9823.21 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ- ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಡಿಸೆಂಬರ್ 23,2024 (www.justkannada.in): ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 64 ನೇ ಸಭೆಯಲ್ಲಿ ಒಟ್ಟು 9823.31 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಿದ್ದು , ಸುಮಾರು 5605 ಜನರಿಗೆ ಉದ್ಯೋಗ ಲಭ್ಯವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 64 ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದಿನ ಸಭೆಯಲ್ಲಿ   ಮೂರು ಹೊಸ/ ವಿಸ್ತರಣಾ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು ಹಾಗೂ ಆರು ಹೆಚ್ಚುವರಿ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು ಸೇರಿದಂತೆ ಒಟ್ಟು 9  ಯೋಜನಾ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಮೆ.ಡಿ.ಎನ್ ಸಲ್ಯೂಷನ್ಸ್ ಇಂಡಿಯಾ ಪ್ರೈ.ಲಿ ಸಂಸ್ಥೆಯ 998 ಕೋಟಿ ರೂ.ಗಳ ಹೊಸ ಬಂಡವಾಳ ಹೂಡಿಕೆಯ ಯೋಜನೆಯಿಂದ 467 ಉದ್ಯೋಗ , ಮೆ. ಸೈಲೆಕ್ಟ್ರಿಕ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಷರಿಂಗ್ ಪ್ರೈ.ಲಿ ಸಂಸ್ಥೆ ಯ 3425.60 ಕೋಟಿ ರೂ.  ಹೂಡಿಕೆಯಿಂದ 460 ಉದ್ಯೋಗ  ಹಾಗೂ ಮೆ: ಸನ್ಸೆರಾ ಇಂಜಿನಿಯರಿಂಗ್ ಲಿಮಿಟೆಡ್ ಸಂಸ್ಥೆಯ 2150 ಕೋಟಿ ರೂ. ಹೂಡಿಕೆಯಿಂದ 3500 ಉದ್ಯೋಗ ಸೃಷ್ಠಿಯಾಗುತ್ತಿರುವುದಾಗಿ ತಿಳಿಸಿದರು.

ರಾಜ್ಯದ ವಿವಿಧ ಕೈಗಾರಿಕಾ ವಲಯಗಳಲ್ಲಿ ಒಟ್ಟು ರೂ. 9,823 ಕೋಟಿ ಮೊತ್ತದ 9 ಪ್ರಸ್ತಾವನೆಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.  ಕೋಚನಹಳ್ಳಿಯ ಎಲೆಕ್ಟ್ರಾನಿಕ್ಸ್‌ ಮ್ಯಾನುಫಾಕ್ಚರಿಂಗ್‌ ಕ್ಲಸ್ಟರ್‌ ನಲ್ಲಿ ಸೆಮಿಕಂಡಕ್ಟರ್‌ ವಲಯದಲ್ಲಿ ರೂ. 3425 ಕೋಟಿ ವೆಚ್ಚದ ಪ್ರಥಮ ಯೋಜನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಸಕ್ಕರೆ ಕಾರ್ಖಾನೆಗಳು ಉಪ ಉತ್ಪನ್ನಗಳ ಉತ್ಪಾದನೆ ಸಂದರ್ಭದಲ್ಲಿ ರೈತರಿಗೂ ಲಾಭಾಂಶದಲ್ಲಿ ಪಾಲು ನೀಡುವ ಕುರಿತು ಪರಿಶೀಲನೆ ನಡೆಸಬೇಕು.  ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಈ ಕುರಿತು ಅನುಸರಿಸುತ್ತಿರುವ ನಿಯಮಗಳನ್ನು ಪರಿಶೀಲಿಸಲು ಸೂಚನೆ ನೀಡಿದರು.

ಕೆಐಎಡಿಬಿಯಿಂದ ಕೈಗಾರಿಕೆಗಳನ್ನು ಆರಂಭಿಸಲು ಜಮೀನು ಪಡೆಯುವ ಕಂಪೆನಿಗಳು ನಿಗದಿತ ಅವಧಿಯಲ್ಲಿ ಕೈಗಾರಿಕೆಯನ್ನು ಆರಂಭಿಸದಿದ್ದರೆ ದಂಡ ವಿಧಿಸುವುದು ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಪರಿಶೀಲನೆ ನಡೆಸಬೇಕು. ಸರ್ಕಾರದ ನಿಯಮಾವಳಿಗೆ ಅನುಸಾರವಾಗಿ ಕೈಗಾರಿಕೆಗಳು ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸಲು  ಸಿಎಂ ಸಿದ್ದರಾಮಯ್ಯ ಅವರು ಸೂಚಿಸಿದರು.

Key words: investment, projects,Rs. 9823.21 crore, CM Siddaramaiah