ಮೈಸೂರು,ಡಿಸೆಂಬರ್,13,2024 (www.justkannada.in): ಅನಧಿಕೃತ ಶುಂಠಿ ಶುದ್ಧೀಕರಣ ಘಟಕಗಳ ತೆರವಿಗೆ ಕಳೆದ ಎರಡು ವಾರಗಳ ಹಿಂದೆಯೇ ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿ ಆದೇಶ ಹೊರಡಿಸಿದರೂ ಆದೇಶವನ್ನ ಮುಚ್ಚಿಟ್ಟು ಪುರಸಭೆ ಮುಖ್ಯಾಧಿಕಾರಿ ಕಳ್ಳಾಟವಾಡುತ್ತಿರುವ ಘಟನೆ ಹೆಚ್ ಡಿ ಕೋಟೆಯಲ್ಲಿ ನಡೆದಿದೆ.
ಅನಧಿಕೃತ ಶುಂಠಿ ಶುದ್ಧೀಕರಣ ಘಟಕಗಳನ್ನ ತೆರವುಗೊಳಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿಯು 27/11/2024 ರಂದೇ ಆದೇಶ ಹೊರಡಿಸಿದ್ದು, ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ಪುರಸಭೆ ಮುಖ್ಯಾಧಿಕಾರಿಗೆ ಈ ಆದೇಶ ರವಾನೆ ಮಾಡಿದೆ. ಅಲ್ಲದೆ ಆದೇಶ ಕಳುಹಿಸಿದ 7 ದಿನಗಳ ಒಳಗೆ ಅಕ್ರಮ ಕೇಂದ್ರಗಳನ್ನ ಮುಚ್ಚಿಸುವಂತೆ ಸೂಚನೆ ನೀಡಿದೆ.
ಪುರಸಭೆ ಮುಖ್ಯಾಧಿಕಾರಿ ಸುರೇಶ್ ಆದೇಶ ಮುಚ್ಚಿಟ್ಟು ಕಳ್ಳಾಟ ಆಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ಅಕ್ರಮ ಶುಂಠಿ ಶುದ್ಧೀಕರಣ ಕೇಂದ್ರಗಳಿಂದ ಕಬಿನಿ ಕಲುಷಿತಗೊಳ್ಳುತ್ತಿದ್ದು, ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ವರದಿ ಬಿತ್ತರಿಸಿದ ಬಳಿಕ ಕ್ರಮಕೈಗೊಳ್ಳುವುದಾಗಿ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ತಿಳಿಸಿದ್ದರು. ಅಕ್ರಮ ಕೇಂದ್ರಗಳನ್ನ ಮುಚ್ಚಿಸುವ ಭರವಸೆ ನೀಡಿದ್ದರು. ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ದಿನವೇ ಕರ್ನಾಟಕ ರಾಜ್ಯ ಮಾಲೀನ್ಯ ಮಂಡಳಿ ಆದೇಶ ಹೊರಡಿಸಿತ್ತು.
Key words: unauthorized, ginger,cleaning units, Official, HD Kote