಾಗಿ ವಿದ್ಯಾರ್ಥಿಗಳು ನಿರ್ಲಕ್ಷಿಸದೆ ಆರು ತಿಂಗಳಿಗೆ ಒಮ್ಮೆ ಮಾತ್ರೆಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಮಕ್ಕಳಿಗೆ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಅವುಗಳನ್ನು ಹೋಗಲಾಡಿಸಿ,  ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಇದು ಉತ್ತಮ ಮಾರ್ಗವಾಗಿದೆ. ಮಕ್ಕಳು ಮಾತ್ರೆಯನ್ನು ಸೇವಿಸಿ, ಅರೋಗ್ಯಧಿಕಾರಿಗಳ ಸೂಚನೆಗಳನ್ನು ಪಾಲಿಸುವ ಮೂಲಕ ಅರೋಗ್ಯವಂತರಾಗಿ, ಸದೃಢರಾಗಿ ಸಮಾಜಕ್ಕೆ ಉತ್ತಮ ಪ್ರಜೆಯಾಗಬೇಕು. ಸರ್ಕಾರದ ಮಹತ್ವಕಾಂಕ್ಷಿಯ ಯೋಜನೆಯಾಗಿರುವ ಇದನ್ನು ಗಂಭೀರವಾಗಿ ಪರಿಗಣಿಸಿ ಅನುಸರಿಸಿದಾಗ ಮಾತ್ರವೇ ಅರೋಗ್ಯವಂತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಜಂತುಹುಳುವಿನ ಮಾತ್ರಗಳನ್ನು ವಿತರಿಸಿ, ಕೈ ಸ್ವಚ್ಛತೆಯ ಬಗ್ಗೆ ಪ್ರಾಯೋಗಿಕವಾಗಿ ಪ್ರದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರ್. ಸಿ. ಎಚ್ ಅಧಿಕಾರಿಗಳಾದ ಸಿರಾಜ್, ಕಾರ್ಯಕ್ರಮಾಧಿಕಾರಿಗಳಾದ ಗೋಪಿನಾಥ್ ಸೇರಿದಂತೆ ಅರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Key words:  worms, control, anemia, mysore, DHO