ಮೈಸೂರು,ಡಿಸೆಂಬರ್,23,2024 (www.justkannada.in): ರೈತರಿಗೆ ಬರುತ್ತಿದ್ದ ಹಲವಾರು ಯೋಜನೆಗಳನ್ನು ಸರ್ಕಾರ ನಿಲ್ಲಿಸಿದೆ. ಅಧಿಕಾರಕ್ಕೆ ಬರುವ ಮೊದಲು ಹಲವಾರು ಆಶ್ವಾಸನೆ ಕೊಟ್ಟಿದ್ರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಿಲ್ಲ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.
ವಿಶ್ವ ರೈತ ದಿನಾಚರಣೆ ಪ್ರಯುಕ್ತ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ನಗರದ ಕೆಎಸ್ಒಯುನ ಘಟಿಕೋತ್ಸವ ಭವನದಲ್ಲಿ ರಾಜ್ಯ ಮಟ್ಟದ ರೈತ ದಿನಾಚರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಪಿಪಿ ಪಕ್ಷ ರಾಜ್ಯಾಧ್ಯಕ್ಷ,ನಟ ಮುಖ್ಯಮಂತ್ರಿ ಚಂದ್ರು, ತಮಿಳುನಾಡಿನ ರೈತ ಮುಖಂಡ ಆರ್.ಪಿ ಪಾಂಡೇನ್, ತೆಲಂಗಾಣ ರೈತ ಮುಖಂಡ ವೆಂಕಟೇಶ್, ರೈತ ಮುಖಂಡ ಕುರುಬೂರು ಶಾಂತಕುಮಾರ್, ಮಹಿಳಾ ರೈತ ಮುಖಂಡೆ ಲಕ್ಷ್ಮಿ, ಸೇರಿದಂತೆ ಹಲವರು ರೈತ ಮುಖಂಡರು ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಯ ನೂರಾರು ರೈತರು ಭಾಗಿಯಾಗಿದ್ದರು. ರೈತ ಗೀತೆ ಹಾಡಿ ಗಿಡಕ್ಕೆ ನೀರೆಯುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುರುಬೂರು ಶಾಂತಕುಮಾರ್. ರೈತರ ಸಮಸ್ಯೆಗಳು,ಪರಿಹಾರ ಮುಂತಾದ ವಿಚಾರ ಕುರಿತು ವಿಸ್ತೃತ ಚರ್ಚೆನಡೆಸಿದರು.
ಈ ವೇಳೆ ಮಾತನಾಡಿದ ಕುರುಬೂರು ಶಾಂತಕುಮಾರ್, ರೈತರ ಮೇಲೆ ಸರ್ಕಾರಗಳು ದಬ್ಬಾಳಿಕೆ ಮಾಡುತ್ತಾ ಬಂದಿವೆ. ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ರೈತರ ಸಮಸ್ಯೆಗಳನ್ನ ಬಗೆ ಹರಿಸಲು ಆಗಲೇ ಇಲ್ಲ. ಈಗ ನಮ್ಮ ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿ ಬೇರೆ ದೇಶಗಳಿಗೂ ಧಾನ ಮಾಡುತ್ತಿದೆ. ಇವತ್ತಿನ ರೈತ ಜೀವ ಸಂಕಷ್ಟದಲ್ಲಿದೆ. ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ. ಆ ಪರಿಸ್ಥಿತಿ ಈಗ ನಿರ್ಮಾಣ ಆಗಿದೆ. ಸರ್ಕಾರಿ ನೌಕರರಿಗೆ ಪ್ರತಿ ವರ್ಷ ಭತ್ಯ ಏರಿಕೆ ಮಾಡುತ್ತಾರೆ. ಆದರೆ ರೈತರ ಬೆಳೆಗಳಿಗೆ ಮಾತ್ರ ಬೆಲೆ ಏರಿಕೆ ಮಾಡಲ್ಲ. ಒಂದು ಚಪ್ಪಲಿಗೂ ಒಂದು ನಿಗದಿತ ಬೆಲೆ ಇದೆ. ನಮ್ಮ ರೈತ ಬೆಳೆದ ಬೆಳೆಗೆ ಮಾತ್ರ ನಿಗದಿತ ಬೆಲೆ ಮಾತ್ರ ನಿಗದಿ ಇಲ್ಲ ಎಂದು ಕಿಡಿಕಾರಿದರು.
ದೇಶದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕನಿಷ್ಠ ಬೆಂಬಲ ಬೆಲೆ ಖಾತರಿಯಾಗಲು ದೇಶಾದ್ಯಂತ ಹೋರಾಟ ನಡೆಯುತ್ತಿದೆ. ದೆಹಲಿಯಲ್ಲಿ ನಿರಂತರ ಹೋರಾಟ ನಡೆಯುತ್ತಿದೆ. ದಲೈವಾಲ ಕಳೆದ 24 ದಿನಗಳಿಂದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಮಾಡುತ್ತಿದ್ದಾರೆ. ದೇಶದ ಎಲ್ಲಾ ರೈತರ ಪರ ಅವರು ಹೋರಾಟ ಮಾಡುತ್ತಿದ್ದಾರೆ. 1980 ರಲ್ಲಿ ಎಂ.ಡಿ ನಂಜುಂಡಸ್ವಾಮಿ ಅವರು ರೈತ ಸಂಘಟನೆಯನ್ನ ಕಟ್ಟಿದ್ರು. ಅವರ ಜೊತೆಗೆ ಹಲವಾರು ಮುಖಂಡರು ಸೇರಿ ರೈತರಿಗೆ ಒಂದು ಶಕ್ತಿ ತುಂಬುವ ಕೆಲಸ ಮಾಡಿದ್ರು. ಇಂದು ಭತ್ತದ ಬೆಲೆ ಕುಸಿತ ಆಗಿದೆ ಅದಕ್ಕೆ ಬೆಂಬಲ ಬೆಲೆ ನಿಗದಿ ಮಾಡಿಲ್ಲ ಎಂದು ಕುರುಬೂರು ಶಾಂತಕುಮಾರ್ ವಾಗ್ದಾಳಿ ನಡೆಸಿದರು.
Key words: Kuruburu Shanthakumar, Farmers’ Day, mysore