ಅಯ್ಯಪ್ಪ ಮಾಲಾಧಾರಿಗಳ ಘಟನೆ ಬಗ್ಗೆ ವಿಷಾದ : ಪರಿಹಾರ ನೀಡಲು ಎಲ್ಲ ಪ್ರಯತ್ನ- ಗೃಹ ಸಚಿವ ಪರಮೇಶ್ವರ್

ಹುಬ್ಬಳ್ಳಿ,ಡಿಸೆಂಬರ್,24,2024 (www.justkannada.in): ಸಿಲಿಂಡರ್ ಸ್ಪೋಟದಿಂದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಗಂಭೀರ ಗಾಯಗೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಅಯ್ಯಪ್ಪ ಮಾಲಾಧಾರಿಗಳ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ. ಘಟನೆಯಲ್ಲಿ ಗಾಯಗೊಂಡವರಿಗೆ ಪರಿಹಾರ ನೀಡಲು ಎಲ್ಲ ಪ್ರಯತ್ನ ಮಾಡುತ್ತೇನೆ ಎಂದರು.

ಇಂದು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್,  9 ಜನರಲ್ಲಿ ಬಹುತೇಕರಿಗೆ 80 ರಿಂದ 90 ಶೇಕಡ ಸುಟ್ಟ ಗಾಯವಾಗಿವೆ. ವೈದ್ಯರು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ವೈದ್ಯರಿಗೆ ನಿರ್ಲಕ್ಷ್ಯ ಮಾಡದಂತೆ ಸೂಚನೆ ಕೊಟ್ಟಿದ್ದೇವೆ. 20 ರಷ್ಟು ಸುಟ್ಟಗಾಯವಾಗಿರೋ ವಿನಾಯಕ್ ಮೇಲೆ ನಿಗಾ ಇಡಲು ಸೂಚನೆ ನೀಡಲಾಗಿದೆ. ಉಳಿದವರನ್ನ ಕ್ರಿಟಿಕಲ್ ಅಂತಾ ಹೇಳುತ್ತಿದ್ದಾರೆ, ಕಾಯ್ದು ನೋಡಬೇಕಾಗಿದೆ. ಗಾಯಾಳುಗಳನ್ನ ಬರ್ನಿಂಗ್ ವಾರ್ಡ್ ಗೆ ಶಿಫ್ಟ್ ಮಾಡಲು ಸೂಚನೆ ನೀಡಲಾಗಿದೆ. ಅವರನ್ನು ಉಳಿಸೋ ಪ್ರಯತ್ನ ಮಾಡಬೇಕಿದೆ. ಆಮೇಲೆ ಪರಿಹಾರದ ಯೋಚನೆ ಮಾಡೋಣ ಎಂದರು.

ಇದೊಂದು ವಿಶೇಷ ಕೇಸ್ ಎಂದು ಪರಿಗಣಿಸಿ, ಮುಖ್ಯಮಂತ್ರಿಗಳ ಪರಿಹಾರದ ನಿಧಿಯಿಂದ ಪರಿಹಾರ ಘೋಷಣೆ ಮಾಡಲಾಗುವುದು. ಇವತ್ತೇ ಡಿಸಿ ಅವರು ವರದಿ ಸಲ್ಲಿಸುತ್ತಾರೆ. ಪರಿಹಾರ ನೀಡಲು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.

ಕಿಮ್ಸ್ ನಲ್ಲಿ ನಿರ್ಲಕ್ಷ್ಯ ಆಗಿರೋ ಮಾಹಿತಿ ಇದೆ. ಅದನ್ನು ಆಂತರಿಕ ವಿಚಾರಣೆ ಮಾಡುತ್ತೇವೆ. ಆಗಿರುವ ತಪ್ಪುಗಳ ಬಗ್ಗೆ ವಿಚಾರಣೆ ಮಾಡುತ್ತೇವೆ. ಇದೀಗ ನಿರ್ಲಕ್ಷ್ಯದ ಫೋಸ್ಟ್ ಮಾರ್ಟಂ ಕ್ಕಿಂತ ಅವರ ಆರೋಗ್ಯ ಮುಖ್ಯ ಎಂದರು.

ಕಿಮ್ಸ್ ಗೆ ಪರ್ಮನೆಂಟ್ ನಿರ್ದೇಶಕರ ನೇಮಕಕ್ಕೆ ಕ್ರಮ- ಸಚಿವ ಸಂತೋಷ್ ಲಾಡ್

ಇನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ಕಿಮ್ಸ್ ಗೆ ಪರ್ಮನೆಂಟ್ ನಿರ್ದೇಶಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ನಿರ್ಲಕ್ಷ್ಯ ಆರೋಪ‌ ಮಾಡೋದು ಸರಿ ಇದೆ. ಅದರ ಜೊತೆಗೆ ಪಾಸಿಟಿವ್ ಕೂಡಾ ನೋಡಬೇಕು. ದಿನಕ್ಕೆ 2500 ರೋಗಿಗಳು ಬರುತ್ತಾರೆ.  ಏಳು ಜಿಲ್ಲೆಗಳಿಂದ ರೋಗಿಗಳು ಬರುತ್ತಾರೆ. ಕಿಮ್ಸ್ ಒಳ್ಳೆ ಕೆಲಸ ಮಾಡತೀದೆ. ಅಂದುಕೊಂಡಷ್ಟು ನೆಗೆಟಿವ್ ಇಲ್ಲ, ಪಾಸಿಟಿವ್ ಕೂಡಾ ಇದೆ. ನಿರ್ಲಕ್ಷ್ಯವೂ ನಿಜ ,ಯಾರೇ ತಪ್ಪು ಮಾಡಿದ್ರೂ ಕ್ರಮ ಕೈಗೊಳ್ಳುತ್ತೇವೆ ಎಂದರು.

ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 9 ಮಂದಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಸಾಯಿನಗರದ ಅಚ್ಚವ್ವನ ಕಾಲೊನಿಯ ಈಶ್ವರ ದೇವಸ್ಥಾನದಲ್ಲಿ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು 9 ಅಯ್ಯಪ್ಪ ಮಾಲಾಧಾರಿಗಳು ತೀವ್ರ ಗಾಯಗೊಂಡಿದ್ದರು. ಗಾಯಾಳುಗಳನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Key words: Ayyappa Maladhari, Cylinder blast, Home Minister, Parameshwar