ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಖಾಸಗಿ ಪಿಎ ಸೇರಿ 30 ಮಂದಿ ಪೊಲೀಸರ ವಶಕ್ಕೆ

ಬೆಳಗಾವಿ,ಡಿಸೆಂಬರ್,19,2024 (www.justkannada.in):  ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ  ಎಂಎಲ್ ಸಿ  ಸಿಟಿ ರವಿ ಅವರು ಆಕ್ಷೇಪಾರ್ಹ  ಪದ ಬಳಕೆ ಮಾಡಿರುವ ಆರೋಪ ಸಂಬಂಧ ಸಿ.ಟಿ ರವಿ ಮೇಲೆ ಲಕ್ಷ್ಮೀ ಹೆಬ್ಬಾಳ್ಕರ್ ಖಾಸಗಿ ಪಿಎ ಸಂಗನಗೌಡ ಸೇರಿ ಹಲವರು ಹಲ್ಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸುವರ್ಣ ಸೌಧದ ವಿಧಾನಸಭೆ ಪಡಸಾಲೆಯಲ್ಲಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಖಾಸಗಿ ಪಿಎ ಸಂಗನಗೌಡ ಸೇರಿ ಬೆಂಬಲಿಗರು ಸಿಟಿ ರವಿ ಮೇಲೆ ಹಲ್ಲೆಗೆ ಯತ್ನಿಸಿದ್ದು ಈ ವೇಳೆ ತಡೆಯಲು ಮುಂದಾದ ಮಾರ್ಷೆಲ್ ಹಾಗೂ ಬೆಂಬಲಗರ ನಡುವೆ ನೂಕಾಟ ತಳ್ಳಾಟ ನಡೆದಿದೆ.

ಲಕ್ಷ್ಮಿ ಹೆಬ್ಬಾಳ್ಕರ್ ಖಾಸಗಿ ಪಿಎ ಸಂಗನಗೌಡ, ಗೇಟ್ ಬಳಿ ಕೋಟ್ ಬಿಚ್ಚಿದು ಸಿಟಿ ರವಿ ವಿರುದ್ಧ ನಿಂದನೆ ಮಾಡಿದರು. ಗೇಟ್ ತಳ್ಳಿ ಒಳನುಗ್ಗಲು ಖಾಸಗಿ ಪಿಎ ಸಂಗನಗೌಡ ಯತ್ನಿಸಿದ್ದು, ಈ ವೇಳೆ ತಡೆಯಲು ಯತ್ನಿಸಿದ ಮಾರ್ಷಲ್ ಗಳ ಜೊತೆಗೂ ಕೂಡ ತಳ್ಳಟ, ನೂಕಾಟ ನಡೆದಿದೆ.

ಇದೀಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಖಾಸಗಿ ಪಿಎ ಸಂಗನಗೌಡ ಸೇರಿ 30 ಮಂದಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಸುವರ್ಣಸೌಧದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ.

Key words: attack, CT Ravi, Minister Lakshmi Hebbalkar, Supporters