ಕತ್ತಲು- ಬೆಳಕಿನ ‘ಭೇಟಿ’

ಮೈಸೂರು,ಡಿಸೆಂಬರ್,23,2024 (www,justkannada.in): ‘ಭೇಟಿ’ ಎನ್ನುವುದು ಕೇವಲ ಎರಡಕ್ಷರ ಎಂದುಕೊಳ್ಳಬಹುದು. ಆದರೆ ಅದಕ್ಕೆ ಹಿಂದೆ-ಮುಂದೆ ವ್ಯಕ್ತಿ, ವಯಸ್ಸು,ಪರಿಸ್ಥಿತಿ, ಸಂದರ್ಭ, ಪರಿಸರ, ವಾತಾವರಣ, ಸಮಯ,ಕಾಲ,ಗಳಿಗೆ, ಹೊತ್ತು,ಜಾಗ ಮುಂತಾದವುಗಳು ಸೇರಿದರೆ ಬೇರೆ-ಬೇರೆ ಆಯಾಮ ಪಡೆದುಕೊಳ್ಳುತ್ತದೆ. ಇದೊಂತರ ಗೋಳದಂತೆ,ಸುತ್ತುಹಾಕಿ ಮತ್ತೆ ಯಥಾಸ್ಥಾನಕ್ಕೆ ಮರಳುವುದು. ಅಷ್ಟೊತ್ತಿಗೆ ಬದಲಾವಣೆ ಕಾಮನಬಿಲ್ಲಿನ ಬಣ್ಣ ಪಡೆದುಕೊಂಡಿರುತ್ತದೆ.

ಇಂತಹ ಹಿನ್ನೆಲೆಯನ್ನು ಇಟ್ಟುಕೊಂಡು ಸಾಂಸ್ಕೃತಿಕ ನಗರಿ ಮೈಸೂರಿನ ನಾಲ್ಕು ಮಂದಿ ‘ಭೇಟಿ’ ಎಂಬ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ಒಂದೆರಡು ಪೇಜಿನಲ್ಲಿ ಕಥೆಯನ್ನು ಹಿಡಿದಿಟ್ಟು, ಜೀವನ ಪೂರ್ತಾ ಅದರ ಗುಂಗಿನಲ್ಲೇ ಇರುವಂತೆ ಮಾಡಿದ ಸಣ್ಣ ಕಥೆಗಳ ಸರದಾರ ಎನ್ನಬಹುದಾದ ಓ ಹೆನ್ರಿ ಯ ‘ಆಫ್ಟರ್ 20 ಇಯರ್ಸ್’ ಎನ್ನುವ ಸಣ್ಣಕಥೆ ಆಧರಿಸಿ ಎಂಟು ನಿಮಿಷದ ಅವಧಿಯ ಈ ಕಿರುಚಿತ್ರ ತಯಾರು ಮಾಡಿದ್ದಾರೆ.

ರಾತ್ರಿಯ ಗಾಢ ಕತ್ತಲಲ್ಲಿ ರೈಲಿನ ಹೆಡ್ ಲೈಟ್, ಸಿಗರೇಟ್ ಹಚ್ಚಲು ಬಳಸುವ ಲೈಟರ್, ಬೈಕಿನ ಲೈಟ್ ಗಳ ಬೆಳಕಿನಲ್ಲೇ ಮುಖ ಭಾವನೆಯನ್ನು ಸ್ಪುಟವಾಗಿ ಕಾಣುವಂತೆ ಮಾಡಿರುವ ತಂತ್ರಗಾರಿಕೆ  ಮನುಷ್ಯನ ‘ತಮಸ್ಸು’ಗೆ ಬೆಳಕು ಹಿಡಿದಂತೆ ಇದೆ.

ಒಟ್ಟಿನಲ್ಲಿ ಸೋಶಿಯಲ್ ಮಿಡಿಯಾದ ಕಲರ್ ಫುಲ್ ಫ್ಲಾಟ್ಪಾರ್ಂಗಳಲ್ಲಿ ಅಸಭ್ಯ,ಬುದ್ಧಿಹೀನ ಸಂಗತಿಗಳೇ ತುಂಬಿಕೊಂಡಿರುವ ಈ ಕಾಲಘಟ್ಟದಲ್ಲಿ ಬ್ಲ್ಯಾಕ್ ಆ್ಯಂಡ್ ವೈಟ್ ನಲ್ಲಿ ಬದುಕಿನ ಗಾಢ ಸತ್ಯವನ್ನು ಹೇಳಿರುವ ಭೇಟಿ ಯಂತಹ ಕಿರುಚಿತ್ರಗಳು ‘ಆ್ಯಂಟಿ ವೈರಸ್’ ರೀತಿ ಕೆಲಸ ಮಾಡುವುದರಲ್ಲಿ ಸಂದೇಹವೇ ಇಲ್ಲ. ಆದರೆ ಇಂತಹ ಸೋಶಿಯಲ್ ಸಾಫ್ಟ್‌ ವೇರ್ ಪ್ರೋಗ್ರಾಂ ಬರೆಯುವ ಕಲಾವಿದ ಎಂಜಿನಿಯರ್ ಗಳಿಗೆ ಪ್ರೋತ್ಸಾಹ ನೀಡಬೇಕಾಗಿರುವುದು ಸ್ವಸ್ಥ ಸಮಾಜದ ಆಶಯವನ್ನು ಹೊತ್ತಿರುವ ನಾಗರಿಕರು.

ಅಂದಹಾಗೆ ಈ ಕಿರುಚಿತ್ರ ಈಗಾಗಲೇ 5 ಸಾವಿರ ವಿವ್ಯೂಸ್ ಮುಟ್ಟಿದೆ. ಐದರ ಮುಂದೆ ಇರುವ ಮೂರು ಸೊನ್ನೆಗಳು ಆರಾಗಲಿ, ಆರು  ಒಂಭತ್ತಾಗಲಿ. ಮುಂದೆ ಇಂತಹ ಗಟ್ಟಿ ಕಥೆಗಳು ತೆರೆಯ ಮೇಲೆ ನೂರಾರು ಬರಲಿ. ಸದಾಭಿರುಚಿಯ ಸಾಹಸವನ್ನು ಮಾಡಿರುವ ರಾಜೇಶ್ ಬಸವಣ್ಣ, ವಿಶ್ವಾಸ್ ಕೃಷ್ಣ, ರವಿಪ್ರಸಾದ್, ಅರುಣ್ ಅವರಿಗೆ ಒಂದು ಸಲಾಂ.

Key words: Darkness, and, light, ‘meeting’