ವಿದ್ಯಾಸಂಸ್ಥೆಗಳು ವಿಜ್ಞಾನ ಕೇಂದ್ರಗಳಾಗಬೇಕು : ಪ್ರೊ.ಕೆ.ಪಿ.ಜೆ ರೆಡ್ಡಿ.

ಬೆಂಗಳೂರು, ಡಿಸೆಂಬರ್,14,2024 (www.justkannada.in):  “ಪ್ರತಿ ವಿದ್ಯಾಸಂಸ್ಥೆಗಳು ವಿಜ್ಞಾನ ಕೇಂದ್ರಗಳಾಗಬೇಕು, ವಿದ್ಯಾರ್ಥಿಗಳು ಅದರ ಸದುಪಯೋಗಪಡಿಸಿಕೊಂಡು ಪ್ರತಿಯೊಂದು ವಸ್ತುಗಳಲ್ಲೂ ಹೊಸತನ್ನು ಹುಡುಕುವಂತಹ ಮನಸ್ಥಿತಿ ಬೆಳೆಸಿಕೊಳ್ಳಬೇಕು, ಆಗಲೇ ವಿಜ್ಞಾನದ ಬೆಳವಣಿಗೆ ಸಾಧ್ಯ” ಎಂದು ಬೆಂಗಳೂರು ಐಐಎಸ್ ಇ ಪ್ರಾಧ್ಯಾಪಕರಾದ ಪ್ರೊ.ಕೆ.ಪಿ.ಜೆ.ರೆಡ್ಡಿ ಕರೆ ನೀಡಿದರು.

ಬಿ. ವಿ.ಜಗದೀಶ್ ವಿಜ್ಞಾನ ಕೇಂದ್ರ ಮತ್ತು ಇಸ್ರೋ ಸಹಭಾಗಿತ್ವದಲ್ಲಿ ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ `ಸೈನ್ಸ್ ಇನ್ ಆ್ಯಕ್ಷನ್’ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಇದೇ ವೇಳೆ ಮಾತನಾಡಿದ ಇಸ್ರೋದ ಹಿರಿಯ ವಿಜ್ಞಾನಿ ಡಾ.ಟಿ.ಕೆ.ಅನುರಾಧ  “ಸ್ಯಾಟಲೈಟ್ ಗಳು ದೇಶದಲ್ಲಿ ಅಭಿವೃದ್ಧಿ ಪರ ಬದಲಾವಣೆಗಳಾಗುವುದಕ್ಕೆ ಪ್ರಮುಖ ಕೊಡುಗೆ ನೀಡಿವೆ. ಸಾಮಾನ್ಯ ಮನುಷ್ಯನವರೆಗೂ ಇಂದು ತಂತ್ರಜ್ಞಾನ ತಲುಪಿದೆ ಎಂದರೆ ಅದು ವಿಜ್ಞಾನದ ಸಾಧನೆ” ಎಂದು  ಅಭಿಪ್ರಾಯಪಟ್ಟರು.

ಇನ್ನು ಎರಡು ದಿನಗಳ  ಕಾಲ ನಡೆಯುವ ವಿಜ್ಞಾನ ಮೇಳದಲ್ಲಿ ನೂರಾರು ಸಂವಾದಾತ್ಮಕ ವಿಜ್ಞಾನ ಮಾದರಿಗಳು, ವಿದ್ಯಾರ್ಥಿಗಳೇ ತಯಾರಿಸಿರುವ ಹಲವು ಕ್ರಿಯಾತ್ಮಕ  ಮಾದರಿಗಳು, ಇಸ್ರೋದ ಉಪಗ್ರಹಗಳ ಸ್ಕೇಲ್ಡ್ ಮಾದರಿಗಳ ಪ್ರದರ್ಶನ ಇರಲಿದೆ.

ಕಾರ್ಯಕ್ರಮದಲ್ಲಿ ಡಾ.ಎಚ್.ಎನ್.ಸುಬ್ರಮಣ್ಯ, ಸಿಲಿಕಾನ್ ವ್ಯಾಲಿ ಅಮೆರಿಕದ ಪ್ರವರ್ತಕ ಬಿ.ವಿ. ಜಗದೀಶ್, ಎನ್ ಇಎಸ್ ಆಫ್ ಕರ್ನಾಟಕ ಗೌರವ ಕಾರ್ಯದರ್ಶಿ, ಡಾ.ಎಚ್. ಎನ್. ಎನ್.ಇಂಜಿನಿಯರಿಂಗ್ ಕಾಲೇಜಿನ ಚೇರ್ಮನ್ ವಿ.ವೆಂಕಟಶಿವಾ ರೆಡ್ಡಿ, ಕಾರ್ಯದರ್ಶಿ ಬಿ.ಎಸ್.ಅರುಣ್ ಕುಮಾರ್, ಚೇರ್ಮನ್ ಡಾ. ಪಿ.ಎಲ್.ವೆಂಕಟರಾಮ ರೆಡ್ಡಿ, ಖಜಾಂಚಿ ತಲ್ಲಮ್ ದ್ವಾರಕನಾಥ್, ಪ್ರಾಂಶುಪಾಲರಾದ ಪಿ.ಎಲ್.ರಮೇಶ್, ಎಚ್.ಎನ್.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಯದೇವಪ್ಪ, ಪ್ರೊ.ಮಮತಾ, ಕಾಲೇಜ್ ಕೌನ್ಸಿಲ್ ಸೆಕ್ರೆಟರಿ ಪ್ರೊ.ಚೆಲುವಪ್ಪ, ಅಧ್ಯಾಪಕರು ಭಾಗವಹಿಸಿದ್ದರು.

Key words: Educational institutions, science centers, K.P.J. Reddy