ಬೆಳಗಾವಿ ಸುವರ್ಣ ವಿಧಾನಸೌಧ ಡಿ. 18,2024 (www.justkannada.in): ರಾಷ್ಟ್ರ ಮತ್ತು ಅಂತರಾಷ್ಠ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ನೀಡಲಾಗುವ ಸಹಾಯಧನ ಮೊತ್ತವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಮಂಗಳೂರು ನಗರ(ಉತ್ತರ) ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ವಿದ್ಯಾರ್ಥಿಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನೇರವಾಗಿ ಸಹಾಯಧನ ನೀಡುವ ಯಾವುದೇ ಕಾರ್ಯಕ್ರಮವಿರುವುದಿಲ್ಲ. ಆದರೆ ಕರ್ನಾಟಕ ಕ್ರೀಡಾ ಪ್ರಾಧಿಕಾರದಲ್ಲಿ ಮಾನ್ಯತೆ ಪಡೆದ ರಾಜ್ಯ ಕ್ರೀಡಾ ಸಂಸ್ಥೆಗಳು ರಾಷ್ಟ್ರಮಟ್ಟದ ಕ್ರೀಡಾಕೂಟಗಳಿಗೆ ಕಳುಹಿಸುವ ವಿದ್ಯಾರ್ಥಿಗಳನ್ನೂ ಒಳಗೊಂಡಂತೆ ರಾಜ್ಯದ ಕ್ರೀಡಾಪಟುಗಳಿಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದಿಂದ ಈ ಸಂಸ್ಥೆಗಳ ಮುಖಾಂತರ 2ನೇ ದರ್ಜೆ ರೈಲು/ಬಸ್ ಪ್ರಯಾಣ ದರದ ಪ್ರಯಾಣಭತ್ಯೆ, 200 ರೂ. ದಿನಭತ್ಯೆ, 1000 ರೂ. ಗಳ ಕ್ರೀಡಾಗಂಟು, ಸ್ಥಳೀಯ ಪ್ರಯಾಣ ಶುಲ್ಕ ರೂ. 20 ನೀಡಲಾಗುತ್ತಿದ್ದು, ಪೂರ್ವಭಾವಿ ತರಬೇತಿ ಶಿಬಿರದಲ್ಲಿ ಭಾಗವಹಿಸಿವವರಿಗೂ 200 ರೂ. ಸಹಾಯಧನ ನೀಡಲಾಗುತ್ತಿದೆ. ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಮಾನ್ಯತೆ ಪಡೆದ ರಾಷ್ಟ್ರೀಯ ಕ್ರೀಡಾ ಫೆಡರೇಷನ್ ಗಳಿಗೆ ಭಾರತ ಸರ್ಕಾರ ಅನುದಾನ ಒದಗಿಸುತ್ತಿದೆ. ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ವಿಜೇತರಾದ ಕರ್ನಾಟಕದ ಕ್ರೀಡಾಪಟುಗಳಿಗೆ ನಗದು ಬಹುಮಾನ ಗರಿಷ್ಟ 5000 ರೂ. ಮಿತಿಗೆ ಒಳಪಟ್ಟು ಶೈಕ್ಷಣಿಕ ಶುಲ್ಕ ಮರುಪಾವತಿ ರೂಪದಲ್ಲಿ ಪ್ರೋತ್ಸಾಹಧನ ನೀಡಲಾಗುತ್ತಿದೆ ಹಾಗೂ ಹೆಚ್ಚುವರಿಯಾಗಿ ಇಲಾಖೆಯ ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿ/ತರಬೇತುದಾರರಿಗೆ ವಿಶೇಷ ನಗದು ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದರು.
ಕ್ರೀಡಾಪಟುಗಳಿಗೆ ಉತ್ತಮ ಪ್ರಯಾಣ ಭತ್ಯೆ ಸೇರಿದಂತೆ ಸಹಾಯಧನ ಹೆಚ್ಚಿಸಿದಲ್ಲಿ ನಮ್ಮ ರಾಜ್ಯದ ಮಕ್ಕಳು ಕ್ರೀಡೆಯಲ್ಲಿ ಇನ್ನಷ್ಟು ಸಾಧನೆ ಮಾಡಿ ಹೆಚ್ಚು ಹೆಚ್ಚು ಪದಕ ಗಳಿಸಲು ಸಾಧ್ಯವಾಗಲಿದೆ ಎಂದು ಶಾಸಕ ಭರತ್ ಶೆಟ್ಟಿ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳಿಗೆ ನೀಡಲಾಗುತ್ತಿರುವ ಭತ್ಯೆ ಹಾಗೂ ಸಹಾಯಧನ ಐದು ವರ್ಷಗಳ ಹಿಂದೆ ನಿಗದಿ ಮಾಡಿದ್ದು, ಈವರೆಗೆ ಪರಿಷ್ಕರಣೆಗೊಂಡಿಲ್ಲ ಹೀಗಾಗಿ ಈ ಬಾರಿ ಕ್ರೀಡಾಪಟುಗಳ ಭತ್ಯೆ ಹಾಗೂ ಸಹಾಯಧನ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
Key words: revise, Assistance, athletes, CM Siddaramaiah