ಆದಷ್ಟು ಬೇಗ ತ್ಯಾಜ್ಯ ವಿಲೇವಾರಿ ಕಾರ್ಯ ಪೂರ್ಣ- ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್

ಮೈಸೂರು,ಡಿಸೆಂಬರ್,17,2024 (www.justkannada.in): ಈಗಾಗಲೇ  ಸಿವೇಜ್ ಫಾರಂ ತ್ಯಾಜ್ಯ ವಿಲೇವಾರಿ ಕಾರ್ಯ ನಡೆಯುತ್ತಿದ್ದು ಆದಷ್ಟು ಬೇಗ ವಿಲೇವಾರಿ ಪೂರ್ಣಗೊಳ್ಳಲಿದೆ ಎಂದು  ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್  ತಿಳಿಸಿದರು.

ಈ ಕುರಿತು ಮಾತನಾಡಿದ ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್, ಕಳೆದ 20,30 ವರ್ಷಗಳಿಂದ ಈ ಸಮಸ್ಯೆ ಇತ್ತು. ನಾವು ಪಾಲಿಕೆ ಆಯುಕ್ತರಾದ ಬಳಿಕ ತ್ಯಾಜ್ಯ ವಿಲೇವಾರಿಗೆ ಅನುಮೋದನೆ ಸಿಕ್ಕಿತ್ತು. ಚುನಾವಣೆ ಇದ್ದ ಕಾರಣ ತ್ಯಾಜ್ಯ ವಿಲೇವಾರಿ ಆಗಿರಲಿಲ್ಲ. ಚುನಾವಣೆ ಬಳಿಕ ಈಗ ತ್ಯಾಜ್ಯ ವಿಲೇವಾರಿ ಆಗುತ್ತಿದೆ. ತ್ಯಾಜ್ಯ ವಿಲೇವಾರಿ ಕಾರ್ಯವನ್ನ ಸೂರತ್ ಮೂಲದ ಡಿ ಹೆಚ್ ಪಟೇಲ್ ಅನ್ನೋ ಕಂಪನಿ ಮಾಡುತ್ತಿದೆ. ಪ್ಲಾಸ್ಟಿಕ್, ಮಣ್ಣು, ಎಲ್ಲವನ್ನ ಬೇರ್ಪಡಿಸುವ ಕೆಲಸ ಆಗುತ್ತಿದೆ. ಈಗಾಗಲೇ ವಿಲೇವಾರಿ ಕಾರ್ಯ ನಡೆಯುತ್ತಿದೆ. ಆದಷ್ಟು ಬೇಗ ವಿಲೇವಾರಿ ಕಾರ್ಯ ಮುಗಿಯುತ್ತದೆ ಎಂದು ತಿಳಿಸಿದರು.

ವಲಯ ಕಚೇರಿ ಹಾಗೂ ನೀರು ಸರಬರಾಜು ಇಲಾಖೆಯಲ್ಲಿ ಪ್ರತ್ಯೇಕ ಸಾಫ್ಟ್ ವೇರ್ ಬಳಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅಸಾದ್ ಉರ್ ರೆಹಮಾನ್ ಶರೀಫ್, ಪ್ರತ್ಯೇಕ ಸಾಫ್ಟ್ ವೇರ್ ಬಳಕೆಯಿಂದ ಹಗರಣಗಳು ನಡೆಯುತ್ತಿಲ್ಲ. ಬದಲಾಗಿ ಹಗರಣಗಳು ನಡೆದಿರೋದು ಗೊತ್ತಾಗಿದೆ. ಪ್ರತ್ಯೇಕ ಸಾಫ್ಟ್ ವೇರ್ ನಲ್ಲಿ ಎಲ್ಲವು ತಿಳಿಯುತ್ತಿದೆ. ಕಂದಾಯ ಪಾವತಿ ಅಪ್ ಡೇಟ್ ಗೊತ್ತಾಗುತ್ತಿದೆ. ಹಿಂದೆ ನಮಗೆ ಇದರ ಬಗ್ಗೆ ಮಾಹಿತಿ ತಿಳಿಯುತ್ತಿರಲಿಲ್ಲ. ಈಗ ಯಾರು 50ಸಾವಿರ, 1ಲಕ್ಷ ಮೇಲೆ ಕಂದಾಯ ಬಾಕಿಯಿದೆ ಎಂಬ ಮಾಹಿತಿ ಸಿಗುತ್ತಿದೆ. ನಾವು ಪ್ರತಿ ಸಭೆಯಲ್ಲೂ ಅದನ್ನ ರಿವಿವ್ ಮಾಡುತ್ತೇವೆ. ಈ ಹಿಂದೆ ಪಾಲಿಕೆಗೆ ಕಡಿಮೆ ಕಂದಾಯ ಪಾವತಿ ಆಗುತ್ತಿತ್ತು. ಈಗ 150,180 ಕೋಟಿ ವರೆಗೆ ಕಂದಾಯ ಪಾವತಿ ಆಗುತ್ತಿದೆ ಎಂದರು.

ಫುಟ್ ಪಾತ್ ಒತ್ತುವರಿ: ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗದ ರೀತಿ ಕ್ರಮ

ಫುಟ್ ಪಾತ್ ಒತ್ತುವರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಅಸಾದ್ ಉರ್ ರೆಹಮಾನ್ ಶರೀಫ್, ಸಾರ್ವಜನಿಕರ ಓಡಾಟಕ್ಕೆ ಫುಟ್ ಪಾತ್ ಇರೋದು. ಫುಟ್ ಪಾತ್ ಒತ್ತುವರಿ ತೆರವು ಮಾಡುತ್ತಿದ್ದೇವೆ. ಕೆಲ ಸಣ್ಣಪುಟ್ಟ ವ್ಯಾಪಾರಸ್ಥರು ಕೂಡ ಫುಟ್ ಪಾತ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ಕೂಡ ಪಾಲಿಕೆಗೆ ಕಂದಾಯ ನೀಡುತ್ತಾರೆ. ಅವರಿಂದಲೂ ನಮಗೆ ರೆವಿನ್ಯೂ ಬರುತ್ತಿದೆ. ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗದ ರೀತಿ ಕ್ರಮ ವಹಿಸುತ್ತೇವೆ ಎಂದು ಹೇಳಿದರು.

Key words: waste, disposal, soon, MCC, Commissioner