ಮೇಲ್ಛಾವಣಿಯಲ್ಲಿ ಬಿರುಕು: ದುರಸ್ತಿಗೆ ಮುಂದಾದ ಮೈಸೂರು ಮಹಾನಗರ ಪಾಲಿಕೆ

ಮೈಸೂರು,ಡಿಸೆಂಬರ್,13,2024 (www.justkannada.in): ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದ ಮೇಲ್ಚಾವಣಿಯಲ್ಲಿ ಬಿರುಕು ಉಂಟಾಗಿದ್ದು ಇದರ ದುರಸ್ತಿಗೆ ಪಾಲಿಕೆ ಮುಂದಾಗಿದೆ.

ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭಾಂಗಣದ ಮೇಲ್ಛಾವಣಿಯಲ್ಲಿ ಬಿರುಕು ಉಂಟಾಗಿದೆ. ಫೆಂಗಲ್‌ ಚಂಡಮಾರುತದ ಸಂದರ್ಭದಲ್ಲಿ ಮೇಲ್ಛಾವಣಿ ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ಒಂದು‌ ಕೋಟಿ ರೂ ವೆಚ್ಚದಲ್ಲಿ ಮೇಲ್ಛಾವಣಿ ನಿರ್ಮಾಣಕ್ಕೆ ಪಾಲಿಕೆ ನಿರ್ಧರಿಸಿದೆ ಎನ್ನಲಾಗಿದೆ.

ಮೇಲ್ಛಾವಣಿ ಕುಸಿತ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದ್ದು ವರದಿ ಬಳಿಕ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು ದುರಸ್ತಿಗೆ ಮುಂದಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ  ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್,  ಪಾಲಿಕೆ ಕಟ್ಟಡದ ದುರಸ್ತಿಗಾಗಿ ವಿವಿಧ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಕಾಮಗಾರಿ ವೇಳೆ ಮೇಲ್ಚಾವಣಿಯಲ್ಲಿ ಬಿರುಕು‌ ಉಂಟಾಗಿದೆ. ಪಾಲಿಕೆ ಕಟ್ಟಡದ ದುರಸ್ತಿಗಾಗಿ ಟೆಂಡರ್ ಕರೆಯಲಾಗಿದೆ. ಪಾರಂಪರಿಕ ಕಟ್ಟಡ ಮಾದರಿಯಲ್ಲಿಯೇ ರಿಪೇರಿ ಮಾಡಲಾಗುವುದು. ಪಾರಂಪರಿಕತೆಗೆ ಧಕ್ಕೆ ಬರದಂತೆ ಸರಿಪಡಿಸಲಾಗುವುದು. ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಪಾಲಿಕೆ ಕಟ್ಟಡದ ದುರಸ್ತಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

Key words: Crack, roof, Mysore city Corporation, repair