ಮೈಸೂರು, ಡಿಸೆಂಬರ್ 24,2024 (www.justkannada.in): ಮೈಸೂರಿನ ಪ್ರಮುಖ ರಸ್ತೆಯೊಂದಕ್ಕೆ ಸಿಎಂ ಸಿದ್ದರಾಮಯ್ಯ ಹೆಸರಿಡಲು ಮೈಸೂರು ನಗರ ಪಾಲಿಕೆ ಮುಂದಾಗಿದ್ದು, ಇದಕ್ಕೆ ಪರ-ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಪರ ಮಾಜಿ ಸಂಸದ ಪ್ರತಾಪ್ ಸಿಂಹ ಬ್ಯಾಟ್ ಬೀಸಿದ್ದಾರೆ.
ಈ ಕುರಿತು ಮಾತನಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಮೈಸೂರಿನ ಸುಪುತ್ರ. ಎರಡು ಬಾರಿ ಸಿಎಂ ಆಗಿದ್ದಾರೆ. ಮೈಸೂರಿಗೆ ಶಾಶ್ವತ ಕೊಡುಗೆ ನೀಡಿದ್ದಾರೆ. ಅವರ ಹೆಸರಿಡುವುದು ತಪ್ಪಲ್ಲ. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೀಮಿತ ಮಾಡಬಾರದು. ಇದಕ್ಕೆ ವಿರೋಧ ಮಾಡುವುದು ಮೊಸರಲ್ಲಿ ಕಲ್ಲು ಹುಡುಕಿದಂತೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಹೆಸರಿಡುವ ಪ್ರಸ್ತಾವನೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನವರು ಯಾರೂ ವಿರೋಧ ಮಾಡಬಾರದು. ಕವಿಗಳು, ಸಾಧಕರ ಹೆಸರು ಇಡುವುದು ವಾಡಿಕೆ. ಮೈಸೂರಿಗೆ ಆಶ್ರಯದಾತರಾಗಿ ಬಂದವರು ಚಾಮರಾಜ ಒಡೆಯರ್, ಕೃಷ್ಣರಾಜ ಒಡೆಯರ್ ಅವರ ಹೆಸರು ಇಟ್ಟಿದ್ದರು. ದಿವಾನರ ಹೆಸರುಗಳನ್ನು ಇಟ್ಟಿದ್ದಾರೆ. ನಾನು ಸೈದ್ಧಾಂತಿಕವಾಗಿ ಇವತ್ತು ಸಿದ್ದರಾಮಯ್ಯ ಅವರನ್ನು ವಿರೋಧಿಸುತ್ತೇನೆ. ಆದರೆ, ಮೈಸೂರಿಗೆ ಸಿದ್ದರಾಮಯ್ಯನವರ ಕೊಡುಗೆ ಇದೆ. ಜಯದೇವ ಅಸ್ಪತ್ರೆ ಕಟ್ಟಲು ಮಾಜಿ ಶಾಸಕ ವಾಸಣ್ಣ ಹಾಗೂ ಸಿದ್ದರಾಮಯ್ಯ ನವರ ಕೊಡುಗೆ ದೊಡ್ಡದು. 40 ವರ್ಷದಿಂದ ರಾಜಕಾರಣದಲ್ಲಿ ಇದ್ದಾರೆ. ಸಾಧಕರನ್ನು ಗುರುತಿಸುವ ವಿಚಾರದಲ್ಲಿ ಪಕ್ಷ ಭೇದ ಬೇಡ. ಸಾಧನೆಗೆ ಪಕ್ಷ ತರಬೇಡಿ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.
Key words: Mysore road , CM Siddaramaiah, Pratap Simha