ಆದ್ಯತೆ ಮೇರೆಗೆ ಭದ್ರಾ ಮೇಲ್ದಂಡೆ ಯೋಜನೆ ಮೊದಲ ಹಂತ ಪೂರ್ಣ- ಸಚಿವ ಕೃಷ್ಣ ಭೈರೇಗೌಡ

ಬೆಳಗಾವಿ, ಡಿಸೆಂಬರ್,18,2024 (www.justkannada.in): ಮಧ್ಯ ಕರ್ನಾಟಕ ಭಾಗದ ಬಹುದಿನದ ಬೇಡಿಕೆಯಾದ ಭದ್ರಾ ಮೇಲ್ದಂಡೆ ಯೋಜನೆಯ ಮೊದಲನೆ ಹಂತವನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸುವುದಾಗಿ ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.

ವಿಧಾನ ಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಎಂ.ಚಂದ್ರಪ್ಪನವರ ಚುಕ್ಕೆ ಗುರುತಿನ ಪ್ರಶ್ನೆಗೆ ಉಪ ಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿದ ಸಚಿವ ಕೃಷ್ಣಭೈರೇಗೌಡ, 2003ರಲ್ಲಿ ಯೋಜನೆಗೆ ರೂ.2813 ಕೋಟಿ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ನಂತರ 2015 ರಲ್ಲಿ ಯೋಜನೆಯ ಪರಿಷ್ಕೃತ ಮೊತ್ತ ರೂ.12340 ಕೋಟಿಗೆ ಸರ್ಕಾರ ಅನುಮೋದನೆ ನೀಡಿದೆ. 2020 ರಲ್ಲಿ ಪರಿಷ್ಕೃತ ಯೋಜನೆ ಮೊತ್ತ ರೂ.21473.67 ಕೋಟಿಗೆ ಏರಿಕೆಯಾಗಿದೆ. ಇದಕ್ಕೆ ತಕ್ಕಹಾಗೆ ಯೋಜನೆಯ ಮೂಲ ವ್ಯಾಪ್ತಿ ವಿಸ್ತೀರ್ಣ ಹಾಗೂ ಕುಡಿಯುವ ನೀರಿನ ಯೋಜನೆಗಳು ಸಹ ಸೇರ್ಪಡೆಯಾಗಿವೆ. 2027-28ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ಯೋಜನೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದ್ದು, ಇನ್ನೂ ರೂ.11,358.54 ಕೋಟಿ ಅನುದಾನ ಬೇಕಾಗುತ್ತದೆ. ಕೇಂದ್ರ ಸರ್ಕಾರ ಆಯವ್ಯಯದಲ್ಲಿ ಘೋಷಿಸಿದಂತೆ ರೂ.5300 ಕೋಟಿ ಅನುದಾನವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಅನುದಾನ ಲಭಿಸಿದರೆ ಯೋಜನೆ ಪೂರ್ಣಗೊಳಿಸಲು ಸಹಾಯವಾಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

1957 ರಲ್ಲಿ ದಿವಂಗತ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರು ಮಧ್ಯ ಕರ್ನಾಟಕ ಬರ ಪೀಡಿತ ಜಿಲ್ಲೆಗಳಿಗೆ ನೀರನ್ನು ನೀಡಲು ಮಹತ್ವಾಂಕ್ಷೆ ಭದ್ರಾ ಯೋಜನೆಯ ಬಗ್ಗೆ ಚಿಂತಿಸಿದ್ದರು. 2003ರಲ್ಲಿ ಅನುಮೊದನೆ ನೀಡಿದ ಯೋಜನಾ ವೆಚ್ಚ ಇಂದು 21473.67 ಕೋಟಿಗಳಷ್ಟು ಹೆಚ್ಚಾಗಿದೆ. ಇನ್ನೂ ತಡವಾದರೆ ಎಸ್.ಆರ್. ರೇಟ್ ಏರಿಕೆಯಾಗಿ ಯೋಜನೆ ವೆಚ್ಚವು ಇನ್ನೂ ಹೆಚ್ಚಾಗಲಿದೆ. ಪಕ್ಕದ ತೆಲಂಗಾಣ ರಾಜ್ಯದಲ್ಲಿನ ಸರ್ಕಾರ 5 ವರ್ಷದಲ್ಲಿ ರೂ.1.20 ಲಕ್ಷ ಕೋಟಿ ಖರ್ಚು ಮಾಡಿ 18 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಿದೆ. ರಾಜ್ಯವೂ ಸಹ ಇಂತಹದೇ ಇಚ್ಛಾ ಶಕ್ತಿಯನ್ನು ಪ್ರದರ್ಶಿಸಬೇಕು. ಕೇಂದ್ರ ಸರ್ಕಾರ ಘೋಷಿಸಿದ ಅನುದಾನ ನೀಡಿಲ್ಲ ಎಂದು ನೆಪ ಹೇಳದೆ, ರಾಜ್ಯ ಸರ್ಕಾರವೇ ಅನುದಾನ ನೀಡಿ ಯೋಜನೆ ಪೂರ್ಣಗೊಳಿಸಬೇಕು ಎಂದರು.

Key words: First phase, Bhadra Upper River Project, Minister, Krishna Bhairegowda