ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿನ 2011ರ ವೃಂದ ಮತ್ತು ನೇಮಕಾತಿ ನಿಯಮಗಳ ಸಮಗ್ರ ಪರಿಷ್ಕರಣೆಗೆ ಕ್ರಮ- ಸಚಿವ ಕೃಷ್ಣಭೈರೇಗೌಡ

ಬೆಳಗಾವಿ ಡಿಸೆಂಬರ್,18,2024 (www.justkannada.in): ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮ ಪರಿಷ್ಕರಣೆ ವಿಷಯವು ವಿಧಾನ ಪರಿಷತ್ತನಲ್ಲಿ ಡಿ.18ರಂದು ಚರ್ಚೆಗೆ ಬಂದಿತು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ 2011ರಲ್ಲಿ ರಚನೆಯಾದ ವೃಂದ ಮತ್ತು ನೇಮಕಾತಿ ನಿಯಮದ ಆಧಾರದ ಮೇಲೆ ನಿಗದಿಪಡಿಸಿದ ಹುದ್ದೆಗಳಿಗೆ ಮಾತ್ರ 2022ರಲ್ಲಿ ಮುಂಬಡ್ತಿ ನೀಡಲಾಗಿದ್ದು, 2016ರಲ್ಲಿ ನೇಮಕಗೊಂಡ ಪ್ರಥಮ ದರ್ಜೆ ಸಹಾಯಕರಿಗೆ, ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ಬಡ್ತಿ ನೀಡಲು  ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸಲು ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಮತ್ತು ಡಿ.ಎಸ್.ಅರುಣ್ ಅವರು ಪ್ರಶ್ನೋತ್ತರ ವೇಳೆ ವಿಷಯ ಪ್ರಸ್ತಾಪಿಸಿದರು.

ಇದಕ್ಕೆ ವಸತಿ, ವಕ್ಪ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಅವರ ಪರವಾಗಿ ಸಚಿವರಾದ ಕೃಷ್ಣ ಭೈರೇಗೌಡ ಅವರು ಪ್ರತಿಕ್ರಿಯಿಸಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಪ್ರಸ್ತುತ 2011ರ ವೃಂದ ಮತ್ತು ನೇಮಕಾತಿ ನಿಯಮಗಳು ಚಾಲ್ತಿಯಲ್ಲಿದ್ದು, ಈ ನಿಯಮಗಳಂತೆ ಅರ್ಹ ಸಿಬ್ಬಂದಿಗಳಿಗೆ ಮುಂಬಡ್ತಿ ನೀಡಲಾಗಿದೆ. ಈ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಪರಿಷ್ಕೃತ ಕರಡು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಪ್ರಥಮ ದರ್ಜೆ ಸಹಾಯಕರುಗಳಿಗೆ, ಶಿಕ್ಷಕರಿಗೆ, ಉಪನ್ಯಾಸಕರಿಗೆ ನಿಯಮಾನುಸಾರ ಬಡ್ತಿಗೆ ಅವಕಾಶ ಕಲ್ಪಿಸಲಾಗಿದೆ.

2016ರಲ್ಲಿ ನೇಮಕವಾದ ಪ್ರಥಮ ದರ್ಜೆ ಸಹಾಯಕರುಗಳಿಗೆ, ಈಗಾಗಲೇ ಖಾಲಿ ಇರುವ ಮುಂಬಡ್ತಿ ಹುದ್ದೆಗಳಿಗೆ ನಿಯಮಾನುಸಾರ ಬಡ್ತಿ ನೀಡಲಾಗಿದೆ. ಮುಂದುವರೆದು, ಶಿಕ್ಷಕರು, ಉಪನ್ಯಾಸಕರು ಒಳಗೊಂಡಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಿಬ್ಬಂದಿಗೆ ಮುಂಬಡ್ತಿಗೆ ಪರಿಗಣಿಸುವ ಬಗ್ಗೆ ಪ್ರಸ್ತುತ ಚಾಲ್ತಿಯಲ್ಲಿರುವ 2011ರ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸಮಗ್ರವಾಗಿ ಪರಿಷ್ಕರಿಸಲಾಗುತ್ತಿದೆ.

ಹೆಚ್ಚು ಸೇವೆ ಸಲ್ಲಿಸಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ಪ್ರಥಮ ದರ್ಜೆ ಸಹಾಯಕರುಗಳಿಗೆ, ಶಿಕ್ಷಕರಿಗೆ, ಉಪನ್ಯಾಸಕರಿಗೆ ಮುಂಬಡ್ತಿ ಬಗ್ಗೆ ಗಮನ ಹರಿಸಿ ಪ್ರಥಮ ದರ್ಜೆ ಸಹಾಯಕರುಗಳಿಗೆ ಈಗಾಗಲೇ ಖಾಲಿ ಇರುವ ಮುಂಬಡ್ತಿ ಹುದ್ದೆಗಳಿಗೆ ನಿಯಮಾನುಸಾರ ಬಡ್ತಿ ನೀಡಲಾಗಿದೆ. ವೃಂದ ಮತ್ತು ನೇಮಕಾತಿ ನಿಯಮಗಳ  ತಿದ್ದುಪಡಿಗೆ ಸಂಬಂಧಿಸಿದಂತೆ ಗಮನ ಹರಿಸಿದ್ದು,  ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸುವಾಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ನಿಯಮಗಳನ್ನು ಪಾಲಿಸಲಾಗಿದೆ. ಶಿಕ್ಷಕರು, ಉಪನ್ಯಾಸಕರು ಒಳಗೊಂಡಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಿಗೆ ಮುಂಬಡ್ತಿಗೆ ಪರಿಗಣಿಸುವುದು ಒಳಗೊಂಡಂತೆ ಪ್ರಸ್ತುತ ಚಾಲ್ತಿಯಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 2011ರ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸಮಗ್ರವಾಗಿ ಪರಿಷ್ಕರಿಸುವ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯ ಸಹಮತಿಗಾಗಿ ಕಳುಹಿಸಲಾಗಿದ್ದು, ಪರಿಶೀಲನೆಯಲ್ಲಿದೆ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

Key words: Minority Welfare Department, Minister, Krishna Bhairegowda