ಮೈಸೂರು, ಡಿ.೧೨,೨೦೨೪: (www.justkannada.in news) ಜಿಲ್ಲೆಯ ನಂಜನಗೂಡಿನಲ್ಲೊಬ್ಬ ವಿಕೃತಕಾಮಿ. ಮಹಿಳೆಯರು ಮತ್ತು ಯುವತಿಯರ ಬಗ್ಗೆ ಅಶ್ಲೀಲ ಚಿತ್ರಗಳು ಹಾಗೂ ಸಂದೇಶಗಳನ್ನು ಬರೆದು ಆ ಚೀಟಿಗಳನ್ನು ಮನೆಗಳ ಮುಂದೆ ಇಡುತ್ತಿದ್ದ ಸೈಕೋಪಾಥ್, ಇದೀಗ ಗ್ರಾಮಸ್ಥರ ಕಾರ್ಯಚರಣೆ ಫಲವಾಗಿ ಪೊಲೀಸರ ಅತಿಥಿ.
ಗ್ರಾಮದ ಮುಖಂಡನೇ ಈ ಕುಕೃತ್ಯ ಎಸಗುತ್ತಿದ್ದ ಅಂಶ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಗ್ರಾಮದ ಜನರೇ ಸಂಚು ಹಾಕಿ ಆರೋಪಿಯನ್ನು ರೆಡ್ ಹ್ಯಾಂಡಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕೈಗೆ ಸಿಕ್ಕಿಬಿದ್ದ ಆರೋಪಿಗೆ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದರು. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮ ವರದರಾಜಸ್ವಾಮಿ ಬಡಾವಣೆಯಲ್ಲಿ ಬೆಳಕಿಗೆ ಬಂದ ಪ್ರಕರಣ. ಶಿವಣ್ಣ (54) ಸಿಕ್ಕಿಬಿದ್ದ ಸೈಕೋಪಾಥ್.
ಹುಲ್ಲಹಳ್ಳಿ ಗ್ರಾಮದಲ್ಲಿ ಯಾವುದೇ ಸಮಸ್ಯೆ ಎದುರಾದಲ್ಲಿ ಅಂಥ ಸಂದರ್ಭದಲ್ಲಿ ನ್ಯಾಯ ಪಂಚಾಯ್ತಿಗೆ ಮುಂದೆ ನಿಲ್ಲುತ್ತಿದ್ದ ಮುಖಂಡನಿಂದಲೇ ಈ ಕೃತ್ಯ. ಕಳೆದ ಹಲವಾರು ತಿಂಗಳಿಂದ ಈ ಸೈಕೋಪಾತ್ ನನ್ನು ಹಿಡಿಯಲು ಗ್ರಾಮಸ್ಥರು ಹೊಂಚು ಹಾಕಿದ್ದರು ಪ್ರಯೋಜನವಾಗಿರಲಿಲ್ಲ. ಕಾರಣ ಪ್ರತಿಸಾರಿಯೂ ಒಂದಲ್ಲ ಒಂದು ರೀತಿ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿತ್ತಿದ್ದ. ಆದರೆ, ಮೊನ್ನೆ ರಾತ್ರಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಆರೋಪಿ ಸೈಕೋಪಾಥ್.
ಈತನ ಕೃತ್ಯದಿಂದಾಗಿ ಗ್ರಾಮದಲ್ಲಿನ ಹಲವು ಯುವತಿಯರ ಮದುವೆ ಮುರಿದು ಬಿದ್ದಿದ್ದವು. ಈತನಿಂದಾಗಿ ದಂಪತಿಗಳ ನಡುವೆ ಅನುಮಾನ ಮೂಡಿ ಹಲವು ಸಂಸಾರದಲ್ಲಿ ವಿರಸ ಉಂಟಾಗಿತ್ತು. ಹಲವರ ದಾಂಪತ್ಯ ಮುರಿದುಬಿದ್ದು ಡಿವೋರ್ಸ್ ಮೆಟ್ಟಿಲೇರಿದ್ದರು.
ಆದರೆ, ಇದಕ್ಕೆಲ್ಲಾ ಅಂತ್ಯವಾಡಬೇಕು ಎಂದು ಗ್ರಾಮಸ್ಥರು ಕಟಿಬದ್ಧವಾಗಿ ಹೊಂಚು ಹಾಕಿ ಕುಳಿತರು. ಪರಿಣಾಮ, ಮೊನ್ನೆ ತಡರಾತ್ರಿ ಸೈಕಲ್‌ನಲ್ಲಿ ಬಂದು ಮನೆಯೊಂದರ ಮುಂದೆ ಚೀಟಿ ಇಡುವಾಗ ಶಿವಣ್ಣ ಸಿಕ್ಕಿಬಿದ್ದ.
ಸೆರೆಸಿಕ್ಕ ಸೈಕೋಪಾಥ್ ನನ್ನು ಗ್ರಾಮಸ್ಥರೇ ಸುತ್ತುವರಿದು ಹಿಗ್ಗಾಮುಗ್ಗ ಥಳಿಸಿ ಬಳಿಕ ಹುಲ್ಲಹಳ್ಳಿ ಠಾಣೆ ಪೊಲೀಸರಿಗೆ ಒಪ್ಪಿಸಿದರು.
key words: “psychopath”, Mysore, nanjanagudu, hullahalli, police
The “psychopath” was finally captured by the villagers…!